"ನಾನು ಕಾಕ್ರೋಚ್ ಯಾಗಬೇಕೇನೋ": ಭಾರತೀಯ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ, ಪ್ರಚಾರದ ಸಾಧನ'ವಾಗಿ ಬಳಕೆ- ವಿಜಯ್ ಮಲ್ಯ!

ನಾನು ಎದುರಿಸಿದ ಮತ್ತು ಎದುರಿಸುತ್ತಿರುವ ಅನ್ಯಾಯಗಳನ್ನು ನೋಡಿದರೆ, ನಾನೊಂದು ಜಿರಲೆಯಾಗಬೇಕೇನೋ ಎಂದು ಅನ್ನಿಸುತ್ತದೆ. ಬಹುಶಃ ಜಿರಲೆಯಾಗಿ ಬದುಕುವುದೇ ಉತ್ತಮ ಜೀವನವೇನೋ ಎಂದು ಹೇಳಿಕೊಂಡಿದ್ದಾರೆ
 Vijay Mallya
ವಿಜಯ್ ಮಲ್ಯ
Updated on

ಲಂಡನ್: ಹಲವು ಬ್ಯಾಂಕ್‌ಗಳಿಂದ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ (KFA) ನೀಡಲಾಗಿದ್ದ 9,000 ಕೋಟಿ ರೂ. ಸಾಲವನ್ನು ಮರುಪಾವತಿಸದ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ, ನಾನು ಭಾರತೀಯ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ ಮತ್ತು ಯುಕೆ (UK) ನಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಕಾರಣದಿಂದಾಗಿ ವಿದೇಶದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ, ನಾನು ಜಿರಲೆಯಾಗಬೇಕೇನೋ" ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ 'ಕಾಕ್ರೋಚ್ ಜನತಾ ಪಾರ್ಟಿ' (Cockroach Janta Party) ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ನಾನು ಎದುರಿಸಿದ ಮತ್ತು ಎದುರಿಸುತ್ತಿರುವ ಅನ್ಯಾಯಗಳನ್ನು ನೋಡಿದರೆ, ನಾನೊಂದು ಜಿರಲೆಯಾಗಬೇಕೇನೋ ಎಂದು ಅನ್ನಿಸುತ್ತದೆ. ಬಹುಶಃ ಜಿರಲೆಯಾಗಿ ಬದುಕುವುದೇ ಉತ್ತಮ ಜೀವನವೇನೋ ಎಂದು ಹೇಳಿಕೊಂಡಿದ್ದಾರೆ. ತಾವು ನಿರಂತರವಾಗಿ ಅನ್ಯಾಯವನ್ನು ಎದುರಿಸುತ್ತಿರುವುದಾಗಿಯೂ ಅವರು ಆರೋಪಿಸಿದ್ದಾರೆ.

ತಮ್ಮ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಮಲ್ಯ, ಜಾರಿ ನಿರ್ದೇಶನಾಲಯವು (ED) ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮಿಂದ 14,000 ಕೋಟಿ ರೂ.ಗಳನ್ನು ವಸೂಲಿ ಮಾಡಿ, ತಾವು ಸಾಲಗಾರರಾಗಿದ್ದ ಬ್ಯಾಂಕ್‌ಗಳಿಗೆ ಪಾವತಿಸಿರುವುದನ್ನು ಒಪ್ಪಿಕೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ಮತ್ತೊಮ್ಮೆ ಹೇಳುತ್ತೇನೆ, ಅತ್ಯಂತ ಭಯಾನಕ ಅಪರಾಧ ತನಿಖಾ ಸಂಸ್ಥೆ ಎಂದು ಪರಿಗಣಿಸಲ್ಪಟ್ಟಿರುವ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, 2021 ರಲ್ಲಿ ಬ್ಯಾಂಕ್‌ಗಳಿಗೆ 14,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಸ್ತಾಂತರಿಸಿರುವುದನ್ನು ದೃಢಪಡಿಸಿದೆ. ನನ್ನ ಮಾತುಗಳನ್ನು ನಂಬದಿದ್ದರೆ ಬಿಡಿ, ಆದರೆ ಜಾರಿ ನಿರ್ದೇಶನಾಲಯ ಏನು ಹೇಳಿದೆ ಎಂಬುದರತ್ತ ಗಮನಹರಿಸಿ ಎಂದು ಅವರು ಹೇಳಿದ್ದಾರೆ.

ಮಂಗಳವಾರದ ತಮ್ಮ ಹಿಂದಿನ ಪೋಸ್ಟ್‌ಗಳನ್ನು ಮುಂದುವರಿಸುತ್ತಾ ಪ್ರತಿಕ್ರಿಯಿಸಿರುವ ಮಲ್ಯ, ನಾನು ಪರಾರಿಯಾದ ವ್ಯಕ್ತಿಯಲ್ಲ (fugitive) ಮತ್ತು ಯುಕೆನಲ್ಲಿನ ಕಾನೂನು ಪ್ರಕ್ರಿಯೆಗಳು ತಮ್ಮ ಭಾರತ ಪ್ರಯಾಣವನ್ನು ನಿರ್ಬಂಧಿಸಿವೆ ಎಂದು ಹೇಳಿಕೊಂಡಿದ್ದಾರೆ. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡುವುದು ಭಾರತದಲ್ಲಿ ತಮ್ಮ ಭೌತಿಕ ಉಪಸ್ಥಿತಿಗೆ ಸಂಬಂಧಿಸಿದ ವಿಷಯವಲ್ಲ ಎಂದಿದ್ದಾರೆ.

"ನನ್ನ ಟ್ವೀಟ್‌ಗಳಿಗೆ ನೀವು ನೀಡಿದ ಮಿಶ್ರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಪ್ರೀತಿ ಮತ್ತು ದ್ವೇಷ ಜೊತೆಜೊತೆಯಲ್ಲೇ ಸಾಗುತ್ತವೆ. ನಿಮ್ಮ ಅಭಿಪ್ರಾಯಗಳನ್ನು ವಿನಮ್ರವಾಗಿ ಸ್ವೀಕರಿಸುವಂತೆಯೇ, ಈ ವಿಷಯವನ್ನೂ ನಾನು ಗೌರವಯುತವಾಗಿ ಸ್ವೀಕರಿಸುತ್ತೇನೆ. ಆದರೆ, ಶಾಶ್ವತ ನಿವಾಸಿ ಸ್ಥಾನಮಾನ (permanent residency) ಮತ್ತು ಪೌರತ್ವದ (citizenship) ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದವರಿಗೆ ಹಾಗೂ ಸಾಲ ಮರುಪಾವತಿಯು ಭೌತಿಕ ಉಪಸ್ಥಿತಿಯನ್ನು ಅವಲಂಬಿಸಿದೆ ಎಂದು ಭಾವಿಸುವವರಿಗೆ ನಾನು ಹೇಳುವುದಿಷ್ಟೇ - ದಯವಿಟ್ಟು ಮತ್ತೊಮ್ಮೆ ಯೋಚಿಸಿ ಎಂದು ಹೇಳಿದ್ದಾರೆ.

1992 ರಿಂದ ಯುನೈಟೆಡ್ ಕಿಂಗ್‌ಡಮ್‌ನ (UK) ಖಾಯಂ ನಿವಾಸಿಯಾಗಿರುವ ತಮಗೆ, ಅಲ್ಲಿಂದ ಹೊರಹೋಗದಂತೆ ಕಾನೂನುಬದ್ಧವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ಮಲ್ಯ ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೊಂಡಿದ್ದರು. ಭಾರತಕ್ಕೆ ಮರಳಲು ನಿರಾಕರಿಸುವ 'ಪಲಾಯನವಾದಿ' (ಭಗೋಡಾ) ಎಂದು ನನ್ನನ್ನು ಕರೆಯುವವರೆಲ್ಲರಿಗೂ ಒಂದು ಮಾತು: ನಾನು 1992 ರಿಂದ ಯುನೈಟೆಡ್ ಕಿಂಗ್‌ಡಮ್‌ನ ಖಾಯಂ ನಿವಾಸಿಯಾಗಿದ್ದೇನೆ ಮತ್ತು ಸದ್ಯಕ್ಕೆ ಈ ದೇಶವನ್ನು ತೊರೆಯದಂತೆ ನನಗೆ ಕಾನೂನುಬದ್ಧ ನಿರ್ಬಂಧವಿದೆ. ಭಾರತ ಸರ್ಕಾರವು ನನ್ನ ವಿಷಯದಲ್ಲಿ ಅತ್ಯಂತ ಅನ್ಯಾಯಯುತವಾಗಿ ವರ್ತಿಸಿ, ನನ್ನನ್ನು ಒಂದು ರೀತಿಯ 'ಪ್ರಚಾರದ ಸಾಧನ'ವನ್ನಾಗಿ (poster boy) ಬಳಸಿಕೊಂಡಿದ್ದರಿಂದಲೇ ಈ ಎಲ್ಲ ಬೆಳವಣಿಗೆಗಳು ಆರಂಭವಾದವು ಎಂದು ಅವರು 'X' (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮಿಂದ 14,131.60 ಕೋಟಿ ರೂ.ಗಳನ್ನು ವಸೂಲಿ ಮಾಡಿರುವುದನ್ನು ಉಲ್ಲೇಖಿಸಿ, ಜಾರಿ ನಿರ್ದೇಶನಾಲಯವು (ED) ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನ (ಪ್ರಮಾಣಪತ್ರದ) ಒಂದು ಭಾಗವನ್ನು ಮಲ್ಯ ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಬಾಂಬೆ ಹೈಕೋರ್ಟ್‌ನಲ್ಲಿ ಇಡಿ (ED) ಸಲ್ಲಿಸಿದ ಅಫಿಡವಿಟ್ ಇದು. ಇದರಲ್ಲಿನ 7ನೇ ಪ್ಯಾರಾವು ತೀರ್ಮಾನವಾದ ಸಾಲದ ಮೊತ್ತವನ್ನು ಸೂಚಿಸಿದರೆ, 17ನೇ ಪ್ಯಾರಾವು 2021ರಲ್ಲೇ 14,131.60 ಕೋಟಿ ರೂ.ಗಳನ್ನು ವಸೂಲಿ ಮಾಡಿರುವುದನ್ನು ತೋರಿಸುತ್ತದೆ.

5 ವರ್ಷಗಳು ಕಳೆದರೂ, ಬ್ಯಾಂಕುಗಳಿಗೆ ವಂಚನೆ ಮಾಡಿದ ವ್ಯಕ್ತಿ ಎಂದೇ ನನ್ನನ್ನು ಕರೆಯಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ವಸೂಲಾತಿಗೆ ಸಂಬಂಧಿಸಿದ ಖಾತೆಯ ವಿವರ ಎಂದು ಅವರು ಹೇಳಿಕೊಂಡು ಪಟ್ಟಿಯೊಂದನ್ನು ಪೋಸ್ಟ್ ಮಾಡಿದ್ದು, ತನ್ನನ್ನು ತಪ್ಪಾಗಿ 'ಪಲಾಯನವಾದಿ' ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.

 Vijay Mallya
ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ: ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ- ವಿಜಯ್ ಮಲ್ಯ

"ನ್ಯಾಯಯುತ ಮತ್ತು ಸರಿಯಾದ ಲೆಕ್ಕಪತ್ರ ನಿರ್ವಹಣೆ ಹಾಗೂ ನ್ಯಾಯದಲ್ಲಿ ನಂಬಿಕೆ ಇರುವವರೆಲ್ಲರೂ ದಯವಿಟ್ಟು ಈ ಕೆಳಗಿನ ಪಟ್ಟಿಯನ್ನು ಗಮನಿಸಿ. ಮಾಧ್ಯಮಗಳು ನನ್ನನ್ನು ಹೀಗಳೆಯುವುದು ಮತ್ತು ಪತ್ರಕರ್ತರ ವರದಿಗಳ ಆರಂಭದಲ್ಲೇ ನನ್ನನ್ನು ವಂಚಕ ಎಂದು ಸಂಬೋಧಿಸುವುದು ಸರಿಯೇ? ಬದಲಿಗೆ, ನನಗೆ ಯಾವಾಗ ಮರುಪಾವತಿ ಸಿಗುತ್ತದೆ ಎಂದು ಪ್ರಶ್ನಿಸುವುದನ್ನು ಏಕೆ ಆರಂಭಿಸಬಾರದು?" ಎಂದು ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com