ಫ್ರಾನ್ಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳು: ಭುಗಿಲೆದ್ದ ಸಂಘರ್ಷ; 1,000 ಮಂದಿ ಬಂಧನ

'ಫ್ರಾನ್ಸ್ 24' ವರದಿಯ ಪ್ರಕಾರ, ದೇಶಾದ್ಯಂತ ಸುಮಾರು 4,10,000 ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಫ್ರೆಂಚ್ ಸರ್ಕಾರ ಹೇಳಿದೆ; ಆದರೆ, ಪ್ರತಿಭಟನೆಯ ಆಯೋಜಕರ ಅಂದಾಜಿನ ಪ್ರಕಾರ ಸುಮಾರು 8,00,000 ಜನರು ಭಾಗವಹಿಸಿದ್ದರು.
France protests
ಫ್ರಾನ್ಸ್ ನಲ್ಲಿ ಪ್ರತಿಭಟನೆ online desk
Updated on: 

ನವದೆಹಲಿ: ಜೀವನ ವೆಚ್ಚ ಏರಿಕೆ ಮತ್ತು ಸಾರ್ವಜನಿಕ ಸೇವೆಗಳಿಗೆ ಅನುದಾನದ ಕೊರತೆಯ ವಿರುದ್ಧ ಫ್ರಾನ್ಸ್‌ನಲ್ಲಿ ನಡೆದ ಬೃಹತ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಈ ಘಟನೆಗಳಲ್ಲಿ ಸುಮಾರು 1,000 ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ನಗರ ಕೇಂದ್ರಗಳಲ್ಲಿ ಅಶ್ರುವಾಯು ಪ್ರಯೋಗ ಮತ್ತು ಘರ್ಷಣೆಗಳು ನಡೆದಿವೆ.

ಗೃಹ ಸಚಿವ ಲಾರೆಂಟ್ ನುನೆಜ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಂಧಿತರ ಸಂಖ್ಯೆಯನ್ನು ದೃಢಪಡಿಸಿದರು. ದೇಶಾದ್ಯಂತ ಪೊಲೀಸ್ ಕಾರ್ಯಾಚರಣೆಗಳು ಮುಂದುವರಿದಿರುವುದರಿಂದ, ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.

"ನಾನು ನಿಮ್ಮೊಂದಿಗೆ ಮಾತನಾಡುತ್ತಿರುವ ಈ ಹೊತ್ತಿಗೆ, ಸುಮಾರು 1,000 ಮಂದಿಯನ್ನು ಬಂಧಿಸಲಾಗಿದೆ," ಎಂದು ನುನೆಜ್ ಹೇಳಿದರು. "ಈ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ ಎಂದು ನಾನು ನಂಬುತ್ತೇನೆ," ಎಂದು ಅವರು ತಿಳಿಸಿದರು.

'ಫ್ರಾನ್ಸ್ 24' ವರದಿಯ ಪ್ರಕಾರ, ದೇಶಾದ್ಯಂತ ಸುಮಾರು 4,10,000 ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಫ್ರೆಂಚ್ ಸರ್ಕಾರ ಹೇಳಿದೆ; ಆದರೆ, ಪ್ರತಿಭಟನೆಯ ಆಯೋಜಕರ ಅಂದಾಜಿನ ಪ್ರಕಾರ ಸುಮಾರು 8,00,000 ಜನರು ಭಾಗವಹಿಸಿದ್ದರು.

ಕಳೆದ ಶನಿವಾರವೂ ಇದೇ ರೀತಿಯ ಅಶಾಂತಿ ಮತ್ತು ಲೂಟಿ ನಡೆದಿತ್ತು ಎಂಬುದನ್ನು ಉಲ್ಲೇಖಿಸಿದ ಗೃಹ ಸಚಿವರು, ಅಂದು ಪೊಲೀಸರು 385 ಮಂದಿಯನ್ನು ಬಂಧಿಸಿದ್ದರು ಎಂದು ತಿಳಿಸಿದರು.

ಪ್ಯಾರಿಸ್‌ನ 'ಕೋರ್ಸ್ ಡಿ ವಿನ್ಸೆನ್ನೆಸ್' (Cours de Vincennes) ಪ್ರದೇಶದಲ್ಲಿ ನಡೆದ ಪ್ರತಿಭಟನೆ, ಮೆರವಣಿಗೆಯ ಹಿಂಭಾಗದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದ ನಂತರ ಸಂಪೂರ್ಣವಾಗಿ ಚದುರಿಹೋಗಿದೆ ಎಂದು ಅಧಿಕಾರಿಗಳು ಘೋಷಿಸಿದರು.

"ನೆಲಮಟ್ಟದ ಪಡೆಗಳಿಗೆ ಬೆಂಬಲ ನೀಡಲು ಮತ್ತು ಉಳಿದಿರುವ ಗಲಭೆಕೋರ ಗುಂಪುಗಳನ್ನು ಪತ್ತೆಹಚ್ಚಲು 'ಜೆಂಡಾರ್ಮೆರಿ' (Gendarmerie - ಫ್ರೆಂಚ್ ಅರೆಸೇನಾ ಪೊಲೀಸ್ ಪಡೆ) ಹೆಲಿಕಾಪ್ಟರ್ ನ್ನು ನಿಯೋಜಿಸಲಾಗಿದೆ," ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯ ಅಂತ್ಯದ ವೇಳೆಗೆ ಅಲ್ಲಿ "500ಕ್ಕೂ ಹೆಚ್ಚು ಗಲಭೆಕೋರರು" ಇದ್ದರು ಎಂದು ಅವರು ಹೇಳಿದರು.

ಪೊಲೀಸರತ್ತ ವಸ್ತುಗಳನ್ನು ಎಸೆದ ನಂತರ, ಅವರು ಜಲಫಿರಂಗಿಗಳು (water cannons) ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಿದರು.

ಇದೇ ವೇಳೆ, ಎಡಪಂಥೀಯ ಪಕ್ಷವಾದ 'ಫ್ರಾನ್ಸ್ ಅನ್‌ಬೋವ್ಡ್' (La France Insoumise) ನಾಯಕ ಮತ್ತು ಅಧ್ಯಕ್ಷೀಯ ಅಭ್ಯರ್ಥಿ ಜೀನ್-ಲ್ಯುಕ್ ಮೆಲೆಂಚೋನ್, ಪ್ಯಾರಿಸ್‌ನಲ್ಲಿನ ಪ್ರತಿಭಟನೆಗಳ ವೇಳೆ ಪೊಲೀಸರು ವರ್ತಿಸಿದ ರೀತಿಯನ್ನು ಟೀಕಿಸಿದರು.

'X' (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಮೆಲೆಂಚೋನ್, "ಪ್ಯಾರಿಸ್‌ನಲ್ಲಿ, ದಿನವನ್ನು ಹಾಳುಮಾಡಲು ಮತ್ತು ತಮ್ಮ ಆಕ್ರೋಶವನ್ನು ಹೊರಹಾಕಲು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವವರು ಎಂದು ಹೇಳಿಕೊಳ್ಳುವವರು ಮೆರವಣಿಗೆಯ ಹಿಂಭಾಗದಲ್ಲಿದ್ದ ಜನರ ಮೇಲೆ ಅಶ್ರುವಾಯು ಪ್ರಯೋಗಿಸಿದರು ಮತ್ತು ಗುಂಡು ಹಾರಿಸಿದರು. ಇವೆಲ್ಲವೂ ದೇಶೀಯ ಸುದ್ದಿ ವಾಹಿನಿಗಳಿಗೆ ದೃಶ್ಯಗಳನ್ನು ಒದಗಿಸುವ ಪ್ರಯತ್ನದ ಭಾಗವಾಗಿತ್ತು. ಇಡೀ ವಾರ ಇಂತಹ ದೃಶ್ಯಗಳನ್ನೇ ಪ್ರಸಾರ ಮಾಡಿ, 'ಟ್ರಾಪ್ಸ್' (Trappes) ಹಂತಕನಿಗೆ ಪ್ರಚೋದನೆ ನೀಡಿದ ಮಾಧ್ಯಮಗಳಿಗೆ ಬೇಕಾದ ದೃಶ್ಯಗಳನ್ನು ಒದಗಿಸಲು ಹೀಗೆ ಮಾಡಲಾಯಿತು. ಇದು ನಾಚಿಕೆಗೇಡಿನ ಸಂಗತಿ," ಎಂದು ಹೇಳಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಪ್ರತಿಭಟನಾ ಚಳುವಳಿಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸಲು ದೂರದರ್ಶನ ಪ್ರಸಾರಗಳು ಮತ್ತು ಪೊಲೀಸ್ ಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

"ಅಧಿಕಾರಶಾಹಿಯ ನಿಯಂತ್ರಣದಲ್ಲಿರುವ ದೂರದರ್ಶನ ವಾಹಿನಿಗಳ ಮೂಲಕ ಜನರ ಆಲೋಚನೆಗಳನ್ನು ನಿಯಂತ್ರಿಸುವ (ಪೊಲೀಸಿಂಗ್) ಪ್ರಕ್ರಿಯೆ ಮುಂದುವರಿದಿದೆ. ಇಂದು ರಾತ್ರಿ, ಜನಪ್ರಿಯ ಚಳುವಳಿಯ ವಿರುದ್ಧ ದ್ವೇಷವನ್ನು ಕಾರಲು, ಪ್ರತಿಭಟನಾ ಮೆರವಣಿಗೆಯ ಹಿಂಭಾಗದ ಭಾಗಗಳನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಗುತ್ತಿದೆ. ಆದರೆ, ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಜನಸಮೂಹದ ಒಂದೇ ಒಂದು ದೃಶ್ಯವನ್ನೂ ತೋರಿಸಲಾಗಿಲ್ಲ," ಎಂದು ಅವರು ಹೇಳಿದರು.

"ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಹಿಂದೆ, ಅವರಿಗೆ ಅನುಕೂಲಕರವಾಗಿ ವರ್ತಿಸುವ ಕ್ಯಾಮೆರಾಗಳಿವೆ. ಅಷ್ಟೇ ಅಲ್ಲ, ಗೊಂದಲ ಮತ್ತು ಅಶಾಂತಿಯನ್ನು ಸೃಷ್ಟಿಸಲು ಉದ್ದೇಶಪೂರ್ವಕವಾಗಿ ರೂಪಿಸಿದ ಈ ವ್ಯವಸ್ಥೆಯನ್ನು ಕೆಲವರು ಅಭಿನಂದಿಸುತ್ತಿದ್ದಾರೆ. ಇದೇ ವ್ಯವಸ್ಥೆಯು ಮತ್ತೊಮ್ಮೆ ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗುವಂತೆ ಮಾಡಿದೆ," ಎಂದು ಮೆಲೆಂಚೋನ್ ಹೇಳಿದ್ದಾರೆ.

ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, "ದೂರದರ್ಶನಗಳನ್ನು ಆಫ್ ಮಾಡಿ! ಯಾರ ಮಾರ್ಗದರ್ಶನವೂ ಇಲ್ಲದೆ ನಿಮ್ಮದೇ ಆದ ಅಭಿಪ್ರಾಯವನ್ನು ರೂಪಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳ ಮೂಲಕ ವಿಷಯಗಳನ್ನು ಅರಿಯಿರಿ. ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯವನ್ನು ಉಳಿಸಿಕೊಳ್ಳಿ," ಎಂದು ಬರೆದಿದ್ದಾರೆ.

ಅಮೆರಿಕದಲ್ಲಿ, ಶನಿವಾರ (ಸ್ಥಳೀಯ ಸಮಯ) ಜಾರ್ಜಿಯಾದ ಪೆರಿಯಲ್ಲಿ ನಡೆದ ರಿಪಬ್ಲಿಕನ್ ಅಭ್ಯರ್ಥಿಗಳ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರಾನ್ಸ್‌ನ ವಲಸೆ ನೀತಿಗಳನ್ನು ಟೀಕಿಸಿದರು.

"ಫ್ರಾನ್ಸ್ ನ್ನು ದ್ವೇಷಿಸುವ ಜನರಿಗೆ ತನ್ನ ಗಡಿಗಳನ್ನು ತೆರೆದಿರುವುದರಿಂದ, ಇಂದು ಫ್ರಾನ್ಸ್ ಉರಿಯುತ್ತಿದೆ. ಇವರು ಫ್ರಾನ್ಸ್ ನ್ನು ದ್ವೇಷಿಸುವ ಜನರು. ಇವರು ಫ್ರಾನ್ಸ್ ದೇಶವನ್ನು, ಅಲ್ಲಿನ ಜನರನ್ನು ದ್ವೇಷಿಸುತ್ತಾರೆ. ಇವರು ಅಲ್ಲಿಗೆ ಹೋಗುತ್ತಾರೆ, ಆದರೆ ಅಲ್ಲಿನ ಕಟ್ಟಡಗಳು, ಸ್ಮಾರಕಗಳು, ವರ್ಣಚಿತ್ರಗಳು - ಹೀಗೆ ಫ್ರಾನ್ಸ್‌ಗೆ ಸಂಬಂಧಿಸಿದ ಯಾವುದನ್ನೂ ಇವರು ಇಷ್ಟಪಡುವುದಿಲ್ಲ," ಎಂದು ಟ್ರಂಪ್ ಹೇಳಿದರು.

"ಅಂತಹ ಜನರೊಂದಿಗೆ ಏನು ಮಾಡಬೇಕೆಂದು ನಿಮಗೆ ಗೊತ್ತೇ? ಅವರನ್ನು ಎಂದಿಗೂ ನಿಮ್ಮ ದೇಶದೊಳಗೆ ಬಿಡಬೇಡಿ. ನಾವು ಮಾಡುತ್ತಿರುವುದು ಕೂಡ ಇದನ್ನೇ," ಎಂದು ಅವರು ಹೇಳಿದರು.

ಜೀವನ ವೆಚ್ಚ ಏರಿಕೆ ಮತ್ತು ಶಿಕ್ಷಣಕ್ಕೆ ಅನುದಾನದ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಫ್ರಾನ್ಸ್‌ನಾದ್ಯಂತ ನೂರಾರು ಪ್ರತಿಭಟನೆಗಳು ನಡೆದಿವೆ. ಇತ್ತೀಚೆಗೆ ನಡೆದ ಹಿಂಸಾಚಾರ ಮರುಕಳಿಸದಂತೆ ತಡೆಯಲು ಪ್ರಯತ್ನಿಸುತ್ತಿದ್ದ ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರು ಸಂಘರ್ಷಕ್ಕಿಳಿದರು.

France protests
ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ

ಆರಂಭದಲ್ಲಿ ಪ್ರತಿಭಟನೆಗಳು ತುಲನಾತ್ಮಕವಾಗಿ ಶಾಂತಿಯುತವಾಗಿದ್ದರೂ, ಶನಿವಾರ ತಡರಾತ್ರಿ ಪ್ಯಾರಿಸ್‌ನಲ್ಲಿ ತೀವ್ರ ಸಂಘರ್ಷಗಳು ಭುಗಿಲೆದ್ದವು. ಇತ್ತೀಚಿನ ಹಿಂಸಾಚಾರ ಮರುಕಳಿಸದಂತೆ ತಡೆಯಲು ದೇಶಾದ್ಯಂತ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ದಂಗೆ ನಿಯಂತ್ರಣ ಪೊಲೀಸರು (Riot police) ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು (water cannons) ಬಳಸಿದರು ಎಂದು 'ಯುರೋನ್ಯೂಸ್' ವರದಿ ಮಾಡಿದೆ.

ಹಿಂಸಾಚಾರ ಮತ್ತು ಪೊಲೀಸರೊಂದಿಗಿನ ಸಂಘರ್ಷಗಳು ಲಿಯಾನ್, ಲಿಲ್, ಮಾರ್ಸಿಲ್ಲೆ, ಮಾಂಟ್‌ಪೆಲಿಯರ್, ನಾಂತೆಸ್ ಮತ್ತು ಟೌಲೌಸ್ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವ್ಯಾಪಿಸಿದವು. ಲಿಯಾನ್‌ನಲ್ಲಿ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದ್ದ ಪ್ರದೇಶವೊಂದರಲ್ಲಿ ರಸ್ತೆಯೊಂದನ್ನು ತಡೆಯಲು ಪ್ರಯತ್ನಿಸಿದ ಸುಮಾರು 150 ಪ್ರತಿಭಟನಾಕಾರರನ್ನು ಚದುರಿಸಲು, ದಂಗೆ ನಿಯಂತ್ರಣ ಪೊಲೀಸರು ಬೀದಿಗಳಲ್ಲಿ ಜಮಾಯಿಸಿ ಅಶ್ರುವಾಯು ಪ್ರಯೋಗಿಸಿದರು ಎಂದು 'ಯುರೋನ್ಯೂಸ್' (Euronews) ವರದಿ ಮಾಡಿದೆ.

ರೋನ್ (Rhône) ಪ್ರಾಂತ್ಯದ ಅಧಿಕಾರಿಗಳ ಅಂದಾಜಿನ ಪ್ರಕಾರ, ಲಿಯಾನ್ ನಗರದಲ್ಲಿ ಪೂರ್ವಾನುಮತಿ ಇಲ್ಲದಿದ್ದರೂ ಮತ್ತು ನಗರ ಕೇಂದ್ರದಲ್ಲಿ ಸಭೆ ಸೇರುವುದರ ಮೇಲೆ ವಿಸ್ತೃತ ನಿಷೇಧವಿದ್ದರೂ, ಸುಮಾರು 10,000 ಜನರು ಮೆರವಣಿಗೆ ನಡೆಸಿದರು ಎಂದು 'ಫ್ರಾನ್ಸ್ 24' (France 24) ವರದಿ ಮಾಡಿದೆ.

ಪ್ರತಿಭಟನಾಕಾರರು ನಗರದಾದ್ಯಂತ ವಿವಿಧ ಗುಂಪುಗಳಲ್ಲಿ ಜಮಾಯಿಸಿದ್ದರು ಮತ್ತು ಮಧ್ಯಾಹ್ನದ ಉದ್ದಕ್ಕೂ "ಯಾವುದೇ ಸ್ಪಷ್ಟ ಗುರಿಯಿಲ್ಲದೆ, ಬಹಳ ಅಸ್ತವ್ಯಸ್ತವಾಗಿ" ಓಡಾಡುತ್ತಿದ್ದರು ಎಂದು ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ನೈಋತ್ಯ ನಗರವಾದ ಟೌಲೌಸ್‌ನಲ್ಲಿ, ಶನಿವಾರ ನಡೆದ ಪ್ರತಿಭಟನೆಗಳಲ್ಲಿ ಸುಮಾರು 26,000 ಜನರು ಭಾಗವಹಿಸಿದ್ದರು ಎಂದು ಸ್ಥಳೀಯ ಅಧಿಕಾರಿಗಳು ಅಂದಾಜಿಸಿರುವುದಾಗಿ 'ಫ್ರಾನ್ಸ್ 24' ವರದಿ ಮಾಡಿದೆ.

ಈ ಪ್ರತಿಭಟನೆಯಲ್ಲಿ ಎಡಪಂಥೀಯ ಗುಂಪುಗಳನ್ನು ಒಳಗೊಂಡಂತೆ ವಿವಿಧ ವರ್ಗಗಳ ಒಂದು ವಿಶಾಲ ಒಕ್ಕೂಟ ಒಂದಾಗಿವೆ. ಫ್ರಾನ್ಸ್24 ಪ್ರಕಾರ, ಪಕ್ಷದ ನಾಯಕರು, ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಗುಂಪುಗಳು, ಕಾರ್ಯಕರ್ತರು ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನಂತಹ ಸರ್ಕಾರೇತರ ಸಂಸ್ಥೆಗಳು ಒಟ್ಟುಗೂಡಿವೆ.

ಪ್ರೌಢಶಾಲಾ ಪರಿಸ್ಥಿತಿಗಳು, ಶಿಕ್ಷಕರ ಕೊರತೆ, ಶಾಲಾ ದಿನದ ವೇಳಾಪಟ್ಟಿಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವ್ಯವಸ್ಥೆಗಳ ನಡುವಿನ ಶೈಕ್ಷಣಿಕ ಅಸಮಾನತೆಯನ್ನು ಪ್ರತಿಭಟಿಸುವ ವಿದ್ಯಾರ್ಥಿಗಳು ಒಂದು ತಿಂಗಳ ಹಿಂದೆ ಪ್ರಚೋದಿಸಿದ ಪ್ರತಿಭಟನೆಗಳ ಮುಂದುವರಿಕೆಯನ್ನು ಈ ರ್ಯಾಲಿಗಳು ಗುರುತಿಸುತ್ತವೆ ಎಂದು ಫ್ರಾನ್ಸ್24 ವರದಿ ಮಾಡಿದೆ.

ಒಂದು ವಾರದ ಹಿಂದೆ ಜೀವನ ವೆಚ್ಚದ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಹಿಂಸಾತ್ಮಕ ಬೀದಿ ಘರ್ಷಣೆಗಳು ಸಂಭವಿಸಿದ ನಂತರ, ವಿದ್ಯಾರ್ಥಿ ನೇತೃತ್ವದ ಈ ಚಳುವಳಿಯು ಈಗ ವಿಸ್ತರಣೆಗೊಂಡಿದೆ. ಇದರಲ್ಲಿ ಕಾರ್ಮಿಕ ಸಂಘಟನೆಗಳು, ನಾಗರಿಕ ಸಮಾಜ ಗುಂಪುಗಳು ಮತ್ತು "ಯೆಲ್ಲೋ ವೆಸ್ಟ್ಸ್" (Yellow Vests) ಚಳುವಳಿಯೂ ಸೇರಿಕೊಂಡಿದ್ದು, ಇದು ವ್ಯಾಪಕ ರಾಷ್ಟ್ರೀಯ ಆಂದೋಲನವಾಗಿ ಮಾರ್ಪಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com