ಭಾರತದಲ್ಲಿ ಬದಲಾಗುತ್ತಿರುವ ಬೇಸಾಯ ಪದ್ಧತಿ

"ವ್ಯವಸಾಯ ಎಂದರೆ ಮನೆ ಮಕ್ಕಳೆಲ್ಲಾ ಸಾಯ" ಎನ್ನುವ ಗಾದೆ ಇತ್ತು. ಮೊದಲೇ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ,....
ಬದಲಾದ ಕೃಷಿ
ಬದಲಾದ ಕೃಷಿ

"ವ್ಯವಸಾಯ ಎಂದರೆ ಮನೆ ಮಕ್ಕಳೆಲ್ಲಾ ಸಾಯ" ಎನ್ನುವ ಗಾದೆ ಇತ್ತು. ಮೊದಲೇ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ, ಆ ಗಾದೆ ಮಾತಿನಂತೆ ಹಿಂದೆಲ್ಲಾ ಜಮೀನಲ್ಲಿ ಎಷ್ಟೆಲ್ಲಾ ವ್ಯವಸಾಯ ಮಾಡಿದರೂ ಅವರ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿರಲಿಲ್ಲ. ಅಪ್ಪ ನೇಗಿಲು ಹಿಡಿದುಕೊಂಡು ಜಮೀನಿಗೆ ಹೋದರೆ, ಅವನ ಹಿಂದೆ, ಹೆಂಡತಿ ಮಕ್ಕಳು ಸಹ ಹೋಗಿ ಕೆಲಸ ಮಾಡಬೇಕಿತ್ತು. ಎತ್ತುಗಳ ಹಿಂದೆ ನೇಗಿಲು ಹಿಡಿದು ಹಿಡಿದು ದಿನಪೂರ್ತಿ ಓಡಾಡಿದ್ರೂ 1 ಗುಂಟೆ ಜಮೀನನ್ನು ಉಳೋಕೆ ಸಾಧ್ಯವಾಗ್ತಿರಲಿಲ್ಲ. ಹಾಗೆ ಬಿತ್ತನೆ, ಕಳೆ, ಗೊಬ್ಬರ ಹಾಕೋದು, ಕಟಾವು, ಸೇರಿದಂತೆ ಎಲ್ಲಾ ಕೆಲಸಗಳಿಗೂ ಮನುಷ್ಯನನ್ನೆ ಬಳಸಿಕೊಳ್ಳುತ್ತಾ ಇದ್ದುದ್ದರಿಂದ ಸಮಯ ಹಾಗೂ ಹಣ ಎರಡು ಅಧಿಕವಾಗಿ ವ್ಯರ್ಥವಾಗ್ತಿತ್ತು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಭಾರತೀಯ ಕೃಷಿಯಲ್ಲಿ ಅತ್ಯದ್ಭುತ ಬದಲಾವಣೆ, ಕ್ರಾಂತಿಗಳುಂಟಾಗಿದೆ. ನೇಗಿಲ ಜಾಗದಲ್ಲಿ ಟ್ರ್ಯಾಕ್ಟರ್, ಟಿಲ್ಲರ್, ಬಂದಿವೆ. ಮೊದಲಿನ ಹಾಗೆ 1 ಎಕರೆ ಜಮೀನನ್ನು ವಾರಪೂರ್ತಿ ಎತ್ತುಗಳ ಹಿಂದೆ ಅಲೆದಾಡಿ ಉಳುವಂತಿಲ್ಲ, ಕೇವಲ 1 ಗಂಟೆಯಲ್ಲೇ ಟ್ರ್ಯಾಕ್ಟರ್ ಉಳುಮೆ ಮಾಡುತ್ತದೆ. ಜೊತೆಗೆ ಬಿತ್ತನೆ ಮಾಡಲು, ಕೊಯ್ಲು ಮಾಡಲು ಯಂತ್ರಗಳು ಬಂದಿವೆ. ಹಿಂದಿನ ಹಾಗೆ ಈಗ ಹೆಚ್ಚು ಮ್ಯಾನ್ ಪವರ್ ಆವಶ್ಯಕತೆ ಇಲ್ಲ. ಕೇವಲ ಒಬ್ಬ ಮನುಷ್ಯ 10 ರಿಂದ 20 ಎಕರೆ ಜಮೀನಲ್ಲಿ ವ್ಯವಸಾಯ ಮಾಡಬಹುದಾಗಿದೆ.

ಋಗ್ವೇದ ಕಾಲದಿಂದಲೂ ಭಾರತದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವಂತೆ. ಈಗ ಸಾಂಪ್ರಾದಾಯಿಕ ಕೃಷಿ ವಿಧಾನವನ್ನು ಹೆಚ್ಚು ಅನುಸರಿಸದ ರೈತ ವೈಜ್ಞಾನಿಕ ಹಾಗೂ ತಂತ್ರಜ್ಞಾನದಿಂದ ಕೂಡಿದ ಬೇಸಾಯ ಮಾಡುತ್ತಿದ್ದಾನೆ. ಹೆಚ್ಚಾಗಿ ವಾಣಿಜ್ಯ ಬೆಳೆಗಳತ್ತ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾನೆ.

ಹಿಂದೆಲ್ಲಾ ಹೆಚ್ಚಾಗಿ ಮಳೆಯನ್ನೇ ಆಧರಿಸಿ ವ್ಯವಸಾಯ ಮಾಡಲಾಗುತಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ಮಳೆಯಿಲ್ಲದಿದ್ದರೂ, ಬೋರ್ ಮೂಲಕ, ಹನಿ ನೀರಾವರಿ ಮುಂತಾದ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ರೈತ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿಕೊಂಡಿರುತ್ತಾನೆ. ಇನ್ನು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಂತೆ ರೈತರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ವ್ಯವಸಾಯವೇ ಭಾರತದ ಪ್ರಮುಖ ಕಸುಬಾಗಿತ್ತು. ಹೀಗಾಗಿ ಅಂದಿನಿಂದ ಇಂದಿನವರೆಗೂ ದೇಶದ ಪ್ರಮುಖ ಉದ್ಯೋಗ ಬೇಸಾಯವೇ. ನಂಬಿದವರನ್ನು ಈ ಭೂಮಿ ತಾಯಿ ಕೈ ಬಿಡಲ್ಲ ಎಂಬುದು ಭಾರತೀಯ ರೈತರ ನಂಬಿಕೆ. ಒಂದು ಬಾರಿ ಯಾವುದೇ ಬೆಳೆ ಬೆಳೆಗದು ನಷ್ಟವಾಯಿತಂದ್ರೆ, ಅಲ್ಲಿಗೆ ರೈತ ಕೃಷಿ ಮಾಡುವುದನ್ನು ಬಿಡಲ್ಲ. ಮತ್ತೆ ಬೇರೆ ಬೆಳೆದು ಹಣ ಗಳಿಸಲು ಪ್ರಯತ್ನ ಮಾಡ್ತಾನೆ. ಒಂದು ರೀತಿ ನಿರಂತರ ಪ್ರಯತ್ನ ನಡೆಯುತ್ತಲೇ ಇರುತ್ತದೆ.

ಇನ್ನು ಹಿಂದೆಲ್ಲಾ ರೈತ ತನ್ನ ಬೆಳೆಗೆ ಸಾವಯವ ಗೊಬ್ಬರ ಬಳಸುತ್ತಿದ್ದ. ಆದರೆ ಇಂದು ಕೃಷಿಯ ಅಗತ್ಯಕ್ಕನುಗುಣವಾಗಿ ಗೊಬ್ಬರದ ಪ್ರಮಾಣ ಸಿಗದೇ ಇರುವುದರಿಂದ ರಾಸಾಯನಿಕ ಗೊಬ್ಬರಗಳ ಮೊರೆ ಹೋಗಿದ್ದಾನೆ. ರಾಸಾಯನಿಕ ಗೊಬ್ಬರಗಳ ಬಳಕೆ ಅನಿವಾರ್ಯ ವಾಗಿರುವುದರಿಂದ ರೈತ ಇವುಗಳ ಉಪಯೋಗ ಮಾಡುತ್ತಿದ್ದಾನೆ.

ಸ್ವಾತಂತ್ರ್ಯ ನಂತರ ಭಾರತದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಗಣನೀಯ. ಪ್ರಮಾಣದ ಏರಿಕೆಯಾಗಿದೆ. ಕೆಲವೊಮ್ಮೆ ಅತೀವೃಷ್ಟಿ, ಕೆಲವೊಮ್ಮೆ ಅನಾವೃಷ್ಠಿಗಳಿಂದ ಬೆಳೆ ನಾಶವಾಗಿದ್ದೂ ಇದೆ. ಆದರೆ ಭಾರತದ ಜನಸಂಖ್ಯೆ ಪ್ರಮಾಣದ ಅನುಗುಣವಾಗಿ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿಲ್ಲ. ಹೀಗಾಗಿ ಕೆಲವೊಂದು ಆಹಾರ ಧಾನ್ಯಗಳ ಆಮದು ಅಗತ್ಯವಾಗಿದೆ. ಇನ್ನು ದೇಶದ ಕೆಲವು ರಾಜ್ಯಗಳಲ್ಲಿ ಇನ್ನೂ ರಸ್ತೆಗಳ ಸಂಪರ್ಕ ಸರಿಯಾದ ರೀತಿಯಲ್ಲಾಗಿಲ್ಲ. ಉತ್ತಮ ರಸ್ತೆ ಸೌಲಭ್ಯವಿಲ್ಲದಿರುವುದರಿಂದ ಸಾಗಣೆ ಮೇಲೆ ಪರಿಣಾಮ ಬೀರುತ್ತದೆ. ತೀರಾ ಹದಗೆಟ್ಟ ರಸ್ತೆಗಳಿಂದಾಗಿ ವಹಿವಾಟು ಹೇಳಿಕೊಳ್ಳುವಂತ ಮಟ್ಟದಲ್ಲಿ ಬೆಳೆದಿಲ್ಲ. ಆದರೆ ಸರಕು ಸಾಗಣೆಗೆ ಅವಶ್ಯಕವಾದ ವಾಹನಗಳು ಪೂರೈಕೆಯಿದೆ.

ಭಾರತೀಯ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚು. ಯಾವುದೇ ಒಂದು ಉತ್ಪನ್ನವನ್ನು ರೈತ ಮಾರಾಟಬೇಕು ಎಂದರೆ ಆತನಿಗೆ ನೇರ ಮಾರುಕಟ್ಟೆ ಸಂಪರ್ಕ ಇರುವುದಿಲ್ಲ. ಯಾಕಂದರೆ ಭಾರತೀಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಅವಿದ್ಯಾವಂತರಾಗಿರುವುದು. ಜೊತೆಗೆ ಮಾರುಕಟ್ಟೆ ಜ್ಞಾನ ಕಡಿಮೆ ಇರುವುದು ಕೂಡ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲ್ಲ ಹೀಗಾಗಿ. ಅವರಿಗೆ ಮಾರುಕಟ್ಟೆ ದರ, ಮಾರಾಟದ ಬಗ್ಗೆ ಅಷ್ಟೊಂದು ಜ್ಞಾನವಿಲ್ಲದಿರುವುದರಿಂದ ಕಮಿಷನ್ ಏಜೆಂಟ್ ಗಳು ರೈತರ ದಾರಿ ತಪ್ಪಿಸುತ್ತಾರೆ.

ಇನ್ನೂ ಹಿಂದೆಲ್ಲಾ ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಸರಿಯಾಗ ಅನುಕೂಲತೆಗಳು ಇರಲಿಲ್ಲ. ಹೀಗಾಗಿ ತರಕಾರಿ ಹಣ್ಣು ಸೇರಿದಂತೆ ಇತರೆ ಬೆಳೆಗಳು ಬೇಗ ಹಾಳಾಗುತ್ತಿದ್ದವು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ದೊಡ್ಡ ದೊಡ್ಡ ಶೈತ್ಯಾಗಾರಗಳಿದ್ದು ರೈತರ ಉತ್ಪನ್ನಗಳನ್ನು ಸಂರಕ್ಷಿಸಲು ಉಪಯುಕ್ತವಾಗಿವೆ.

ಇನ್ನು ಸರ್ಕಾರ ಕೂಡ ರೈತರಿಗೆ ಮಣ್ಣಿನ ಸಂರಕ್ಷಣೆ, ಬಳಕೆ, ಪರೀಕ್ಷೆಗಳ ಬಗ್ಗೆ ಜ್ಞಾನ ನೀಡಲು ರೇಡಿಯೋ ಹಾಗೂ ದೂರದರ್ಶನಗಳಲ್ಲಿ ಉಪಯುಕ್ತವಾದ ಮಾಹಿತಿ ನೀಡುತ್ತಿದೆ. ಜೊತೆಗೆ ಕೃಷಿ ಸಂಬಂಧ ಕಾಲ್ ಸೆಂಟರ್ ತೆರೆದು ರೈತರು ತಮ್ಮ ಸಂಶಯಗಳ ನಿವಾರಣೆ, ಗೊಬ್ಬರ, ಔಷಧಿ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ರೈತರಿಗಿರುವ ಗೊಂದಲ ನಿವಾರಣೆಗೆ ಸಹಾಯ ಮಾಡುತ್ತಿದೆ.

ಒಟ್ನಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕನುಗುಣವಾಗಿ ಭಾರತೀಯ ರೈತ ಕೂಡ ಬದಲಾಗಿ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಳ್ಳುತ್ತಿದ್ದಾನೆ.

-ಶಿಲ್ಪ.ಡಿ.ಚಕ್ಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com