

ಕ್ಯೌಕ್ತಾವ್ (ಮ್ಯಾನ್ಮಾರ್): ಮ್ಯಾನ್ಮಾರ್‌ನ ಪ್ರಭಾವಿ ಜನಾಂಗೀಯ ಸಶಸ್ತ್ರ ಗುಂಪಾದ ಅರಾಕನ್ ಆರ್ಮಿ ನಿಯಂತ್ರಣದಲ್ಲಿರುವ ರಖೈನ್ ರಾಜ್ಯದ ಕ್ಯೌಕ್ತಾವ್ ಟೌನ್‌ಶಿಪ್‌ನಲ್ಲಿ ಮ್ಯಾನ್ಮಾರ್ ಸೇನಾ ಪಡೆಗಳು ಭೀಕರ ವಾಯುದಾಳಿ ನಡೆಸಿದ್ದು, ದಾಳಿಯಲ್ಲಿ 50 ನಾಗರಿಕರು ಸಾವನ್ನಪ್ಪಿದ್ದಾರೆ. ಜೊತೆಗೆ 58 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಜನನಿಬಿಡ ಮಾರುಕಟ್ಟೆಯೇ ಟಾರ್ಗೆಟ್
ಬಂಡುಕೋರರ ನಿಯಂತ್ರಣದಲ್ಲಿರುವ ಕ್ಯೌಕ್ತಾವ್ ಪಟ್ಟಣದ ಪ್ರಮುಖ ಸಗಟು ಮಾರುಕಟ್ಟೆ ಮತ್ತು ಅದರ ಪಕ್ಕದಲ್ಲಿರುವ ಕಿಸ್ಸಾಪನದಿ ಸೇತುವೆಯ ಬಳಿ ಜನರು ವ್ಯಾಪಾರದಲ್ಲಿ ತೊಡಗಿದ್ದಾಗ ಸೇನಾ ಫೈಟರ್ ಜೆಟ್ ಎರಡು ಶಕ್ತಿಶಾಲಿ ಬಾಂಬ್‌ಗಳನ್ನು ಸ್ಫೋಟಿಸಿದೆ. ಈ ಮಾರುಕಟ್ಟೆಯು ಭಾರತದೊಂದಿಗಿನ ನದಿ ವ್ಯಾಪಾರ ಮಾರ್ಗದ ಪ್ರಮುಖ ಕೊಂಡಿಯಾಗಿದ್ದು, ಸ್ಥಳೀಯರಿಗೆ ಜೀವನೋಪಾಯವಾಗಿತ್ತು.
ಮೃತರ ಸಂಖ್ಯೆ ಏರಿಕೆ
ಪ್ರಾಥಮಿಕ ವರದಿಗಳಲ್ಲಿ ಮೃತರ ಸಂಖ್ಯೆ 33 ಎಂದು ಹೇಳಲಾಗಿತ್ತಾದರೂ, ನಂತರದ ಪರಿಶೀಲನೆಗಳ ಬಳಿಕ ಕನಿಷ್ಠ 50 ಜನರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಮೃತರಲ್ಲಿ ಮಾರುಕಟ್ಟೆಯ ವ್ಯಾಪಾರಿಗಳು, ಗ್ರಾಹಕರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಅದರಲ್ಲೂ, ಗಾಯಗೊಂಡಿರುವ 58 ಜನರಲ್ಲಿ 22ಕ್ಕೂ ಹೆಚ್ಚು ಜನರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ರಖೈನ್‌ನ ಹಿರಿಯ ರಕ್ಷಣಾ ಅಧಿಕಾರಿ ವಾಯ್ ಹುನ್ ಆಂಗ್ ತಿಳಿಸಿದ್ದಾರೆ.
ಮುಂದುವರೆದು, ಈ ಪ್ರದೇಶವು ಮ್ಯಾನ್ಮಾರ್‌ನ ಪ್ರಭಾವಿ ಜನಾಂಗೀಯ ಸಶಸ್ತ್ರ ಗುಂಪಾದ ಅರಾಕನ್ ಆರ್ಮಿ ನಿಯಂತ್ರಣದಲ್ಲಿದ್ದು, ಯಾವುದೇ ಯಾವುದೇ ಸಕ್ರಿಯ ಯುದ್ಧ ಅಥವಾ ಸಂಘರ್ಷ ನಡೆಯದೇ ಇದ್ದರೂ, ಮಿಲಿಟರಿಯು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ಈ ಯುದ್ಧಾಪರಾಧ ಎಸಗಿದೆ ಎಂದು ಅರಾಕನ್ ಆರ್ಮಿ ಆರೋಪಿಸಿದ್ದು, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ. ಈ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತೀವ್ರವಾಗಿ ಖಂಡಿಸಿದ್ದು, ನಾಗರಿಕರ ರಕ್ಷಣೆಗೆ ಒತ್ತು ನೀಡುವಂತೆ ಮತ್ತು ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸುವಂತೆ ಮ್ಯಾನ್ಮಾರ್ ಮಿಲಿಟರಿ ಆಡಳಿತಕ್ಕೆ ಆಗ್ರಹಿಸಿದ್ದಾರೆ. ಅದರಲ್ಲೂ, 2021ರ ಮಿಲಿಟರಿ ದಂಗೆಯ ನಂತರ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ರಖೈನ್ ಪ್ರಾಂತ್ಯದಲ್ಲಿ ನಡೆದ ಅತ್ಯಂತ ಭೀಕರ ವಾಯುದಾಳಿಗಳಲ್ಲಿ ಇದು ಒಂದಾಗಿದೆ.