ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜಕೀಯ ಅಜ್ಞಾತವಾಸ ಅಂತ್ಯಗೊಳ್ಳಲಿದೆಯೇ? ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ ಅವರು ಡಿಸೆಂಬರ್‌ನಲ್ಲಿ ಸ್ವದೇಶಕ್ಕೆ ಮರಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದ್ದು, ಇದು ದಕ್ಷಿಣ ಏಷ್ಯಾ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಆದರೆ, ಅವರ ವಾಪಸಾತಿ ಅಷ್ಟು ಸುಲಭವಿಲ್ಲ ಎಂಬುದು ಈಗ ಬಹಿರಂಗಗೊಂಡಿದೆ. ನವದೆಹಲಿ ಮತ್ತು ಬಾಂಗ್ಲಾದ ನಡುವೆ ತೆರೆಮರೆಯಲ್ಲಿ ನಡೆದಿರುವ ಮಾತುಕತೆಗಳೇನು? ಹಸೀನಾ ಅವರ ಸುರಕ್ಷತೆ ಹಾಗೂ ನ್ಯಾಯಯುತ ವಿಚಾರಣೆಗೆ ಭಾರತ ಮುಂದಿಟ್ಟಿರುವ ಕಠಿಣ ಷರತ್ತುಗಳೇನು? ಆ ಕುರಿತ ವರದಿ ಇಲ್ಲಿದೆ:
ಭಾರತ ವಿಧಿಸಿರುವ ಎರಡು ಪ್ರಮುಖ ಷರತ್ತು:
ಸೇನೆಯ ಉಸ್ತುವಾರಿಯಲ್ಲಿ ಭದ್ರತೆ: 2024ರ ಆಗಸ್ಟ್‌ನಲ್ಲಿ ಹಸೀನಾ ಅವರು ಬಾಂಗ್ಲಾದೇಶದ ಮಿಲಿಟರಿ ವಿಮಾನದಲ್ಲೇ ಭಾರತಕ್ಕೆ ಬಂದಿಳಿದಿದ್ದರು. ಅದೇ ರೀತಿ ಈಗಲೂ ಬಾಂಗ್ಲಾದೇಶ ಸೇನೆಯೇ ಅವರನ್ನು ಮಿಲಿಟರಿ ವಿಮಾನದ ಮೂಲಕ ಅಥವಾ ನಿಗದಿತ ಗಡಿ ಭಾಗದ ಮೂಲಕ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ಹೊರಬೇಕು ಮತ್ತು ದೇಶಕ್ಕೆ ಮರಳಿದ ಬಳಿಕ ಅವರ ಜೀವಕ್ಕೆ ಯಾವುದೇ ಅಪಾಯವಾಗದಂತೆ ರಕ್ಷಣೆ ನೀಡಬೇಕು.
ಮರಣದಂಡನೆ ವಿರುದ್ಧ ಮೇಲ್ಮನವಿ ಮತ್ತು ಮರುವಿಚಾರಣೆ: 2024ರ ಜುಲೈ ದಂಗೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಸೀನಾ ಅನುಪಸ್ಥಿತಿಯಲ್ಲಿ ವಿಶೇಷ ನ್ಯಾಯಮಂಡಳಿ ವಿಧಿಸಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶ ನೀಡಬೇಕು ಮತ್ತು ಹೊಸದಾಗಿ ನ್ಯಾಯಸಮ್ಮತ ವಿಚಾರಣೆ ನಡೆಸುವ ಭರವಸೆ ನೀಡಬೇಕು.
ಏತನ್ಮಧ್ಯೆ, ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗಲು ನಿರ್ಧರಿಸಿರುವ ಶೇಖ್ ಹಸೀನಾ, ಇತ್ತೀಚೆಗಷ್ಟೇ ಹೊಸ ಬಾಂಗ್ಲಾದೇಶಿ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬಾಂಗ್ಲಾದೇಶ ಸರ್ಕಾರವು ಅವರಿಗೆ ಹೊಸ ಪಾಸ್‌ಪೋರ್ಟ್ ನೀಡಲು ನಿರಾಕರಿಸಿದ್ದು, ಹಸ್ತಾಂತರ ಒಪ್ಪಂದದ ಅಡಿಯಲ್ಲೇ ಅವರನ್ನು ಹಸ್ತಾಂತರಿಸಬೇಕು ಎಂದು ಪಟ್ಟು ಹಿಡಿದಿದೆ.
ಹಾಗಾದ್ರೆ, ಭಾರತಕ್ಕೆ ಎದುರಾಗಿರುವ ರಾಜತಾಂತ್ರಿಕ ಬಿಕ್ಕಟ್ಟೇನು?
ಹಸೀನಾ ಅವರು ದೀರ್ಘಕಾಲ ಭಾರತದಲ್ಲೇ ಉಳಿದಿರುವುದು ದ್ವಿಪಕ್ಷೀಯ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಇಕ್ಕಟ್ಟು ತಂದೊಡ್ಡಿದೆ. ಆದರೆ, ದೀರ್ಘಕಾಲದ ಮಿತ್ರೆಯಾಗಿರುವ ಅವರನ್ನು ಒಬ್ಬ ಕೈದಿಯಂತೆ ಹಸ್ತಾಂತರಿಸಿದರೆ ನೇಪಾಳ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಂತಹ ನೆರೆಯ ರಾಷ್ಟ್ರಗಳ ಮಿತ್ರಪಕ್ಷಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಭಾರತದ ಕಾಳಜಿಯಾಗಿದೆ.