ತಿರುಪತಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಮಹಾಸಂಪ್ರೋಕ್ಷಣ ವಿಧಾನ, ವಿಶೇಷತೆಗಳು

ನಮ್ಮಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಅತ್ಯುನ್ನತವಾದ ವೈಜ್ಞಾನಿಕ ವಿಧಾನಗಳಿವೆ. ಹಾಗೆಯೇ ಅದನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡುವುದಕ್ಕೂ ಕೆಲವು ಸಂಹಿತೆಗಳಿದ್ದು ಅವುಗಳಿಗೆ ಆಗಮಶಾಸ್ತ್ರಗಳೆನ್ನುತ್ತಾರೆ.
ತಿರುಪತಿ (ಸಂಗ್ರಹ ಚಿತ್ರ)
ತಿರುಪತಿ (ಸಂಗ್ರಹ ಚಿತ್ರ)
ಭಾರತ ಒಂದು ದೇಶವಾದರೆ, ಅದಕ್ಕೆ ಧರ್ಮವೇ ಪ್ರಾಣ. ಉತ್ತರ ದೇಶದಲ್ಲಿ ಭಾರತವನ್ನು ಧರ್ಮಪ್ರಾಣ ಎಂದೇ ಹೇಳುತ್ತಾರೆ. ಅಂದರೆ ಭಾರತದಲ್ಲಿ ಧರ್ಮಕ್ಕೆ ನೀಡುವಷ್ಟು ಬೆಲೆ ಮತ್ಯಾವುದಕ್ಕೂ ನೀಡುವುದಿಲ್ಲ. ದಯೆ-ಧರ್ಮಗಳೇ ಭಾರತದ ಉಸಿರು. ಭಾರತೀಯರಿಗೂ ಅಷ್ಟೇ ಧರ್ಮ ಪ್ರಾಣ ಸಮಾನವಾಗಿದ್ದು, ಧರ್ಮವನ್ನು ಪ್ರಾಣದಂತೆ ಪ್ರೀತಿಸುತ್ತಾರೆ. ಧರ್ಮಕ್ಕೆ ಇಷ್ಟು ಉನ್ನತ ಸ್ಥಾನ ನೀಡಿರುವ ನಮ್ಮ ಧಾರ್ಮಿಕ ಆಚರಣೆಗಳೂ ಅಷ್ಟೇ ಸುಂದರ, ಸ್ವಾರಸ್ಯಕರ. ಇಲ್ಲಿನ ಧಾರ್ಮಿಕ ಆಚರಣೆಗಳ ಆಳಕ್ಕಿಳಿದು ನೋಡಿದರೆ ಪ್ರತಿಯೊಂದು ಆಚರಣೆಗಳಿಗೂ ಮಹತ್ತರವಾದ ಕಾರಣಗಳಿವೆ. 
ಧರ್ಮವನ್ನು ದೇವಾಲಯಗಳಿಂದ ಹೊರತುಪಡಿಸಿ ನೋಡುವುದಕ್ಕೆ ಸಾಧ್ಯವಿಲ್ಲ. ಒಂದರ್ಥದಲ್ಲಿ ಇಂದು ಧರ್ಮವನ್ನು ಉಳಿಸಿರುವುದು ದೇವಾಲಯಗಳೇ ಎಂದರೂ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳು ಕ್ಷೀಣಿಸುತ್ತಿದ್ದರೂ, ಇಂದಿಗೂ ಅದೆಷ್ಟೋ ಪುರಾತನ ದೇವಾಲಯಗಳಲ್ಲಿ ಪುರಾತನವಾದ ಧಾರ್ಮಿಕ ಆಚರಣೆಗಳು ಚಾಚೂ ತಪ್ಪದೇ ಹಿಂದಿನಂತೆಯೇ ನಡೆದುಕೊಂಡುಬರುತ್ತಿವೆ. ಅಂತಹ ದೇವಾಲಯಗಳ ಪೈಕಿ ತಿರುಪತಿಯ ಜಗದ್ವಿಖ್ಯಾತ ದೇವಾಲಯ ಪ್ರಮುಖವಾದದ್ದು. ಈ ದೇವಾಲಯದ ಬಗ್ಗೆ ತಿಳಿದುಕೊಂಡಷ್ಟೂ ಕುತೂಹಲ ಹೆಚ್ಚಾಗುತ್ತದೆ. ಅರಿತಷ್ಟೂ ಆಕರ್ಷಣೆ ಹೆಚ್ಚಾಗುತ್ತದೆ. ಈ ಬಾರಿ ತಿರುಪತಿ ದೇವಾಲಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಅವಕಾಶ 12 ವರ್ಷಗಳಿಗೊಮ್ಮೆ ನಡೆಯುವ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣದಿಂದ ಒದಗಿ ಬಂದಿದೆ. 
ಏನಿದು ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣೆ? 
ಈಗಾಗಲೇ ಹೇಳಿದಂತೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗಳಿಗೂ ಮಹತ್ತರವಾದ ಕಾರಣಗಳಿವೆ. ಸಮಾಜಕ್ಕೆ ಬೆಸೆದುಕೊಂಡಿರುವ ವ್ಯವಸ್ಥೆಯನ್ನು ಕಾಲದಿಂದ ಕಾಲಕ್ಕೆ ಗಟ್ಟಿಯಾಗಿಸಿಕೊಂಡು ಸುಗಮವಾಗಿ ನಡೆಸಿ, ಮುಂದಿನ ಪೀಳಿಗೆಗೆ ನೀಡುವ ಉದ್ದೇಶದಿಂದ ಆಚರಣೆಗಳೊಂದಿಗೆ ವ್ಯವಸ್ಥೆಯನ್ನು ಬೆಸೆದಿದ್ದಾರೆ ನಮ್ಮ ಪೂರ್ವಜರು. ದೇವಾಲಯಕ್ಕೆ ಸಂಬಂಧಿಸಿದ ಇಂಥಹದ್ದೇ ಒಂದು ಧಾರ್ಮಿಕ ಆಚರಣೆ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣ. ಕೇವಲ ಇದೊಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೇ ಜಗದ್ವಿಖ್ಯಾತ ದೇವಾಲಯವನ್ನು ಬಲಿಷ್ಠವಾಗಿರುವಂತೆ ಮಾಡುವ Scientific Process ಅಂತಲೂ ಹೇಳಬಹುದು. ನಮ್ಮಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಅತ್ಯುನ್ನತವಾದ ವೈಜ್ಞಾನಿಕ ವಿಧಾನಗಳಿವೆ. ಹಾಗೆಯೇ ಅದನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡುವುದಕ್ಕೂ ಕೆಲವು ಸಂಹಿತೆಗಳಿದ್ದು ಅವುಗಳಿಗೆ ಆಗಮಶಾಸ್ತ್ರಗಳೆನ್ನುತ್ತಾರೆ. ಈ ಆಗಮಶಾಸ್ತ್ರಗಳ ಪ್ರಕಾರವೇ ಪ್ರತಿ ದೇವಾಲಯವನ್ನೂ ನಿರ್ಮಾಣಗೊಂಡಿರುತ್ತವೆ.
ಭಾರತದಲ್ಲಿ ಪ್ರಧಾನವಾಗಿ ಶಿವ-ವಿಷ್ಣು-ದೇವಿಯ ದೇವಾಲಯಗಳಿರುವುದರಿಂದ ಪ್ರಧಾನವಾಗಿ ಶೈವಾಗಮ, ವೈಷ್ಣವಾಗಮ, ಶಕ್ತಾಗಮಗಳು ಪ್ರಸಿದ್ಧ. ವಿಷ್ಣು ಹಾಗೂ ವಿಷ್ಣುವಿನ ಅವತಾರದ ಪ್ರತಿ ದೇವಾಲಯವೂ ನಿರ್ಮಾಣಗೊಂಡಿರುವುದು ವೈಷ್ಣವಾಗಮನದ ಪ್ರಕಾರವೇ. ಈ ವೈಷ್ಣವಾಗಮದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಎರಡು ಪ್ರಕಾರಗಳಿದ್ದು ಪಾಂಚರತ್ರ ಆಗಮ ಹಾಗೂ ವೈಖಾನಸ ಆಗಮ ಎಂದು ವಿಂಗಡಿಸಲಾಗಿದೆ. ದೇವಾಲಯದ ಹೊರಭಾಗಕ್ಕೆ ಸಂಬಂಧಿಸಿದ್ದು ಪಾಂಚರತ್ರ ಆಗಮವಾದರೆ, ಗರ್ಭಗುಡಿಯಲ್ಲಿನ ಪ್ರತಿಷ್ಠಾಪನೆ, ಜೀರ್ಣೋದ್ಧಾರ, ನವೀಕರಣ ಸೇರಿದಂತೆ ಆಲಯದ ಒಳಭಾಗದಲ್ಲಿರುವ ಪ್ರಮುಖ ಕ್ರಿಯೆಗಳಿಗೆ ಸಂಬಂಧಿಸಿದ್ದು ವೈಖಾನಸ ಆಗಮ. ದೇವಾಲಯಗಳಿಗೆ ಪ್ರಕೃತಿ ವಿಕೋಪದಿಂದ ಹಾನಿಯುಂಟಾದರೆ ಅದನ್ನು ನವೀಕರಿಸಿ ಜೀರ್ಣೋದ್ಧಾರ, ನವೀಕರಾಣ ಕಾಮಗಾರಿಯನ್ನು ನಡೆಸುವುದೂ ಈ ಆಗಮಶಾಸ್ತ್ರಗಳ ಪ್ರಕಾರವೇ. ಯಾವುದೇ ಹಾನಿ ಸಂಭವಿಸದೇ ಇದ್ದರೂ ಸಹ ದೇವಾಲಯ ಶಿಥಿಲಾವಸ್ಥೆ ತಲುಪದೇ ಸುಸ್ಥಿರವಾಗಿರುವಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಪ್ರತಿ 12 ವರ್ಷಗಳಿಗೊಮ್ಮೆ ಕೆಲವು ವಿಧಿಗಳನ್ನು ಅನುಸರಿಸಲಾಗುತ್ತದೆ. ಈ ಎಲ್ಲವೂ ನಡೆಯುವುದು ಆಗಮಶಾಸ್ತ್ರಗಳ ಪ್ರಕಾರವೇ. ಈಗ ತಿರುಪತಿಯಲ್ಲಿ ನಡೆಯುತ್ತಿರುವ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವುದು ವೈಖಾನಸ ಆಗಮಗಳ ಪ್ರಕಾರ. ಅಂದರೆ ದೇವಾಲಯದ ಗರ್ಭಗುಡಿಯಿಂದ ಹಿಡಿದು ವಿಮಾನಗೋಪುರದವೆರೆಗೂ ಶುಚಿಗೊಳಿಸಿ, ಏನಾದರು ಲೋಪವಿದ್ದರೆ ಅದನ್ನು ನವೀಕರಿಸಲಾಗುತ್ತದೆ. 
ಅಷ್ಟಬಂಧ ಬಾಲಾಲಯ ಎಂಬ ಹೆಸರೇಕೆ ಬಂತು ಗೊತ್ತೇ?
ಯಾವುದೇ ದೇವಾಲಯಗಳಲ್ಲಿ ಗರ್ಭಗುಡಿಯಲ್ಲಿರುವ ವಿಗ್ರಹವನ್ನು ಭೂಮಿಗೆ ನೇರವಾಗಿ ತಾಗದೇ ಪದ್ಮಪೀಠ ಅಥವಾ ಯೋಗ ಪೀಠದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. 
ಹ್ಹಾ ಪ್ರತಿಷ್ಠಾಪನೆ ಅಂದರೆ ಆಧುನಿಕ ವಸ್ತುಗಳಾದ ಸಿಮೆಂಟ್ ಇತ್ಯಾದಿಗಳನ್ನು ಬಳಸಿ ಪ್ರತಿಷ್ಠಾಪಿಸಿರುವುದಿಲ್ಲ. ಬದಲಾಗಿ ಈ ರೀತಿ ಪ್ರತಿಷ್ಠಾಪನೆ ಮಾಡುವಾಗ ಲಾಕ್ಷ-ಅರಗು, ಸಜ್ಜರಸ, ಗುಳ-ಬೆಲ್ಲದ ಪಾಕ, ಘನಚೂರ್ಣ-ಕರ್ಪೂರಾದಿಗಳು, ಮಧು ಉಚ್ಚಿಷ್ಟ- (ಜೇನುತುಪ್ಪ ಬಳಸಿ ತಯಾರಾದ ಮೇಣದ ವಸ್ತು), ಕುರುವಿಂದ, ಗೈರಿಕ (ಪರ್ವತಗಳಲ್ಲಿ ಸಿಗುವ ವಸ್ತು)ಗಳನ್ನು ಎಳ್ಳೆಣ್ಣೆಯಲ್ಲಿ ಕುದಿಸುತ್ತಾರೆ. ಅದರಿಂದ ಉಂಟಾದ ಅಂಟನ್ನು (ಪೇಸ್ಟ್) ಪದ್ಮಪೀಠ ಅಥವಾ ಯೋಗಪೀಠ ಹಾಗೂ ವಿಗ್ರಹ ನಡುವೆ ಅಂತರ ಇಲ್ಲದಂತೆ ಲೇಪನ ಮಾಡಲಾಗುತ್ತದೆ. ಈ ರೀತಿ ಬಳಕೆಯಾದ ಅಷ್ಟಬಂಧವನ್ನು ಪ್ರತಿ 12 ವರ್ಷಗಳಿಗೊಮ್ಮೆ ಬದಲಾವಣೆ ಮಾಡಲಾಗುತ್ತದೆ.
ಅಷ್ಟಬಂಧವನ್ನು ಹೊಸದಾಗಿ ಲೇಪನ ಮಾಡುವುದಕ್ಕೂ ಮುನ್ನ ವಿಗ್ರಹದಲ್ಲಿರುವ ಶಕ್ತಿಯನ್ನು (Cosmic energy) ನ್ನು ಆಕರ್ಷಣೆ ಮಾಡಿ, (ಕಳಾಕರ್ಷಣೆ ಎಂದೂ ಹೇಳುತ್ತಾರೆ) ಸಣ್ಣದೊಂದು ದೇವಾಲಯ ನಿರ್ಮಿಸಿ (ತಿರುಪತಿಯಲ್ಲಿ ಬಾಲಾಲಯ ಎನ್ನುತ್ತಾರೆ) ಕುಂಭದಲ್ಲಿ ಇರಿಸಲಾಗುತ್ತದೆ. ನಂತರ ಹೊಸದಾಗಿ ಅಷ್ಟಬಂಧ ಲೇಪನ ಮಾಡಲಾಗುತ್ತದೆ. ಈ ಹಂತದಲ್ಲಿ ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮವೇ ಮೊದಲಾದ ಹೋಮ-ಹವನಗಳು, ತ್ರಿಕಾಲ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಸಂಪೂರ್ಣಗೊಳ್ಳಲು ತೆಗೆದುಕೊಳ್ಳುವ ಕಾಲ 48 ದಿನಗಳಾದರೂ 6 ದಿನಗಳಲ್ಲಿ ಗರ್ಭಗುಡಿಯಲ್ಲಿ ವಿಗ್ರಹವನ್ನು ಮರುಪ್ರತಿಷ್ಠಾಪನೆ ಮಾಡಲಾಗುತ್ತದೆ. 6ನೇ ದಿನ ಬೆಳಿಗ್ಗೆ ಶುಭಮಹೂರ್ತದಲ್ಲಿ, ವಿಗ್ರಹವನ್ನು ಮತ್ತೆ ಹಿಂದಿದ್ದ ಜಾಗದಲ್ಲೇ ಪ್ರತಿಷ್ಠಾಪಿಸುತ್ತಾರೆ. 
ತಿರುಪತಿಯಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಗೆ ಅಷ್ಟಬಂಧ ಬಾಲಾಲಯ ಸಂಪ್ರೋಕ್ಷಣೆ ಎನ್ನಲಾಗುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದ, ದಿವ್ಯ ಪ್ರಬಂಧ, ಸ್ತೋತ್ರಗಳು, ಪುರಾಣಗಳು, ರಾಮಾನುಜಾಚಾರ್ಯರ ಶ್ರೀಭಾಷ್ಯ, ರಾಮಾನುಜ ಗ್ರಂಥಗಳ ಅಧ್ಯಯನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com