ಮಾವು ಹಣ್ಣಾಗಿಸಲು ಈಗ ಎಥಿಲಿನ್ ಬಳಕೆ

ಮಾವು ಮಾಗಿಸಲು ವ್ಯಾಪಾರಸ್ಥರು ಹಾನಿಕಾರಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಈ ಸಲ ನಡೆಯುತ್ತಿರುವುದೇ ಬೇರೆ. ಮಾವಿನ ಕಾಯಿ ಬೇಗ ಹಣ್ಣಾಗುವಂತೆ ಮಾಡಲು ವ್ಯಾಪಾರಸ್ಥರು ಎಥಿಲಿನ್ ಅನಿಲ ಬಳಸುತ್ತಿದ್ದಾರೆ...
ಮಾವು ಹಣ್ಣಾಗಿಸಲು ಈಗ ಎಥಿಲಿನ್ ಬಳಕೆ (ಸಾಂದರ್ಭಿಕ ಚಿತ್ರ)
ಮಾವು ಹಣ್ಣಾಗಿಸಲು ಈಗ ಎಥಿಲಿನ್ ಬಳಕೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಾವು ಮಾಗಿಸಲು ವ್ಯಾಪಾರಸ್ಥರು ಹಾನಿಕಾರಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಈ ಸಲ ನಡೆಯುತ್ತಿರುವುದೇ
ಬೇರೆ. ಮಾವಿನ ಕಾಯಿ ಬೇಗ ಹಣ್ಣಾಗುವಂತೆ ಮಾಡಲು ವ್ಯಾಪಾರಸ್ಥರು ಎಥಿಲಿನ್ ಅನಿಲ ಬಳಸುತ್ತಿದ್ದಾರೆ.

ಮಾವಿನ ಕಾಯಿ ನೈಸರ್ಗಿಕವಾಗಿಯೇ ಹಣ್ಣಾಗಲು ಬಿಡಬೇಕು. ಅದರಲ್ಲೂ ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣು ಮಾಡುವುದು ತಪ್ಪು ಎಂದು ತೋಟಗಾರಿಕಾ ಇಲಾಖೆ ರೈತರಿಗೆ,
ವ್ಯಾಪಾರಸ್ಥರಿಗೆ ಸೂಚಿಸಿದೆ. ಆದರೆ, ಅಗತ್ಯವಿದ್ದರೆ ಎಥಿಲಿನ್ ಅನಿಲ ಬಳಸಿ ಹಣ್ಣು ಮಾಡಬಹುದು ಎಂದು ಇಲಾಖೆ ಸಲಹೆ ನೀಡುತ್ತಿದೆ. ಮಾವು ಹಣ್ಣಾಗಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಿರುವುರಿಂದ ಸೇವಿಸುವವರಿಗೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ಬರುವ ಸಾಧ್ಯತೆಯಿದೆ. ಹೀಗಾಗಿ ಆರೋಗ್ಯದ ಮೇಲೆ ಏನೂ ಪರಿಣಾಮ ಬೀರದ ಎಥಿಲಿನ್ ಗ್ಯಾಸ್ ಬಳಸಿ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ತೋಟಗಾರಿಕಾ ಇಲಾಖೆಯಿಂದ ಲಾಲ್‍ಬಾಗ್‍ನಲ್ಲಿ ನಡೆಯುವ ಮಾವುಮೇಳ ಸೇರಿದಂತೆ ರೈತರು ಒಂದೆಡೆ ಸೇರುವ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಕ್ಯಾಲ್ಸಿಯಂ ಕಾರ್ಬೈಡ್ ಬದಲು ಎಥಿಲಿನ್ ಗ್ಯಾಸ್ ಬಳಸುವಂತೆ ಅರಿವು ಮೂಡಿಸುತ್ತಿದ್ದಾರೆ. `ಮ್ಯಾಗಿ' ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಆಹಾರ ಇಲಾಖೆ, ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸದಂತೆ ಕಡಿವಾಣ ಹಾಕಿದೆ. ಎಥಿಲಿನ್ ಗ್ಯಾಸ್ ರಾಸಾಯನಿಕವಾಗಿದ್ದರೂ ಇದನ್ನು ಮಾವಿಗೆ ನೇರವಾಗಿ ಸಿಂಪಡಿಸುವುದಿಲ್ಲ. ಬದಲಾಗಿ, ಹಣ್ಣುಗಳಿರುವ ಜಾಗದಲ್ಲಿ ಗಾಳಿಗೆ ಮಾತ್ರ ಸಿಂಪಡಿಸುವುದರಿಂದ ಆರೋಗ್ಯದ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಹೀಗಾಗಿ ನೈಸರ್ಗಿಕವಾಗಿ ಮಾವು ಹಣ್ಣು ಮಾಡಲು ಕಾಯುವ ರೂಢಿ ಕಡಿಮೆಯಾಗುತ್ತಿದೆ.

`ಹಲವು ವರ್ಷಗಳಿಂದ ರೈತರು ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಿದ್ದಾರೆ. ಈ ಸಲ ಏಪ್ರಿಲ್‍ನಿಂದ ಮೇವರೆಗೆ ಎಥಿಲಿನ್ ಗ್ಯಾಸ್ ಬಳಸುತ್ತಿದ್ದು, ಮಾವು ಬೇಗ ಹಣ್ಣಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈತ ಸಂಘಟನೆಗಳ ಮೂಲಕವೂ ಈ ಬಗ್ಗೆ ಸ್ಥಳೀಯವಾಗಿ ಅರಿವು ಮೂಡಿಸಲಾಗುತ್ತಿದೆ' ಎಂದು ಶ್ರೀನಿವಾಸಪುರ ತಾಲೂಕಿನ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ವಿ. ಭಾಸ್ಕರ ರೆಡ್ಡಿ ತಿಳಿಸಿದ್ದಾರೆ.

ವ್ಯತ್ಯಾಸವೇನು?

ಮಾರಕವಾದ ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವನ್ನು ನೇರವಾಗಿ ಹಣ್ಣಿಗೆ ಸಿಂಪಡಿಸಲಾಗುತ್ತದೆ. ಅಂದರೆ ಹಣ್ಣನ್ನು ರಾಸಾಯನಿಕ ಇರುವ ದ್ರಾವಣದಲ್ಲಿ ಮುಳುಗಿಸಲಾಗುತ್ತದೆ. ಆದ್ದರಿಂದ ಇದು ಹೆಚ್ಚು ಅಪಾಯಕಾರಿ. ಆದರೆ, ಎಥಿಲಿನ್ ಅನಿಲವನ್ನು ಗಾಳಿಯಲ್ಲಿ ಸಿಂಪಡಿಸುವುದರಿಂದ ಹಣ್ಣಿನಲ್ಲಿ ಅನಿಲ ಸೇರುವುದಿಲ್ಲ. ನೇರವಾಗಿ ಮಾವಿನ ಹಣ್ಣುಗಳ ಮೇಲೆ ಸಿಂಪಡಿಸದೆ ಮಾವು ಇರುವ ಸ್ಥಳದಲ್ಲಿ ಮಾತ್ರ ಸಿಂಪಡಿಸುವುದರಿಂದ ಅಪಾಯ ಕಡಿಮೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com