
ಶುಂಠಿ ನಮ್ಮ ದಿನನಿತ್ಯದಲ್ಲಿ ಹೆಚ್ಚಾಗಿ ಬಳಸುವ ಮಸಾಲೆ ಪದಾರ್ಥ, ಜೀರ್ಣ ಪ್ರಕ್ರಿಯೆಯಲ್ಲಿ ಶುಂಠಿಯದ್ದು ಅಗ್ರಸ್ಥಾನ. ಹೀಗಾಗಿ ಶುಂಠಿಯನ್ನು ಸಸ್ಯಹಾರ ಹಾಗೂ ಮಾಂಸಹಾರ ಎರಡು ಅಡುಗೆ ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಶುಂಠಿಯನ್ನು ಪ್ರಮುಖವಾಗಿ ಬಳಸಲಾಗುತ್ತದೆ.
ಶುಂಠಿ ಭಾರತದ ಪ್ರಮುಖ ಮಸಾಲೆ ಬೆಳೆಯಾಗಿದೆ. ಪ್ರಪಂಚದ ಶುಂಠಿ ಉತ್ಪಾದನೆಯ ಶೇ. 45 ರಷ್ಟನ್ನು ಭಾರತದಲ್ಲಿ ಬೆಳೆಯಲಾಗುತ್ತದೆ .ಭಾರತದಲ್ಲಿ ಕೇರಳ, ತಮಿಳುನಾಡು , ಪಶ್ಚಿಮ ಬಂಗಾಳ, ಬಿಹಾರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹಾಗೂ ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಶುಂಠಿ ಬೆಳೆಯಲಾಗುತ್ತದೆ. ಭಾರತದಲ್ಲಿ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 2 ಲಕ್ಷ ಟನ್ ಶುಂಠಿ ಬೆಳೆಯಲಾಗುತ್ತದೆ, ಶುಂಠಿಯನ್ನು ಪ್ರಮುಖವಾಗಿ ಮಸಾಲೆಗೆ ಹೆಚ್ಚು ಬಳಸಲಾಗುತ್ತದೆ. ಔಷಧಿ ಹಾಗೂ ಸಿಹಿ ತಿನಿಸುಗಳ ತಯಾರಿಕೆಯಲ್ಲೂ ಸಹ ಶುಂಠಿಯನ್ನು ಬಳಸಲಾಗುತ್ತದೆ, ಆಯುರ್ವೇದ ಔಷಧಿಯಲ್ಲಿ ಶುಂಠಿ ಬಳಕೆ ಹೆಚ್ಚು. ಶುಂಠಿಯ ಪರಿಮಳಕ್ಕೆ ಜಿಂಝಿಫೆರಿನ್ ಎಂಬ ಅಂಶ ಕಾರಣವಾಗಿದೆ.
ಶುಂಠಿ ಬೆಳೆಯಲು ಚೆನ್ನಾಗಿ ಉಳುಮೆ ಮಾಡಿ ಹದಮಾಡಿದ ಭೂಮಿ ಅವಶ್ಯಕ. ಕಪ್ಪು ಮಣ್ಣು ಶುಂಟಿ ಬೆಳೆಯಲು ಯೋಗ್ಯ. ಆಮ್ಲಯುಕ್ತ ಕ್ಷಾರೀಯ ಮಣ್ಣಿನಲ್ಲಿ ಶುಂಠಿ ಸಮೃದ್ಧವಾಗಿ ಬೆಳೆಯಲು ಸಾಧ್ಯವಿಲ್ಲ. ಇನ್ನು ಪದೇ ಪದೇ ಅಂದರೆ ಪ್ರತಿ ವರ್ಷ ಒಂದೇ ಭೂಮಿಯಲ್ಲಿ ಶುಂಠಿಯನ್ನು ಬೆಳೆಯಾಗದು. ಯಾಕಂದೆರೆ ಶುಂಠಿಗೆ ಅಧಿಕ ಪ್ರಮಾಣದ ಪೋಷಕಾಂಶಗಳು ಬೇಕಿರುವುದರಿಂದ ಮಣ್ಣಿನಲ್ಲಿರುವ ಎಲ್ಲಾ ಪೌಷ್ಠಿಕಾಂಶಗಳನ್ನು ಶುಂಠಿ ಹೀರಿಕೊಳ್ಳುತ್ತದೆ. ಹೀಗಾಗಿ ಪ್ರತಿ ವರ್ಷ ಶುಂಠಿ ಬೆಳಯುವ ಉದ್ದೇಶವಿದ್ದರೆ ಬೇರೆ ಬೇರೆ ಭೂಮಿಯಲ್ಲಿ ಬೆಳೆಯಬೇಕಾಗುತ್ತದೆ. ಎರಡು ಭಾರಿ ಉಳುಮೆ ಮಾಡಿ ಮಣ್ಣನ್ನು ಸಡಿಲಗೊಳಿಸಬೇಕು. ಶುಂಠಿ ಬೆಳೆಯಲು 15 ರಿಂದ 22 ಸೆಂ.ಮೀ ಆಳದಲ್ಲಿ ಮಣ್ಣನ್ನು ಉಳುಮೆ ಮಾಡಬೇಕು.
ಇನ್ನು ಶುಂಠಿಯನ್ನು ಕೇವಲ ಹೊಲದಲ್ಲಿ ಮಾತ್ರವಲ್ಲದೆ ಮನೆ ಮುಂದಿನ ಕೈ ತೋಟದಲ್ಲೂ ಬೆಳೆಯಬಹುದು. ಜಾಗ ಕಡಿಮೆ ಇದ್ದರೇ ಮಣ್ಣಿನ ಪಾಟ್ ಗಳಲ್ಲೂ ಶುಂಠಿಯನ್ನು ಬೆಳೆಯಬಹುದಾಗಿದೆ.
ಶುಂಠಿಗೆ ಆರ್ದ್ರ ಹವಾಮಾನ ಉತ್ತಮ.ವಾರ್ಷಿಕ 12ರಿಂದ 250 ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಂಪು ಹಾಗೂ ಒಣ ಹವಾಮಾನ ಬೇರು ಬೆಳೆಯಲು ಅನುಕೂಲ. ಇನ್ನು ಶುಂಠಿಯಲ್ಲೂ ಹಲವಾರು ತಳಿ ಇದೆ. ಕರಕ್ಕಲ್, ತಿಂಗುಪುರಿ, ಕರುಪ್ಪಮಡಿ ತಳಿಗಳನ್ನು ಹಸಿ ಶುಂಠಿಗಾಗಿ ಬಳಸಲಾಗುತ್ತದೆ. ಸ್ಲೀವಾ, ಎಂಬ ತಳಿಯನ್ನು ಒಣ ಶುಂಠಿಗಾಗಿ ಬೆಳೆಯಲಾಗುತ್ತದೆ.
ಶುಂಠಿಯನ್ನು 15 ರಿಂದ 20 ಸೆಂಮೀ ಜಾಗ ಬಿಟ್ಟು ನೆಡಬೇಕು. ಶುಂಠಿಯನ್ನು ಹಾಗೆ ಇಟ್ಟರೆ ಮೊಳಕೆ ಬರುತ್ತದೆ. 2.5 ರಿಂದ 5 ಸೆಂಮೀ ವರೆಗಿನ ಉದ್ದವಿರುವ ಶುಂಠಿಯನ್ನು ಭೂಮಿಯಲ್ಲಿ ನೆಡಬೇಕು. ಮೇ ಮತ್ತು ಜೂನ್ ತಿಂಗಳ ಮಧ್ಯಭಾಗದಲ್ಲಿ ಶುಂಠಿ ಬಿತ್ತನೆ ಮಾಡಬೇಕು.
ಶುಂಠಿಯನ್ನು ಬಿತ್ತನೆ ಮಾಡಿದ ಕೂಡಲೇ ನೀರು ಹಾಯಿಸಬೇಕು. ನಂತರ ಪ್ರತಿ 10 ದಿನಗಳ ಅಂತರದಲ್ಲಿ ನೀರು ಹಾಯಿಸಬೇಕು. ಒಟ್ಟಾರೆ ಬೆಳೆ ಬೆಳೆಯುವಷ್ಟರಲ್ಲಿ 16 ರಿಂದ 18 ಬಾರಿ ನೀರು ಹಾಯಿಸಬೇಕಾಗುತ್ತದೆ.
ಇನ್ನು ಶುಂಠಿಗೂ ಕೂಡ ಹುಳು ಬರುವುದರಿಂದ ಆಗಾಗ್ಗೆ ಔಷಧಿ ಸಿಂಪಡಿಸಬೇಕಾಗುತ್ತದೆ. ಶುಂಠಿ ಮಣ್ಣಿನಲ್ಲಿರುವ ಹೆಚ್ಚು ಸಾರವನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಶುಂಠಿಗೆ ಅತ್ಯಧಿಕ ಪ್ರಮಾಣದ ಪೋಷಕಾಂಶಗಳು ಬೇಕಾಗುವುದರಿಂದ ಗೊಬ್ಬರವನ್ನು ಹೆಚ್ಚೆಚ್ಚು ಹಾಕಬೇಕು.
ಶುಂಠಿ ಬಿತ್ತನೆ ಮಾಡಿದ 210 ದಿನದಿಂದ 215 ದಿನದಲ್ಲಿ ಕಟಾವು ಮಾಡಬಹುದಾಗಿದೆ, ಆದರೆ ಶುಂಠಿಯನ್ನು ಸಂಸ್ಕರಿಸುವ ಉದ್ದೇಶದಿಂದ 245 ರಿಂದ 260 ದಿನಗಳ ವರೆಗೆ ಅಂದೆ ಶುಂಠಿ ಗಿಡದ ಎಲೆ ಹಳದಿ ಬಣ್ಣ ಬರುವವರೆಗೂ ಭೂಮಿಯಲ್ಲೇ ಬಿಡಲಾಗುತ್ತದೆ.
ಶಿಲ್ಪ.ಡಿ.ಚಕ್ಕೆರೆ
Advertisement