'ಬಹುಮಟ್ಟಿಗೆ ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು': ಡೊನಾಲ್ಡ್ ಟ್ರಂಪ್

ತಮ್ಮ ರಿಪಬ್ಲಿಕನ್ ಪಕ್ಷವು ಮಧ್ಯಂತರ ಚುನಾವಣೆಯಲ್ಲಿ ಭಾರಿ ಸೋಲನುಭವಿಸಲು ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.
Donald Trump
ಡೊನಾಲ್ಡ್ ಟ್ರಂಪ್
Updated on: 

ತಮ್ಮ ರಿಪಬ್ಲಿಕನ್ ಪಕ್ಷವು ಮಧ್ಯಂತರ ಚುನಾವಣೆಯಲ್ಲಿ ಭಾರಿ ಸೋಲನುಭವಿಸಲು ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಜನಪ್ರಿಯತೆ ಕಳೆದುಕೊಂಡಿರುವ ಇರಾನ್ ಸಂಘರ್ಷವು ಚುನಾವಣೆಯ ಮೇಲೆ ಬೀರಿದ ಪರಿಣಾಮದ ಬಗ್ಗೆ ರಿಪಬ್ಲಿಕನ್ನರು 'ಪ್ರಾಮಾಣಿಕವಾಗಿ' ಮಾತನಾಡಬೇಕು ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇರಾನ್ ಯುದ್ಧವೇ 'ನಮ್ಮ ಸೋಲಿಗೆ ಕಾರಣ' ಎಂಬ ವ್ಯಾನ್ಸ್ ಅವರ ಹೇಳಿಕೆಯನ್ನು ಒಪ್ಪುತ್ತೀರಾ ಎಂದು ಶ್ವೇತಭವನದ ಬಾಲ್‌ರೂಂ ನಿರ್ಮಾಣ ಸ್ಥಳದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಅದು ಬಹುಮಟ್ಟಿಗೆ ನಿಜ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅಲ್ಪಾವಧಿಗೆ ಪೆಟ್ರೋಲ್ ಬೆಲೆ ಸ್ವಲ್ಪ ಹೆಚ್ಚಾಗಲು ಈ ಯುದ್ಧ ಕಾರಣವಾಯಿತು ಎಂದು ಹೇಳಿದರು.

ಆದರೆ ಅದೇ ಸಮಯದಲ್ಲಿ, ಮತ್ತೊಮ್ಮೆ ಇಂತಹ ಪರಿಸ್ಥಿತಿ ಎದುರಾದರೂ ನಾನು ಇದೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ದೀರ್ಘಾವಧಿಯಲ್ಲಿ ಇದೊಂದೇ ಪರಿಹಾರ. ಇರಾನ್ ಪರಮಾಣು ಅಸ್ತ್ರ ಹೊಂದಲು ನಾವು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Donald Trump
'ನಾನು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ, ಒಂದು ವೇಳೆ..': ಮಧ್ಯಂತರ ಚುನಾವಣೆ ಫಲಿತಾಂಶ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ಹೀಗಿದೆ..

ಶ್ವೇತಭವನದಲ್ಲಿ ಟ್ರಂಪ್ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ಇರುವ ನಾಯಕ ಎಂದು ಪರಿಗಣಿಸಲಾಗುತ್ತಿರುವ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಅನುಭವಿಸಿದ ಹೀನಾಯ ಸೋಲಿಗೆ ಇರಾನ್ ವಿರುದ್ಧ ಅಧ್ಯಕ್ಷರು ನಡೆಸಿದ ಯುದ್ಧವೇ ಕಾರಣ ಎಂದು ಆರೋಪಿಸಿದ್ದಾರೆ.

ಆರಂಭದಲ್ಲಿ ಅಧ್ಯಕ್ಷರ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಇರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಟ್ರಂಪ್ ಸುದ್ದಿಗಾರರನ್ನು ಕರೆಸಿಕೊಂಡು ಮಾತನಾಡಿದರು. ಈ ವೇಳೆ ಕೆಲವು ಪ್ರಶ್ನೆಗಳಿಗೂ ಉತ್ತರಿಸಿದ ಅವರು, "ನಾನೇನಾದರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಗೆಲ್ಲುತ್ತಿದ್ದೆ" ಎಂದು ಪ್ರತಿಪಾದಿಸಿದರು.

ಮಧ್ಯಂತರ ಚುನಾವಣೆಯಲ್ಲಿ ತಮ್ಮ ರಿಪಬ್ಲಿಕನ್ ಪಕ್ಷ ಹೀನಾಯ ಸೋಲು ಅನುಭವಿಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಟ್ರಂಪ್, ಶ್ವೇತಭವನದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಬಾಲ್‌ರೂಂ ಬಗ್ಗೆ ಸುದೀರ್ಘವಾಗಿ ವಿವರಿಸಿದರು.

ಇದು ಅತಿದೊಡ್ಡ ಬಾಲ್‌ರೂಂಗಳಲ್ಲಿ ಒಂದಾಗಿರುವುದಷ್ಟೇ ಅಲ್ಲ, ಜಗತ್ತಿನಲ್ಲೇ ಅತ್ಯಂತ ಸುಂದರವಾದ ಬಾಲ್‌ರೂಂ ಆಗಿರಲಿದೆ ಎಂದು ನಾನು ಭಾವಿಸುತ್ತೇನೆ ಎಂದರು. ಆದರೆ ಆರಂಭದಲ್ಲಿ ಯುಎಸ್ ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಡೆಮೋಕ್ರಾಟ್ ಪಕ್ಷ ಸಾಧಿಸಿದ ಭರ್ಜರಿ ಗೆಲುವಿನ ಕುರಿತು ಅವರು ಯಾವುದೇ ಪ್ರಸ್ತಾಪ ಮಾಡಲಿಲ್ಲ.

ಇದೇ ವೇಳೆ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಇಸ್ಲಾಮಿಕ್ ಗಣರಾಜ್ಯ ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಹೆಗ್ಸೆತ್ ಅವರನ್ನು ಬದಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ಇಲ್ಲ, ಅವರು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ವರ್ಷ ಯುಎಸ್ ಕಾಂಗ್ರೆಸ್‌ನ ನಿಯಂತ್ರಣ ವಹಿಸಿಕೊಂಡ ಬಳಿಕ ಡೆಮೋಕ್ರಾಟ್ ತಮ್ಮ ಪಕ್ಷ ವಿರುದ್ಧ ಮಹಾಭಿಯೋಗ (ಇಂಪೀಚ್‌ಮೆಂಟ್) ಪ್ರಕ್ರಿಯೆ ಆರಂಭಿಸಿದರೆ, ಅದು ಆ ಪಕ್ಷವನ್ನೇ ನಾಶಪಡಿಸಲಿದೆ ಎಂದರು.

ಮಧ್ಯಂತರ ಚುನಾವಣೆಯಲ್ಲಿ ತಮ್ಮ ರಿಪಬ್ಲಿಕನ್ ಪಕ್ಷ ಭಾರಿ ಸೋಲು ಅನುಭವಿಸಿದ ಮರುದಿನವೇ, ಡೆಮೋಕ್ರಾಟ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ತಮ್ಮ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಟ್ರಂಪ್, ಅವರು ಹಾಗೆ ಮಾಡಿದರೆ ಡೆಮೋಕ್ರಾಟ್ ಪಕ್ಷವೇ ನಾಶವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಅಲ್ಲದೆ, ತಮ್ಮ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಯಾವುದೇ ಕಾರಣವಿಲ್ಲ ಎಂದು ಪ್ರತಿಪಾದಿಸಿದರು.

ಟ್ರಂಪ್ ಸಾಮಾನ್ಯವಾಗಿ ತಮ್ಮ ಹೊರತು ಎಲ್ಲರನ್ನೂ ಸೋಲಿಗೆ ಹೊಣೆ ಮಾಡುತ್ತಾರೆ, ಸಣ್ಣಪುಟ್ಟ ವಿಚಾರಗಳಿಂದ ಹಿಡಿದು ಮಹತ್ವದ ವಿಷಯಗಳವರೆಗೆ, ಅದರಲ್ಲೂ ವಿಶೇಷವಾಗಿ ಚುನಾವಣೆಯಲ್ಲಿ ಸೋಲು ಎದುರಾದಾಗಲೆಲ್ಲ ಜವಾಬ್ದಾರಿಯನ್ನು ಇತರರ ಮೇಲೆ ಹೊರಿಸುವುದು ಟ್ರಂಪ್ ಅವರ ಬಹುಕಾಲದ ಪ್ರವೃತ್ತಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X