ಟ್ರಂಪ್, ಮಸ್ಕ್ ಬೆಂಬಲವಿದ್ದರೂ Jensen Huangಗೆ ಶಾಕ್; 'ಕಮ್‌ಬ್ಯಾಕ್' ಕನಸಿಗೆ ಬ್ರೇಕ್, ಕಂಪನಿ ನಿಯಮಾವಳಿಗಳೇ ಮುಖ್ಯ ಎಂದ Nvidia..!

ಚೀನಾದ ಗುಪ್ತಚರ ಸಂಸ್ಥೆಯಿಂದ ನೇಮಕಗೊಂಡಿದ್ದಾರೆ ಎನ್ನಲಾದ ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ವರದಿಗಳು ಹೊರಬಂದ ಬಳಿಕ ಕೃತಕ ಬುದ್ಧಿಮತ್ತೆ ಚಿಪ್ ತಯಾರಿಕಾ ಸಂಸ್ಥೆ ಎನ್‌ವಿಡಿಯಾ ಬಿಕ್ಕಟ್ಟಿಗೆ ಸಿಲುಕಿತ್ತು.
Jensen Huang and trump
ಜೆನ್ಸನ್ ಹುವಾಂಗ್ ಮತ್ತು ಟ್ರಂಪ್
Updated on: 

ನ್ಯೂಯಾರ್ಕ್: ವಿಶ್ವದ ಪ್ರಮುಖ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾದ (Nvidia) ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ (CEO) ಸ್ಥಾನಕ್ಕೆ ಕರೆತರುವ ಯಾವುದೇ ಚಿಂತನೆ ಆಡಳಿತ ಮಂಡಳಿಯ ಮುಂದಿಲ್ಲ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಈ ಬೆಳವಣಿಗೆಯ ಬಗ್ಗೆ ವಿಷಯ ತಿಳಿದಿರುವ ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಕ್ ದಿಗ್ಗಜ ಎಲಾನ್ ಮಸ್ಕ್ ಹಾಗೂ ಬೃಹತ್ ಸಾರ್ವಜನಿಕ ಬೆಂಬಲದ ನಡುವೆಯೂ ಕಂಪನಿಯು ಈ ಕಠಿಣ ನಿರ್ಧಾರಕ್ಕೆ ಅಂಟಿಕೊಂಡಿದೆ.

ಅಮೆರಿಕದ ಗುಪ್ತಚರ ಅಧಿಕಾರಿಗಳ ಪ್ರಕಾರ, ಚೀನಾದ ಗುಪ್ತಚರ ಸಂಸ್ಥೆಯಿಂದ ನೇಮಕಗೊಂಡಿದ್ದಾರೆ ಎನ್ನಲಾದ ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ವರದಿಗಳು ಹೊರಬಂದ ಬಳಿಕ ಕೃತಕ ಬುದ್ಧಿಮತ್ತೆ ಚಿಪ್ ತಯಾರಿಕಾ ಸಂಸ್ಥೆ ಎನ್‌ವಿಡಿಯಾ ಬಿಕ್ಕಟ್ಟಿಗೆ ಸಿಲುಕಿತ್ತು.

ಈ ವಿವಾದದ ಬೆನ್ನಲ್ಲೇ ಹುವಾಂಗ್ ಕಳೆದ ವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ವಿವಾದದ ಕುರಿತು ಹಾಗೂ ಅದರ ಪರಿಣಾಮಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಸಂಸ್ಥೆಯ ಆಡಳಿತ ಮಂಡಳಿ ಮುಂದಾಗಿತ್ತು.

ಹುವಾಂಗ್ ಅವರ ನಿರ್ಗಮನದಿಂದ ಸಂಸ್ಥೆಯ ಮುಂದಿನ ನಾಯಕತ್ವದ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ, ಆಡಳಿತ ಮಂಡಳಿಯು ಸದ್ಯ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆಯತ್ತ ಗಮನಹರಿಸಿದ್ದು, ಮಾಜಿ ಮುಖ್ಯಸ್ಥರನ್ನು ಮರಳಿ ಕರೆತರುವ ಬಗ್ಗೆ ಚರ್ಚಿಸುತ್ತಿಲ್ಲ ಎಂದು ವರದಿ ತಿಳಿಸಿದೆ.

ಇದಕ್ಕೂ ಮುನ್ನ ಭಾನುವಾರ ಪ್ರಕಟಿಸಿದ್ದ ವರದಿಯಲ್ಲಿ, ಎನ್‌ವಿಡಿಯಾಗೆ ಮರಳುವ ಸಾಧ್ಯತೆಯ ಬಗ್ಗೆ ಜೆನ್ಸನ್ ಹುವಾಂಗ್ ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದರು ಎಂದು ಫೈನಾನ್ಷಿಯಲ್ ಟೈಮ್ಸ್ ತಿಳಿಸಿತ್ತು.

ಹುವಾಂಗ್ ಅವರ ಆಪ್ತರೊಬ್ಬರು ಸಿಲಿಕಾನ್ ವ್ಯಾಲಿಯ ಪ್ರಮುಖ ಉದ್ಯಮಿಗಳನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಅವರನ್ನು ಮತ್ತೆ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಒತ್ತಡ ಹೇರುವ ಹಾಗೂ ಶ್ವೇತಭವನದ ಬೆಂಬಲ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

"ಮುಂಚೂಣಿಯ ಸಂಶೋಧನಾ ಸಂಸ್ಥೆಗಳ ಹೊರತಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಪ್ರತಿಯೊಬ್ಬರೂ ಜೆನ್ಸನ್ ಅವರನ್ನು ಇಷ್ಟಪಡುತ್ತಾರೆ" ಎಂದು ಆಪ್ತರೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ. ಈ ಪ್ರಯತ್ನಗಳಿಗೆ ಹುವಾಂಗ್ ಅವರ ಬೆಂಬಲವೂ ಇದೆ ಎಂದು ಅವರು ತಿಳಿಸಿದ್ದಾರೆ.

Jensen Huang and trump
ಚೀನಾ 'Spy' ಜೊತೆ Nvidia ಸಿಇಒ ಜೆನ್ಸನ್ ಹುವಾಂಗ್‌ ಪ್ರೀತಿ: FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್; ಷೇರು ಮೌಲ್ಯ ಕುಸಿತ..!

ಜೆನ್ಸನ್ ಪರ ಟ್ರಂಪ್ ಬ್ಯಾಟಿಂಗ್

ಎನ್‌ವಿಡಿಯಾದ ನಾಯಕತ್ವ ಬಿಕ್ಕಟ್ಟಿನ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬಹಿರಂಗವಾಗಿಯೇ ಜೆನ್ಸನ್ ಹುವಾಂಗ್ ಅವರ ಮರುನೇಮಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಅತ್ಯಂತ ಮೌಲ್ಯಯುತ ತಂತ್ರಜ್ಞಾನ ಕಂಪನಿಗಳಲ್ಲೊಂದರ ನಾಯಕತ್ವದ ವಿಚಾರದಲ್ಲಿ ಟ್ರಂಪ್ ಈ ರೀತಿ ಮಧ್ಯಪ್ರವೇಶಿಸಿರುವುದು ಗಮನ ಸೆಳೆದಿದೆ.

ಹುವಾಂಗ್ ತಮ್ಮ ತಪ್ಪಿನಿಂದ ದೊಡ್ಡ ಪಾಠ ಕಲಿತಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಅವರು ಮತ್ತೆ ಕಂಪನಿಗೆ ಮರಳಿದರೆ ತಮಗೆ ಯಾವುದೇ ಆಕ್ಷೇಪವಿಲ್ಲ ಎಂದೂ ಹೇಳಿದ್ದಾರೆ. ಅವರನ್ನು ಮತ್ತೆ ಕರೆತರಬೇಕೆಂದು ಬಯಸುವ ದೊಡ್ಡ ಗುಂಪೇ ಇದೆ ಎಂದು ತಿಳಿಸಿದ್ದಾರೆ.

ಈ ವಿವಾದವು ಗುಪ್ತಚರ ಇಲಾಖೆಯಿಂದ ಬಂದ ಎಚ್ಚರಿಕೆಗಳನ್ನು ಟ್ರಂಪ್ ಆಡಳಿತ ಹೇಗೆ ನಿರ್ವಹಿಸಿತು ಎಂಬ ಪ್ರಶ್ನೆಯನ್ನೂ ಮುನ್ನೆಲೆಗೆ ತಂದಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಚೀನಾದ ಗೂಢಚಾರಿಣಿ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಗುರುತಿಸಿದ್ದ ಮಹಿಳೆಯೊಂದಿಗೆ ಹುವಾಂಗ್ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿ ಟ್ರಂಪ್ ಅವರಿಗೆ ಕಳೆದ ವರ್ಷ ಹಾಗೂ ಈ ವರ್ಷದ ಆರಂಭದಲ್ಲಿ ನೀಡಲಾಗಿತ್ತು. ಆದರೆ, ಈ ಮಾಹಿತಿ ನೀಡಿದ ಬಳಿಕ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಆ ಮಹಿಳೆ ಗೂಢಚಾರಿಣಿ ಎಂಬುದನ್ನು ಯಾರೂ ಸಾಬೀತುಪಡಿಸಿಲ್ಲ. ಆಕೆ ಗೂಢಚಾರಿಣಿಯಾಗಿರದೆಯೂ ಇರಬಹುದು ಎಂದು ಹೇಳಿದ್ದಾರೆ.

ಚೀನಾದಿಂದ ಯಾವುದೇ ಮಹಿಳೆ ಅಮೆರಿಕಕ್ಕೆ ಬಂದರೂ, ಆಕೆ ಸುಂದರವಾಗಿದ್ದರೆ ಆಕೆಯನ್ನು ಗೂಢಚಾರಿಣಿ ಎಂದು ಕರೆಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

'ಸ್ಟ್ಯಾಂಡ್ ವಿತ್ ಜೆನ್ಸನ್' ಅಭಿಯಾನಕ್ಕೆ ಭಾರಿ ಬೆಂಬಲ

ಈ ನಡುವೆ ಜೆನ್ಸನ್ ಹುವಾಂಗ್ ಅವರಿಗೆ ಸಿಲಿಕಾನ್ ವ್ಯಾಲಿಯ ಉದ್ಯಮ ವಲಯದ ಒಂದು ಭಾಗದಿಂದಲೂ ಬೆಂಬಲ ವ್ಯಕ್ತವಾಗಿದೆ.

ಹುವಾಂಗ್ ರಾಜೀನಾಮೆ ನೀಡಿದ ಕಳೆದ ವಾರವೇ 'ಸ್ಟ್ಯಾಂಡ್ ವಿತ್ ಜೆನ್ಸನ್' ಎಂಬ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಆರಂಭವಾಗಿತ್ತು. ನಾಲ್ಕೇ ದಿನಗಳಲ್ಲಿ ಈ ಅಭಿಯಾನಕ್ಕೆ 1,88,690ಕ್ಕೂ ಹೆಚ್ಚು ಸಹಿಗಳು ಲಭಿಸಿವೆ. ಎನ್‌ವಿಡಿಯಾದ ಹಾಲಿ ಮತ್ತು ಮಾಜಿ ಉದ್ಯೋಗಿಗಳು, ಹೂಡಿಕೆದಾರರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಇದರಲ್ಲಿ ಭಾಗವಹಿಸಿದ್ದಾರೆ.

ಸಹಿ ಹಾಕಿದವರಲ್ಲಿ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ರಿಪ್ಲಿಟ್ ಮುಖ್ಯ ಕಾರ್ಯನಿರ್ವಾಹಕ ಅಮ್ಜದ್ ಮಸಾದ್ ಹಾಗೂ ಎಪಿಕ್ ಗೇಮ್ಸ್ ಮುಖ್ಯಸ್ಥ ಟಿಮ್ ಸ್ವೀನಿ ಸೇರಿದಂತೆ ಹಲವು ಪ್ರಮುಖರ ಹೆಸರುಗಳಿವೆ. ಇವರೆಲ್ಲರೂ ತಮ್ಮನ್ನು ಕಂಪನಿಯ ಷೇರುದಾರರೆಂದು ಗುರುತಿಸಿಕೊಂಡಿದ್ದಾರೆ.

ಅಭಿಯಾನದ ಜಾಲತಾಣದ ಪ್ರಕಾರ, 9,400ಕ್ಕೂ ಹೆಚ್ಚು ಮಂದಿ ತಾವು ಎನ್‌ವಿಡಿಯಾದ ಹಾಲಿ ಉದ್ಯೋಗಿಗಳೆಂದು ಹಾಗೂ 1,600 ಮಂದಿ ಮಾಜಿ ಉದ್ಯೋಗಿಗಳೆಂದು ಹೇಳಿಕೊಂಡಿದ್ದಾರೆ. 98,900ಕ್ಕೂ ಹೆಚ್ಚು ಮಂದಿ ಷೇರುದಾರರೆಂದು ಗುರುತಿಸಿಕೊಂಡಿದ್ದಾರೆ. ಆದರೆ, ಸಹಿ ಹಾಕಿದವರು ನೀಡಿರುವ ಈ ಮಾಹಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಿಲ್ಲ ಎಂದು ಜಾಲತಾಣ ಸ್ಪಷ್ಟಪಡಿಸಿದೆ.

ಸ್ವತಂತ್ರ ತನಿಖೆ ಮುಂದುವರಿಯುವವರೆಗೆ ಅಥವಾ ಹುವಾಂಗ್ ಅವರ ನಿರ್ಗಮನವು ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯ ದೊರೆಯುವವರೆಗೆ ಅವರನ್ನು ಮತ್ತೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಿಸಬೇಕು ಎಂದು ಅಭಿಯಾನದಲ್ಲಿ ಒತ್ತಾಯಿಸಲಾಗಿದೆ.

"ನಾನೂ ಸಹಿ ಹಾಕುತ್ತಿದ್ದೇನೆ" ಎಂದು ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. "ಜೆನ್ಸನ್ ಅವರನ್ನು ಉಳಿಸಿ" ಎಂದು ಟಿಮ್ ಸ್ವೀನಿ ಪ್ರತಿಕ್ರಿಯಿಸಿದ್ದಾರೆ.

ಉತ್ತರಾಧಿಕಾರಿ ಹುಡುಕಾಟ ಮುಂದುವರಿಸಿದ ಆಡಳಿತ ಮಂಡಳಿ

ಏತನ್ಮಧ್ಯೆ ಸಾರ್ವಜನಿಕ ವಲಯದಲ್ಲಿ ಹುವಾಂಗ್ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದರೂ, ಎನ್‌ವಿಡಿಯಾ ಆಡಳಿತ ಮಂಡಳಿಯು ಮುಂದಿನ ಮುಖ್ಯಸ್ಥರ ಹುಡುಕಾಟವನ್ನು ಮುಂದುವರಿಸಿದೆ.

ಫೈನಾನ್ಷಿಯಲ್ ಟೈಮ್ಸ್‌ನ ಹಿಂದಿನ ವರದಿಯ ಪ್ರಕಾರ, ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಎಆರ್‌ಎಂ ಹೋಲ್ಡಿಂಗ್ಸ್ ಮುಖ್ಯ ಕಾರ್ಯನಿರ್ವಾಹಕ ರೆನೆ ಹಾಸ್ ಅವರನ್ನು ಆಡಳಿತ ಮಂಡಳಿ ಸಂಪರ್ಕಿಸಿತ್ತು. ಮುಂದಿನ ಮುಖ್ಯಸ್ಥರ ಆಯ್ಕೆಗೆ ಸಂಸ್ಥೆಯ ಆಂತರಿಕ ಅಭ್ಯರ್ಥಿಗಳ ಜೊತೆಗೆ ಹೊರಗಿನ ಅಭ್ಯರ್ಥಿಗಳನ್ನೂ ಪರಿಗಣಿಸುವುದಾಗಿ ಮಂಡಳಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X