ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳುವ ಯೋಜನೆಯಿದೆ: ಮರಣದಂಡನೆ ಭೀತಿ ನಡುವೆ ಶೇಖ್ ಹಸೀನಾ ಪ್ರತಿಜ್ಞೆ

2024ರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ನಡೆದ ದಮನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರನ್ನು ಮಾನವತೆಯ ವಿರುದ್ಧದ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ.
Sheikh Hasina
ಶೇಖ್ ಹಸೀನಾ
Updated on: 

ಮಾನವತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

2024ರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ನಡೆದ ದಮನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರನ್ನು ಮಾನವತೆಯ ವಿರುದ್ಧದ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ.

ಈ ಬೆಳವಣಿಗೆಗೆಳ ಮಧ್ಯೆ, ಇಂದು ಎಎಫ್‌ಪಿ ಸುದ್ದಿಸಂಸ್ಥೆಗೆ ಇಮೇಲ್ ಮೂಲಕ ನೀಡಿದ ಸಂದರ್ಶನದಲ್ಲಿ 79 ವರ್ಷದ ಹಸೀನಾ, ತಾಯ್ನಾಡಿಗೆ ಮರಳಿದರೆ ಎದುರಾಗಬಹುದಾದ ಅಪಾಯಗಳ ಅರಿವಿದ್ದರೂ ವಾಪಸಾಗುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.

ನಾನು ಮರಳಿದರೆ ಎದುರಾಗಬಹುದಾದ ಅಪಾಯಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಆದರೆ, ನಾನು ನಿರ್ಧಾರ ಕೈಗೊಂಡಿದ್ದೇನೆ. ಸಾವಿನ ಬೆದರಿಕೆಯೂ ನನ್ನನ್ನು ನನ್ನ ತಾಯ್ನಾಡಿನಿಂದ ದೂರವಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಪರಿಣಾಮವಾಗಿ 15 ವರ್ಷಗಳ ತಮ್ಮ ಆಡಳಿತ ಅಂತ್ಯಗೊಂಡ ಬಳಿಕ, ಶೇಖ್ ಹಸೀನಾ 2024ರ ಆಗಸ್ಟ್‌ನಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅವರು ಬಾಂಗ್ಲಾದೇಶ ತೊರೆದಿದ್ದರು. ಅಂದಿನಿಂದ ಅವರು ದೇಶಕ್ಕೆ ಮರಳಿಲ್ಲ.

ಪ್ರತಿಭಟನೆಗಳನ್ನು ಮಾರಣಾಂತಿಕವಾಗಿ ಹತ್ತಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವತೆಯ ವಿರುದ್ಧದ ಅಪರಾಧ ಎಸಗಿದ ಆರೋಪದಲ್ಲಿ ಬಾಂಗ್ಲಾದೇಶದ ನ್ಯಾಯಾಲಯ ಕಳೆದ ವರ್ಷ ಅವರ ಅನುಪಸ್ಥಿತಿಯಲ್ಲಿ ಮರಣದಂಡನೆ ವಿಧಿಸಿತ್ತು. ಆದರೆ, ವಿಚಾರಣೆಯ ಕಾನೂನುಬದ್ಧತೆಯನ್ನು ಶೇಖ್ ಹಸೀನಾ ನಿರಂತರವಾಗಿ ಪ್ರಶ್ನಿಸುತ್ತಾ ಬಂದಿದ್ದಾರೆ.

ಶೇಖ್ ಹಸೀನಾ ಮರಳಿದರೆ ಮರಣದಂಡನೆ ಎದುರಿಸಬೇಕಾಗಬಹುದು ಎಂದು ಢಾಕಾ ಅಧಿಕಾರಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಅವರ ಈ ಹೇಳಿಕೆ ಹೊರಬಿದ್ದಿದೆ. ನಿಗದಿತ ಅವಧಿಯೊಳಗೆ ಮೇಲ್ಮನವಿ ಸಲ್ಲಿಸದ ಕಾರಣ ಅವರು ಲಭ್ಯವಿದ್ದ ಕಾನೂನು ಆಯ್ಕೆಗಳನ್ನು ಕಳೆದುಕೊಂಡಿದ್ದಾರೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶದ ನಿಲುವನ್ನು ಪ್ರಶ್ನಿಸಿದ ಹಸೀನಾ

ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಬಾಂಗ್ಲಾದೇಶ ಹಲವು ಬಾರಿ ಮನವಿ ಮಾಡಿದೆ. ಈ ಮನವಿಯನ್ನು ದೇಶದ ಕಾನೂನು ಚೌಕಟ್ಟಿನಡಿ ಪರಿಶೀಲಿಸಲಾಗುತ್ತಿದೆ ಎಂದು ಭಾರತ ತಿಳಿಸಿದೆ.

ಹಸೀನಾ ಅವರ ವಾಪಸಾತಿಗೆ ಒತ್ತಾಯಿಸುತ್ತಿರುವ ಬಾಂಗ್ಲಾದೇಶದ ನಿಲುವನ್ನು ಪ್ರಶ್ನಿಸಿರುವ ಅವರು, ತಮ್ಮನ್ನು ಹಿಂದಿರುಗಿಸುವಂತೆ ಒತ್ತಾಯಿಸುವುದರ ಜತೆಗೆ ಇತ್ತೀಚೆಗೆ ನೀಡಿರುವ ಎಚ್ಚರಿಕೆಗಳು ಪರಸ್ಪರ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.

ದಾಳಿಗಳಲ್ಲಿ ಅವಾಮಿ ಲೀಗ್ ಪಾತ್ರವಿಲ್ಲ ಎಂದ ಹಸೀನಾ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಸರಣಿ ಪೆಟ್ರೋಲ್ ಬಾಂಬ್ ದಾಳಿಗಳಿಗೆ ತಮ್ಮ ಅವಾಮಿ ಲೀಗ್ ಪಕ್ಷವೇ ಕಾರಣ ಎಂಬ ಆರೋಪವನ್ನೂ ಮಾಜಿ ಪ್ರಧಾನಿ ತಳ್ಳಿಹಾಕಿದ್ದಾರೆ. ಒಂದು ಕಾಲದಲ್ಲಿ ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಈ ಪಕ್ಷಕ್ಕೆ ಇದೀಗ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.

ಹಸೀನಾ ಅವರ ಈ ಘೋಷಣೆಯು ತಮ್ಮ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳಲು, ಬೆಂಬಲಿಗರ ನಿಷ್ಠೆಯನ್ನು ಕಾಯ್ದುಕೊಳ್ಳಲು ಮತ್ತು ನಿರ್ಬಂಧಗಳ ನಡುವೆಯೂ ಪಕ್ಷದ ಅಸ್ತಿತ್ವವನ್ನು ಜೀವಂತವಾಗಿಡಲು ರೂಪಿಸಿರುವ ತಂತ್ರವಾಗಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X