ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ನಿರ್ದಿಷ್ಟ ಉದ್ಯೋಗ ಸಿಗುವುದು ಕಷ್ಟದ ಕೆಲಸವಾಗಿದೆ. ಆ ಕೆಲಸ ಈ ಕೆಲಸ ಎಂದು ಹತ್ತಾರು ಕಡೆ ತಿರುಗಿ ಯಾವೊಂದು ಉದ್ಯೋಗ ಸಿಗದಿದ್ದಾಗ ನಿರುದ್ಯೋಗಿ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಳ್ಳದೇ ಹೈನುಗಾರಿಕೆಯನ್ನು ಪ್ರಾರಂಭಿಸಿ ಕುಟುಂಬದ ಆರ್ಥಿಕ ಪ್ರಗತಿಯನ್ನು ಸುಧಾರಿಸುವ ಜತೆಗೆ ಬದುಕನ್ನು ಸಾರ್ಥಕಗೊಳಿಸಿಕೊಂಡ ಯುವಕನೊಬ್ಬನ ಯಶೋಗಾಥೆ.
ಹಳ್ಳಿಗಳಲ್ಲಿ ಪಶುಗಳನ್ನು ಸಾಕಾಣೆ ಮಾಡುವುದು ಒಂದು ರೀತಿಯಲ್ಲಿ ಸುಲಭದ ಕೆಲಸ ಆದರೆ ಅದೇ ಕೆಲಸ ನಗರದಲ್ಲಿ ಮಾಡುವುದು ಎಂದರೆ ಕಷ್ಟದ ಕೆಲಸ. ಹಳ್ಳಿಗಳಲ್ಲಾದರೆ ಬೆಟ್ಟ ಗುಡ್ಡಗಾಡುಗಳಿಗೆ ದನಗಳನ್ನು ಹಟ್ಟಿದರೆ ಅಷ್ಟೋಇಷ್ಟೊ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ನಗರ ಪ್ರದೇಶಗಳಲ್ಲಿ ಈ ಕೆಲಸ ತುಂಬಾನೆ ಕಷ್ಟ. ಕಾಂಕ್ರಿಟ್ ನೆಲದಲ್ಲಿ ಮಳೆಯಿಂದ ಬಿದ್ದ ನೀರೆ ಹಿಂಗುವುದಿಲ್ಲ. ಅಂತಹದರಲ್ಲಿ ಹುಲ್ಲು ಬೆಳೆಯುವ ಸಾಧ್ಯತೆಯಾದರೂ ಇದೆಯಾ? ಹೀಗಿದ್ದರು, ಒಣ ಹುಲ್ಲನ್ನೇ ಬಳಸಿಕೊಂಡು ಹೈನುಗಾರಿಕೆ ಮಾಡುತ್ತಿರುವ ಈ ಯುವಕ ಶಿವರಾಜ್ ಮೂಲತಃ ನಗರ ನಿವಾಸಿ. ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಗೆ ಒಳಪಟ್ಟಿರುವ ಕೃಷ್ಣರಾಜಪುರ ಪೂರ್ವ ತಾಲೂಕಿನ ಚಿಕ್ಕದೇವಸಂದ್ರದಲ್ಲಿ ನೆಲೆಸಿದ್ದಾನೆ.
ಮುಂಜಾನೆ 4 ಗಂಟೆಗೆ ಏಳುವ ಶಿವರಾಜ್ ತನ್ನಲ್ಲಿರುವ 10 ರಿಂದ 15 ದನಗಳ ಪೋಷಣೆಯಲ್ಲಿ ನಿರತನಾಗುತ್ತಾನೆ. ಎದ್ದ ನಂತರ ಮೊದಲಿಗೆ ದನದ ಕೊಟ್ಟಿಗೆಯನ್ನು ಶುಚಿ ಮಾಡಿ, ದನಗಳನ್ನು ತೊಳೆಯುತ್ತಾನೆ. ನಂತರ 5 ಗಂಟೆ ಸಮಯಕ್ಕೆ ಹಾಲು ಕರೆಯಲು ನಿರತನಾಗುತ್ತಾನೆ. 9 ರಿಂದ 10 ಹಸುಗಳು ಹಾಲು ಕೊಡುತ್ತವೆ. ಪ್ರತಿ ದಿನ ಅಂದರೆ ಬೆಳಗ್ಗೆ ಸಂಜೆ ಎರಡು ಸಲ ಸೇರಿ 120 ರಿಂದ 130 ಲೀಟರ್ ಹಾಲು ಕರೆಯುತ್ತಾನೆ. ನಗರದ ಡೈರಿಗಳಲ್ಲಿ ಒಂದು ಲೀಟರ್ ಹಾಲಿಗೆ 22.50 ರು. ಹಾಗೂ ಸರ್ಕಾರದ ಕಡೆಯಿಂದ 4 ರು. ಒಟ್ಟಾರೆ 26.50 ರುಪಾಯಿ ಒಂದು ಲೀಟರ್ ಹಾಲಿಗೆ ಸಿಗುತ್ತಿದೆ.
ಹಸುಗಳಿಗೆ ನಿತ್ಯವೂ ಹಿಂಡಿ, ಬೂಸಾ ಮುಂತಾದ ಆಹಾರ ನೀಡಲಾಗುತ್ತದೆ. ಔಷಧೋಪಚಾರ, ಪಶುಖಾದ್ಯ ಸೇರಿದಂತೆ ನಿತ್ಯವೂ ಕನಿಷ್ಠ 700 ರಿಂದ 900 ರು.ಗಳವರಗೆ ಖರ್ಚು ಬರುತ್ತದೆ, ಖರ್ಚು-ವೆಚ್ಚ ಕಳೆದು ಪ್ರತಿ ದಿನವೂ 1,500 ಸಾವಿರ ರು.ಗಳ ಲಾಭಾಂಶ ದೊರೆಯುತ್ತದೆ. ಉಪಕಸುಬಾಗಿ ಹೈನುಗಾರಿಕೆ ತುಂಬಾ ಲಾಭದಾಯಕವಾಗಿದ್ದು. ನಿರುದ್ಯೋಗಿ ಯುವಕರು ಆಸಕ್ತಿ ವಹಿಸಿ ಒಳ್ಳೆಯ ಹೈನುಗಾರಿಯನ್ನು ಆರಂಭಿಸಿದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಜೊತೆಗೆ ಸ್ವಾಭಿಮಾನ ಜೀವನ ಹೊಂದುವುದರಲ್ಲಿ ಎರಡು ಮಾತಿಲ್ಲ ಎಂದು ಯುವ ರೈತ ಶಿವರಾಜ್ ಅಭಿಮಾನದಿಂದ ಹೇಳುತ್ತಾರೆ.
ಯುವಕರಿಗೆ ಮಾದರಿಯಾದ ಶಿವರಾಜ್
ಹೈನುಗಾರಿಕೆ ಲಾಭದಾಯಕ ಉದ್ಯೋಗವಾಗಿದ್ದು, ಅದನ್ನು ನಗರ ಪ್ರದೇಶದಲ್ಲಿ ವಾಸಿಸುತ್ತಾ ಹೈನುಗಾರಿಕೆ ಮೂಲಕ ಜೀವನ ನಡೆಯುತ್ತಿರುವ ಶಿವರಾಜ್ ಬಡತನದಿಂದ ಬಂದರೂ ಪರಿಶ್ರಮದಿಂದ ದುಡಿದರೇ ಯಾವುದೇ ಉದ್ಯೋಗದಿಂದ ಆರ್ಥಿಕವಾಗಿ ಬಲಾಢ್ಯರಾಗಲು ಸಾಧ್ಯ ಎಂಬುದನ್ನು ತೋರಿಸಿಕೊಡುವ ಮುಖಾಂತರ ಯುವಕರಿಗೆ ಮಾದರಿಯಾಗಿದ್ದಾರೆ. ಹೈನುಗಾರಿಕೆಗೆ ಇನ್ನು ಮುಂದೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖಾಂತರ ರೈತರಿಗೆ ಹಸು ಖರೀದಿಸಲು ಕರ್ನಾಟಕ ಹಾಲು ಮಹಾಮಂಡಳದ ವತಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು. ಯುವಕ ಶಿವರಾಜ್ ರಂತೆ ಆರ್ಥಿಕವಾಗಿ ಬಲಾಢ್ಯರಾಗಲು ಮುಂದಾಗಬೇಕು.
ಕೆಎಂಎಫ್ ನಿಂದ ಸಕಲ ಸೌಲಭ್ಯ
ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ., ಇದು ಕರ್ನಾಟಕ ರಾಜ್ಯದ ಶೃಂಗ ಸಂಸ್ಥೆಯಾಗಿದ್ದು, ಇಡೀ ರಾಜ್ಯಾದ್ಯಂತ 3 ದಶಕಗಳಿಂದ 13 ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳ ಮೂಲಕ ಹಾಲು ಅಭಿವೃದ್ಧಿ ಚಟುವಟಿಕೆಗಳನ್ನು ಜಾರಿಗೊಳಿಸುತ್ತಾ ನಗರ ಹಾಗೂ ಗ್ರಾಮೀಣ ಹಾಲು ಉತ್ಪಾದಕರ ಜೀವನಕ್ಕೆ ಅಭ್ಯುದಯವನ್ನು ಒದಗಿಸಿದೆ.
ಇದು ಕೆ.ಎಂ.ಎಫ್ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯ ಅಭಿವೃದ್ಧಿ ಚಟುವಟಿಕೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
ಕೆ.ಎಂ.ಎಫ್. ಇದು ಹಾಲು ಉತ್ಪಾದಕರ ರೈತರು ಮತ್ತು ಗ್ರಾಹಕರ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಇದು ಗ್ರಾಮೀಣ ಹಾಲು ಉತ್ಪಾದಕರಿಗೆ ನಿರಂತರ ಮಾರುಕಟ್ಟೆಯನ್ನು ಒದಗಿಸುವುದು ಹಾಗೂ ಗ್ರಾಹಕರ ಬೇಡಿಕೆಗೆ ಅನುಸಾರ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಹಾಲು ಉತ್ಪಾದನೆಯ ಅಭಿವೃದ್ಧಿಗೆ ಒತ್ತು ಕೊಡುವ ಉದ್ದೇಶದಿಂದ ಅವಶ್ಯ ತಾಂತ್ರಿಕ ಸೌಲಭ್ಯಗಳು ಜಾನುವಾರುಗಳಿಗೆ ಸಮತೂಕದ ಪಶು ಆಹಾರ, ಪಶುಪಾಲನಾ ನೆರವು ಎ. ಐ ಕೇಂದ್ರಗಳಿಗೆ ಎಲ್ .ಎನ್ 2 ಕಂಟೇನರ್ ಗಳು ಮತ್ತು ಚುಚ್ಚುಮದ್ದುಗಳನ್ನು ನಿರಂತರವಾಗಿ ಹಾಲು ಉತ್ಪಾದಕರಿಗೆ ಸರಬರಾಜು ಮಾಡಲಾಗುತ್ತಿದೆ.
- ವಿಶ್ವನಾಥ್. ಎಸ್
Advertisement