

ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷ ಸಿದ್ಧಪಡಿಸಿದ ವರದಿಯ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಜಿ ಮಿಸ್ ಸ್ವಿಟ್ಜರ್ಲೆಂಡ್ ಗಂಭೀರ ಆರೋಪ ಹೊರಿಸಿದ್ದಾರೆ.
ರಿಪಬ್ಲಿಕನ್ ನಾಯಕ ಟ್ರಂಪ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಈ ಹಿಂದೆ ಆರೋಪಿಸಿದ್ದ ಮಾಡೆಲ್ ಬೀಟ್ರಿಸ್ ಕೆಯುಲ್ ಅವರು ಈಗ, 1993ರ ನವೆಂಬರ್‌ನಲ್ಲಿ ಟ್ರಂಪ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಟ್ರಂಪ್ ಅವರ ಸಂಬಂಧಗಳ ಕುರಿತು ಯುಎಸ್ ಹೌಸ್ ಡೆಮೋಕ್ರಾಟ್‌ಗಳು ನಡೆಸಿದ ತನಿಖೆಯ ಬಗ್ಗೆ ವರದಿಯಲ್ಲಿ ವಿವರಿಸಲಾಗಿದೆ.
ವರದಿಯಲ್ಲಿ ಉಲ್ಲೇಖಿಸಲಾದ ಆರೋಪಗಳನ್ನು ಶ್ವೇತಭವನ ನಿರಾಕರಿಸಿದೆ, "ಅಧ್ಯಕ್ಷ ಟ್ರಂಪ್ ಅವರ ಐತಿಹಾಸಿಕ ಸಾಧನೆಗಳಿಂದ ಅಮೆರಿಕನ್ನರನ್ನು ಬೇರೆಡೆಗೆ ಸೆಳೆಯಲು ಹುಚ್ಚು ಡೆಮೋಕ್ರಾಟ್‌ಗಳ ಹತಾಶೆಯ ಪ್ರಯತ್ನ" ಎಂದು ಶ್ವೇತಭವನ ವಕ್ತಾರರು ಹೇಳಿದ್ದಾರೆ.
ವರದಿಯಲ್ಲಿ ಏನಿದೆ?
53 ಪುಟಗಳ ವರದಿಯಲ್ಲಿ, ಹೌಸ್ ನ್ಯಾಯಾಂಗ ಸಮಿತಿಯಲ್ಲಿರುವ ಡೆಮೋಕ್ರಾಟ್‌ಗಳು 2019 ರಲ್ಲಿ ಫೆಡರಲ್ ಕಸ್ಟಡಿಯಲ್ಲಿ ನಿಧನರಾದ ಎಪ್ಸ್ಟೀನ್ ಅವರ ಒಂದು ಕಾಲದ ಆಪ್ತ ಸ್ನೇಹಿತ ಟ್ರಂಪ್ ವಿರುದ್ಧ ಮಾಡಲಾದ ಲೈಂಗಿಕ ದುರುಪಯೋಗದ ಆರೋಪಗಳಿಗೆ ಮರುಜೀವ ನೀಡಲಾಗಿದೆ.
ವರದಿಯು ಡೆಮೋಕ್ರಾಟ್‌ಗಳೊಂದಿಗಿನ ಕೆಯುಲ್ ಅವರ ಸಂದರ್ಶನಗಳ ಸರಣಿಯನ್ನು ಒಳಗೊಂಡಿದ್ದು, ಮಾಡೆಲ್, 1993 ರಲ್ಲಿ ಟ್ರಂಪ್ ತನ್ನ ಮೇಲೆ "ಕ್ರೂರ" ವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಎಪ್ಸ್ಟೀನ್ ಜೊತೆ ಸಮಯ ಕಳೆದ ನಂತರ ಅಟ್ಲಾಂಟಿಕ್ ಸಿಟಿಯಲ್ಲಿರುವ ಟ್ರಂಪ್ ಅವರ ಪ್ಲಾಜಾ ಹೋಟೆಲ್‌ನಲ್ಲಿರುವ ಕೋಣೆಯೊಳಗೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಅವರು ಹೇಳಿದ್ದಾರೆ.
ಕೆಯುಲ್ ಅವರ ಪ್ರಕಾರ, ಅವರು ಮೊದಲ ಬಾರಿಗೆ ಟ್ರಂಪ್ ಅವರನ್ನು ಭೇಟಿಯಾದಾಗ ಅವರಿಗೆ 24 ವರ್ಷ ವಯಸ್ಸಾಗಿತ್ತು. ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ ಈ ಹೋಟೆಲ್ ರಿಪಬ್ಲಿಕನ್ ನಾಯಕರಾದ ಟ್ರಂಪ್ ಅವರ ಒಡೆತನದಲ್ಲಿತ್ತು.
'ದಿ ಟೆಲಿಗ್ರಾಫ್' ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೆಯುಲ್ ಅವರಿಗೆ ವೀಸಾ ವ್ಯವಸ್ಥೆ ಮಾಡಿಕೊಡುವುದಾಗಿ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ (NYU) ಪ್ರವೇಶ ಸಿಗುವಂತೆ ಮಾಡುವುದಾಗಿ ಟ್ರಂಪ್ ಭರವಸೆ ನೀಡಿದ್ದರು.
"ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ" ಎಂದು ಅವರು ಹೇಳಿದರಂತೆ. ಟ್ರಂಪ್ ಅಲ್ಲಿಂದ ತೆರಳಿದ ನಂತರ, ಎಪ್ಸ್ಟೀನ್ ಎಂಬ ವ್ಯಕ್ತಿ ಕೆಯುಲ್ ಬಳಿ ಬಂದು, ತಾನು "ಡಾನ್(ಟ್ರಂಪ್) ಅವರ ಆಪ್ತ ಸ್ನೇಹಿತ" ಎಂದು ಹೇಳಿಕೊಂಡು, ಅವರನ್ನು 'ಮಾರ್-ಎ-ಲಾಗೋ' (Mar-a-Lago) ನಲ್ಲಿ ನಡೆಯುವ ಪಾರ್ಟಿಯೊಂದಕ್ಕೆ ಆಹ್ವಾನಿಸಿದರು ಎಂದು ಕೆಯುಲ್ ಹೇಳಿದ್ದಾರೆ.
ಇದಲ್ಲದೆ, ಡೆಮಾಕ್ರಟಿಕ್ ಪಕ್ಷದ ವರದಿಯಲ್ಲಿ ಉಲ್ಲೇಖಿಸಿರುವಂತೆ, ನಂತರ ಟ್ರಂಪ್ ಅವರ ಪ್ರತಿನಿಧಿಯೊಬ್ಬರು ಕೆಯುಲ್ ಅವರನ್ನು ಪ್ಲಾಜಾ ಹೋಟೆಲ್‌ನ ಮೇಲಿನ ಮಹಡಿಯಲ್ಲಿ ಭವಿಷ್ಯದ ಅಧ್ಯಕ್ಷರನ್ನು (ಟ್ರಂಪ್ ಅವರನ್ನು) ಭೇಟಿಯಾಗಲು ಆಹ್ವಾನಿಸಿದರು.
ವರದಿಯ ಪ್ರಕಾರ, "ಅಲ್ಲಿಗೆ ಪ್ರವೇಶಿಸುತ್ತಿದ್ದಂತೆಯೇ, ಟ್ರಂಪ್, ಕೆಯುಲ್ ಅವರನ್ನು ಹಿಂದಿನಿಂದ ಹಿಡಿದು ಬಲವಂತವಾಗಿ ಅತ್ಯಾಚಾರವೆಸಗಿದರು. ಈ ವೇಳೆ ಟ್ರಂಪ್, ಕೆಯುಲ್ ಅವರ ಡ್ರೆಸ್ ಹರಿದುಹಾಕಿದರು; ಇದರಿಂದ ಅವರ ದೇಹದ ಹಲವು ಭಾಗಗಳಲ್ಲಿ ರಕ್ತಸ್ರಾವ ಮತ್ತು ಗಾಯಗಳಾದವು" ಎಂದು ಆರೋಪಿಸಿದ್ದಾರೆ.
ವರದಿಯಲ್ಲಿ ತಿಳಿಸಿರುವಂತೆ, "ಕೆಯುಲ್ ಈ ಅತ್ಯಾಚಾರವನ್ನು 'ಕ್ರೂರ' ಎಂದು ಟೀಕಿಸಿದ್ದು." ಈ ಕೃತ್ಯದ ನಂತರ, ಟ್ರಂಪ್ "ಅವರನ್ನು ಹಾಸಿಗೆಯ ಅಂಚಿನಲ್ಲಿ ಕೂರಿಸಿ, ವೀಸಾ ಮತ್ತು NYU ಪ್ರವೇಶಾತಿ ಕಲ್ಪಿಸಿಕೊಡುವ ತಮ್ಮ ಭರವಸೆಗಳನ್ನು ಪುನರುಚ್ಚರಿಸಿದರು. ಅಲ್ಲದೆ, 'ಶೋ ಮುಂದುವರಿಯಲೇಬೇಕು' (the show must go on) ಎಂದು ಹೇಳುವ ಮೂಲಕ, ಈ ವಿಷಯವನ್ನು ಯಾರಿಗೂ ತಿಳಿಸದಂತೆ (ಮೌನವಾಗಿರುವಂತೆ) ಬೆದರಿಕೆ ಹಾಕಿದರು" ಎಂದು ಕೆಯುಲ್ ಹೇಳಿದ್ದಾರೆ.