ಸಂಬಂಧಗಳನ್ನು ಗಟ್ಟಿಮಾಡಬಲ್ಲದು 'ದೀಪ' ಎಂಬ ಶಕ್ತಿ

ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ...
ಸಂಬಂಧಗಳನ್ನು ಗಟ್ಟಿಮಾಡಬಲ್ಲದು 'ದೀಪ' ಎಂಬ ಶಕ್ತಿ
ಸಂಬಂಧಗಳನ್ನು ಗಟ್ಟಿಮಾಡಬಲ್ಲದು 'ದೀಪ' ಎಂಬ ಶಕ್ತಿ

ಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ. ಬೆಳಗುವ ದೀಪ ಮನಸ್ಸಿನ  ಕತ್ತಲೆಯನ್ನು ದೂರಗೊಳಿಸುತ್ತದೆ ಮತ್ತು  ಎಲ್ಲಾ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ.

ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.

ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ. ಎಂತಹ ದೊಡ್ಡ ವ್ಯಕ್ತಿಯೇ ಆದರೂ ದೀಪ ಬೆಳಗಬೇಕು ಎಂದಾಕ್ಷಣ ತಮ್ಮ ಪಾದರಕ್ಷೆಗಳನ್ನು ಬಿಚ್ಚಿ ಬರುತ್ತಾರೆ. ಅದು ದೀಪಕ್ಕಿರುವ ಮಹತ್ವವೂ ಹೌದು. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.

ಹಿಂದೆಲ್ಲಾ ನಮ್ಮ ಹಿರಿಯರು ಮಣ್ಣಿನ ದೀಪಗಳನ್ನು ಬಳಸುತ್ತಿದ್ದರು. ಪ್ರತೀ ನಿತ್ಯ ಮನೆಯ ಗೃಹಿಣಿಯರು ಸ್ನಾನ  ಮಾಡಿ ಶುಭ್ರತೆಯಿಂದ ಹಣೆಗೆ ಕುಂಕುಮ, ಹೂ ಮುಡಿದು ಬೆಳಿಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲೂ ದೀಪ ಹಚ್ಚುತ್ತಿದ್ದರು. ಹೊರಗಿಂದ ದಣಿದು ಬಂದ ಗಂಡ ಮನೆಯಲ್ಲಿನ ಶಾಂತಿ ವಾತಾವರಣ ಹಾಗೂ ಹೆಣ್ಣಿನ ಮುಖ ನೋಡುತ್ತಿದ್ದಂತೆ ಹೊರಗಿನ ನೋವನ್ನು ಮರೆತುಬಿಡುತ್ತಿದ್ದರು. ಪ್ರೀತಿ ವಾತ್ಸಲ್ಯಕ್ಕೆ ಸಾಕಷ್ಟು ಬೆಲೆ ಇರುತ್ತಿತ್ತು. ಹಾಗಾಗಿಯೇ ಅಂದಿನ ದಿನಗಳಲ್ಲಿ ಡಿವೋರ್ಸ್ ಎಂಬುದಕ್ಕೆ ಸರಿಯಾದ ಅರ್ಥ ಇರಲಿಲ್ಲ. ಸಂಬಂಧಗಳು ಗಟ್ಟಿಯಾಗಿರುತ್ತಿತ್ತು ಎಂದು ಭಾರತೀಯ ಸಂಸ್ಕೃತಿಯ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ದೀಪ ಹಚ್ಚುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ದೀಪ ಹಚ್ಚಬೇಕಾದರೆ ಅಯ್ಯೋ ಯಾರು ಮಾಡುತ್ತಾರೆ ಈ ಕೆಲಸವೆಲ್ಲ. ಹೊರಗಡೆ ದುಡಿದು ಮನೆಗೆ ಹೋಗಿ ಅಡುಗೆ ಮಾಡಿ ಊಟ ಮಾಡುವುದೇ ದೊಡ್ಡ ಕೆಲಸವಾಗಿ ಬಿಡುತ್ತೆ, ಈ ಮಧ್ಯೆ ಇದೆಲ್ಲ ಯಾರು ಮಾಡುತ್ತಾರೆ. ಆರ್ಟಿಫಿಶಿಯಲ್ ದೀಪ ತಂದು ಸ್ವಿಚ್ ಹಾಕಿದರೆ ಸಾಕು ಅದೂ ಕೂಡ ದೀಪವಲ್ಲವೇ ಎನ್ನುತ್ತಾರೆ. ಮನುಷ್ಯನ ಸೋಮಾರಿತನ, ನಿರ್ಲಕ್ಷದಿಂದಾಗಿ ಮನೆಯಲ್ಲಿನ ಶಾಂತಿ ಹಾಳಾಗುತ್ತಿದೆ ಎಂದರೆ ತಪ್ಪಾಗಲಾರದು.



ದೇವರಕೋಣೆಯೆಂದರೆ ದೇವರ ಮೂರ್ತಿ ಅಥವಾ ಭಾವಚಿತ್ರಗಳನ್ನು ಅಡ್ಡಾದಿಡ್ಡಿಯಾಗಿ ಮನಸ್ಸಿಗೆ ಬಂದಂತೆ ಇಡುವ ಒಂದು ಜಾಗವಾಗಿ ಹೋಗಿದೆ. ಕುಟುಂಬದ ಸದಸ್ಯರು ಯಾವ ಯಾವ ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆಯೋ, ಆ ತೀರ್ಥಕ್ಷೇತ್ರದಲ್ಲಿನ ದೇವರ ಚಿತ್ರ ಅಥವಾ ಸಣ್ಣಮೂರ್ತಿಯನ್ನು ತಂದು ಪ್ರತಿಷ್ಠಾಪಿಸುವುದು ನಮ್ಮ ಹವ್ಯಾಸವಾಗಿ ಹೋಗಿದೆ.ದೇವರಕೋಣೆಯೆದುರು ಕುಳಿತರೆ ನಮ್ಮ ಮನಸ್ಸು ಶಾಂತವಾಗಬೇಕು, ಉತ್ಸಾಹವೆನಿಸಬೇಕು, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು.

ದೀಪ ಹಚ್ಚುವ ದೇವರ ಕೋಣೆ ಶುಭ್ರವಾಗಿದ್ದರೆ ಮನೆಯಲ್ಲಿ ನೆಮ್ಮದಿ, ಶಾಂತಿ ಕೂಡಿರುತ್ತದೆ. ದೇವರ ಮನೆ ಹೇಗಿರಬೇಕು. ದೇವರ ಮನೆಯಲ್ಲಿ ದೇವರ ವಿಗ್ರಹ ಹಾಗೂ ಫೋಟೋಗಳನ್ನು ಇಡುವ ಪರಿಕರಗಳೇನು ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

  • ಆರ್ಟಿಫಿಶಿಯಲ್, ಪ್ಲಾಸ್ಟಿಕ್ ದೀಪಗಳಿಗಿಂತ ಮಣ್ಣಿನ ದೀಪ ಶಾಂತಿ, ನೆಮ್ಮದಿ ನಿರ್ಮಾಣಕ್ಕೆ ಶ್ರೇಷ್ಠವಾದುದು.
  • ದೇವರಮನೆಯಲ್ಲಿ ದೀಪ ಇಡುವಾಗ ಅಡ್ಡಾದಿಡ್ಡಿಯಾಗಿಡದೆ, ದೇವರ ಮಧ್ಯೆಯೇ ಇಡಬೇಕು.
  • ದೇವರಕೋಣೆ/ಮಂಟಪದಲ್ಲಿ ದೇವತೆಗಳ ಜೋಡಣೆಯನ್ನು ಶಂಕುವಿನ ಆಕಾರದಲ್ಲಿ ಮಾಡಬೇಕು.
  • ಪೂಜಕನ ಎದುರಿಗೆ ಅಂದರೆ ಶಂಕುವಿನ ಮಧ್ಯಭಾಗದಲ್ಲಿ (ಶಂಕುವಿನ ತುದಿಯಲ್ಲಿ) ಶ್ರೀಗಣಪತಿಯನ್ನು ಇಡಬೇಕು.
  • ಪೂಜೆಯನ್ನು ಮಾಡುವವರ ಬಲಗಡೆಗೆ ಸ್ತ್ರೀ ದೇವತೆಗಳನ್ನಿಡಬೇಕು. ದೇವತೆಗಳನ್ನಿಡುವಾಗ ಮೊದಲು ಕುಲದೇವಿಯನ್ನಿಡಬೇಕು.
  • ಕುಲದೇವಿಯ ನಂತರ ಉಚ್ಚದೇವತೆಗಳ ಉಪರೂಪಗಳಿದ್ದಲ್ಲಿ ಅವುಗಳನ್ನಿಡಬೇಕು. ಅನಂತರ ಆಯಾ ಉಚ್ಚ ದೇವತೆಗಳನ್ನಿಡಬೇಕು.
  • ಪೂಜಕನ ಎಡಗಡೆಗೆ ಇದೇ ರೀತಿಯಲ್ಲಿ ಪುರುಷ ದೇವರು, ಅಂದರೆ ಮೊದಲು ಕುಲದೇವರು, ಅನಂತರ ಉಚ್ಚದೇವರ ಉಪರೂಪಗಳು ಮತ್ತು ಕೊನೆಯಲ್ಲಿ ಉಚ್ಚದೇವತೆಗಳನ್ನಿಡಬೇಕು.
  • ಮಾನವನ ಜಂಜಾಟ ಬದುಕಿನಲ್ಲಿ ನೆಮ್ಮದಿ, ಶಾಂತಿ, ಉಲ್ಲಾಸ, ಪಾಸಿಟಿವ್ ವೈಬ್ರೇಶನ್ ದೊರೆಯುವ ಸ್ಥಳಗಳನ್ನು ಹುಡುಕುತ್ತಾ ಇಂಥ ದೇವರ ಮನೆಗಳನ್ನು ನಿರ್ಮಿಸಬೇಕಾದರೆ ಅದಕ್ಕೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
  • ದೇವರ ವಿಗ್ರಹ ಅಥವಾ ಫೋಟೋಗಳನ್ನಿಡುವ ಜಗಲಿ ಪೂರ್ವದ ಗೋಡೆಗೆ ಇರಬೇಕು.
  • ಪೂಜಿಸುವವರ ಮುಖ ಉತ್ತರಕ್ಕಿರಬೇಕು.
  • ದೇವರ ಸಲಕರಣೆಗಳನ್ನು ಇಡುವ ಕಾಬೋರ್ಡ್‌ಗಳನ್ನು ದಕ್ಷಿಣ ಅಥವಾ ಪಶ್ಚಿಮದಲ್ಲಿ ನಿರ್ಮಿಸಬೇಕು.
  • ಪೂಜೆ ಮಾಡುವಾಗ ಬೆನ್ನು ಬಾಗಿಲಿಗೆ ಹಾಕಬಾರದು. ಎಲ್ಲ ದೇವರು ಒಂದೇ ದಿಕ್ಕನ್ನು ನೋಡುವಂತಿರಬೇಕು.
  • ಒಂದರ ಮೇಲೊಂದು ದೇವರ ಫೋಟೊ ಇಡಬಾರದು.
  • ದೇವರ ಎದುರುಗಡೆ ಕುಳಿತು ಪೂಜೆ ಮಾಡುವಂತಿಲ್ಲ.
  • ದೇವರ ಕೋಣೆಯಲ್ಲಿ ಕೈ ಮುಷ್ಠಿಗಿಂತಲೂ ದೊಡ್ಡದಾದ ವಿಗ್ರಹಗಳನ್ನು ಇಡಬಾರದು.
  • ದೇವರ ಮನೆ ಹೊರತುಪಡಿಸಿ ಬೇರೆಯಲ್ಲೂ ದೇವರ ಫೋಟೋಗಳನ್ನಿಡುವ ಹಾಗಿಲ್ಲ.
  • ದೇವರ ಮನೆಗೆ ಹೊಸ್ತಿಲು ಇರಬೇಕು. ದೇವರ ಮನೆ ಬಾಗಿಲಿಗೆ ಎದುರುಗಡೆ ಶೌಚಾಲಯ, ಮೆಟ್ಟಿಲುಗಳು ಬರಬಾರದು. ದೇವರ ಮನೆಗೂ ಮತ್ತು ಶೌಚಾಲಯಕ್ಕೂ ಒಂದೇ ಗೋಡೆ ಇರಬಾರದು
  • ಒಂದು ಮನೆಯಲ್ಲಿ ಕಡಿಮೆ ಎಂದರೆ ಐದು ದೇವರ ಪೂಜೆ ಮಾಡುವುದು ಅವಶ್ಯಕವಾಗಿದೆ. - ಗಣೇಶ , ಶಿವ , ವಿಷ್ಣು, ಸೂರ್ಯ ಮತ್ತು ದುರ್ಗಾ ಮಾತಾ.  ಯಾವುದೇ ದೇವರ ಪೂಜೆ ಮಾಡುವಾಗ ಸಂಕಲ್ಪ , ಶೃದ್ದೆ ಇರುವುದು ಅವಶ್ಯಕವಾಗಿದೆ.
  • ಮನೆಯಲ್ಲಿ ಎರಡು ಶಿವಲಿಂಗ . ಮೂರು ಗಣೇಶ , ಎರಡು ಶಂಖ , ಎರಡು ದುರ್ಗಾ ಮಾತೆಯ ಮೂರ್ತಿ , ಎರಡು ಗೋಮಾತಾ ಚಕ್ರ ಮತ್ತು ಎರಡು ಸಾಲಿಗ್ರಾಮದ ಪೂಜೆ ಮಾಡುವುದರಿಂದ ಶಾಂತಿ ಲಭಿಸುತ್ತದೆ. .
  • ತುಳಸಿಯ ಹೊರತು ಶಿವನ ಪೂಜೆ ಪೂರ್ಣವಾಗುವುದಿಲ್ಲ ಎಂದು ನಂಬಲಾಗುತ್ತದೆ. ತುಳಸಿಯ ಎಲೆ ಎಲ್ಲ ಹೂಗಳಿಗಿಂತ ಉತ್ತಮ ಎಂದು ನಂಬಲಾಗುತ್ತದೆ.
  • ಬಲಗೈನಿಂದ ಅಥವಾ ಬಲಗೈನ ಬೆರಳಿನ ಸಹಾಯದಿಂದ ಹೂವನ್ನು ದೇವರಿಗೆ ಅರ್ಪಿಸಬೇಕು.
  • ಇನ್ನು ದೇವರಿಗೆ ಅರ್ಪಿಸುವ ಹೂವು ಬಹಳ ಮುಖ್ಯವಾಗಿದ್ದು, ಅಪವಿತ್ರ ಸ್ಥಳದಲ್ಲಿ ಬೆಳೆದ ಪುಷ್ಪ, ಅರಳದಿರುವ ಪುಷ್ಪ ಅಂದರೆ ಮೊಗ್ಗು, ಎಸುಳುಗಳು ಉದುರಿದ ಪುಷ್ಪ, ಗಂಧವಿಲ್ಲದ ಅಥವಾ ಉಗ್ರ ಗಂಧದ ಪುಷ್ಪ, ನೆಲದ ಮೇಲೆ ಬಿದ್ದ ಹೂವು, ಎಡಗೈಯಿಂದ ತಂದಿರುವ ಹೂವುಗಳನ್ನು ಬಳಸುವುದರಿಂದ ಮನೆಯಲ್ಲಿ ಅನಿಷ್ಟತತೆ ಎದುರಾಗುತ್ತದೆ ಎಂದು ಭಾರತೀಯ ಸಂಸ್ಕೃತದ ಪ್ರಕಾರ ಹೇಳಲಾಗುತ್ತದೆ.

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com