

ನವದೆಹಲಿ: ಭಾರತದಲ್ಲಿ ಹಣ ಅಕ್ರಮ ವರ್ಗಾವಣೆ ಹಾಗೂ ದ್ವೇಷ ಭಾಷಣದ ಆರೋಪ ಹೊತ್ತು ಪರಾರಿಯಾಗಿರುವ ವಿವಾದಾತ್ಮಕ ಇಸ್ಲಾಮಿಕ್ ಪ್ರಚಾರಕ ಜಾಕಿರ್ ನಾಯಕ್ ಕುರಿತು ಇದೀಗ ಮಹತ್ವದ ಬೆಳವಣಿಗೆ ನಡೆದಿದೆ. ಹಲವು ವರ್ಷಗಳಿಂದ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಈತನನ್ನು ಭಾರತಕ್ಕೆ ಮರಳಿ ಕರೆತರಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಫಲವಾಗಿ ಆತ ಭಾರತಕ್ಕೆ ಶೀಘ್ರದಲ್ಲೇ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗುತ್ತಿದೆ. ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಜಾಕಿರ್ ನಾಯಕ್ ವಿಚಾರವನ್ನು ಎರಡು ದೇಶಗಳ ನಡುವಿನ ನಂಬಿಕೆ ಮತ್ತು ಬಾಂಧವ್ಯವನ್ನು ವೃದ್ಧಿಸಲು ಈ ವಿಷಯಕ್ಕೆ ಆದ್ಯತೆಯ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಮಾತನಾಡಿದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಉಭಯ ದೇಶಗಳ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ಝಾಕಿರ್ ನಾಯ್ಕ್ ಹಸ್ತಾಂತರದ ವಿಷಯವನ್ನು ಖಾಸಗಿಯಾಗಿ ಚರ್ಚಿಸಲಾಗಿದ್ದು, ಭಾರತದ ಹಸ್ತಾಂತರದ ಬೇಡಿಕೆಯ ಬಗ್ಗೆ ನಮಗೆ ಸ್ಪಷ್ಟ ಗ್ರಹಿಕೆಯಿದೆ. ಆದರೆ ಮಲೇಷ್ಯಾ ತನ್ನ ದೇಶದ ಕಾನೂನಿನ ಚೌಕಟ್ಟು ಮತ್ತು ನಿಯಮಗಳನ್ನು ಗೌರವಿಸಬೇಕಾಗುತ್ತದೆ. ಹೀಗಾಗಿ ಈ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರೆದು, ಭಾರತೀಯ ತನಿಖಾ ಸಂಸ್ಥೆಗಳು ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಪೀಸ್ ಟಿವಿ ನೆಟ್‌ವರ್ಕ್ ವಿರುದ್ಧ ತನಿಖೆ ಆರಂಭಿಸಿದ ಬೆನ್ನಲ್ಲೇ ಜಾಕಿರ್ ನಾಯಕ್ 2016 ರಲ್ಲಿ ಮಲೇಷ್ಯಾಕ್ಕೆ ತೆರಳಿದ. ನಂತರ ಅಲ್ಲಿ ಶಾಶ್ವತ ನಿವಾಸಿ ಸ್ಥಾನಮಾನ ಪಡೆದು ವಾಸಿಸುತ್ತಿದ್ದಾನೆ. ಭಾರತ ಸರ್ಕಾರವು ಆತನ ಪಾಸ್‌ಪೋರ್ಟ್ ರದ್ದುಗೊಳಿಸಿ, 'ಘೋಷಿತ ಅಪರಾಧಿ' ಎಂದು ಘೋಷಿಸಿದ್ದು, ಆತನನ್ನು ಹಸ್ತಾಂತರಿಸುವಂತೆ ಮಲೇಷ್ಯಾಕ್ಕೆ ನಿರಂತರವಾಗಿ ಹಸ್ತಾಂತರಕ್ಕೆ ಔಪಚಾರಿಕ ವಿನಂತಿಗಳನ್ನು ಸಲ್ಲಿಸಿದೆ. ಆದರೆ, ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಮಾತ್ರ ಸಹಕರಿಸುವುದಾಗಿ ಮಲೇಷ್ಯಾ ಈ ಹಿಂದೆ ತಿಳಿಸಿತ್ತು. ಜೊತೆಗೆ, 2019 ರಲ್ಲಿ ಜನಾಂಗೀಯ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ನಾಯಕ್ ಅವರ ಸಾರ್ವಜನಿಕ ಭಾಷಣಕ್ಕೆ ಮಲೇಷ್ಯಾದಲ್ಲೂ ನಿರ್ಬಂಧ ವಿಧಿಸಲಾಗಿತ್ತು.