ಕೃಷ್ಣ ಜನ್ಮಾಷ್ಟಮಿ: ವಿಭಿನ್ನ ಆಚರಣೆಗಳು ಹೇಗೆ ನಡೆಯಲಿದೆ ಗೊತ್ತೇ?

ವಿಷ್ಣುವಿನ 8ನೇ ಅವತಾರವಾಗಿರುವ ಕೃಷ್ಣ, ಜನಿಸಿದ್ದು ಈಗಿನ ಉತ್ತರ ಪ್ರದೇಶದ ಮಥುರಾದಲ್ಲಿನ ಸೆರೆಮನೆಯಲ್ಲಿ!
Krishna
ಶ್ರೀಕೃಷ್ಣonline desk
Updated on

ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಬಹುಳ ಅಷ್ಟಮಿಯ ದಿನ (ಆ.26, 2024) ದೇಶಾದ್ಯಂತ ಕೃಷ್ಣ ಜಯಂತಿ ಅಥವಾ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ-ಭಕ್ತಿ, ಸಡಗರದಿಂದ ಆಚರಿಸಲಾಗುತ್ತದೆ.

ವಿಷ್ಣುವಿನ 8ನೇ ಅವತಾರವಾಗಿರುವ ಕೃಷ್ಣ, ಜನಿಸಿದ್ದು ಈಗಿನ ಉತ್ತರ ಪ್ರದೇಶದ ಮಥುರಾದಲ್ಲಿನ ಸೆರೆಮನೆಯಲ್ಲಿ! ಹುಟ್ಟಿನಿಂದ ಮೊದಲುಗೊಂಡು ಬಾಲ್ಯದ ದಿನಗಳಲ್ಲಿ ಕಷ್ಟಗಳ ಸರಣಿಯನ್ನೇ ಅನುಭವಿಸಿ, ಗೋಪಾಲಕನಾಗಿ ಗೋಕುಲವನ್ನು ರಂಜಿಸಿ, ಇಡೀ ಭರತ ಖಂಡದ ಪ್ರಭಾವಿಯಾಗಿ ಬೆಳೆದ ಶ್ರೀಕೃಷ್ಣನ ಬದುಕು ಅಷ್ಟೇ ವರ್ಣರಂಜಿತವಾದದ್ದು. ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡೇ ಸಂಕೀರ್ಣವಾದ ಅಂದಿನ ರಾಜಕಾರಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಆತನ ರಾಜತಂತ್ರಕ್ಕೆ ತಲೆದೂಗದವರು ಯಾರು? ತಾನು ನಂಬಿದ್ದ ಧರ್ಮ'ಕಾರಣದ ಮೌಲ್ಯಗಳನ್ನು ಜತನದಿಂದ ಕಾಪಿಟ್ಟುಕೊಳ್ಳುವುದಕ್ಕೆ, ಧರ್ಮವನ್ನು ಎತ್ತಿ ಹಿಡಿಯಬೇಕೆಂಬ ಒಂದೇ ಉದ್ದೇಶದಿಂದ ಆತ ರಚಿಸದ ವ್ಯೂಹಗಳಿಲ್ಲ, ಹೆಣೆಯದ ತಂತ್ರಗಳಿಲ್ಲ. ಈ ವಿಶೇಷ ಗುಣವನ್ನು ಗಮನದಲ್ಲಿಟ್ಟುಕೊಂಡೇ, ತ್ಯಾಗರಾಜರು ತಮ್ಮ ಕೀರ್ತನೆಯೊಂದರಲ್ಲಿ, "ಬೋಧಿಸಿದ ಸನ್ಮಾರ್ಗಗಳನ್ನು ತಾನೇಮುರಿದು, ಹಿಡಿದ ಹಠ ಸಾಧಿಸಿದ" ಎಂದು ಶ್ರೀಕೃಷ್ಣನ ಕುರಿತ ವರ್ಣಿಸಿದ್ದಾರೆ.

ಸರ್ವಾಂತರ್ಯಾಮಿ ಎಂದು ಕರೆಸಿಕೊಳ್ಳುವ ಶ್ರೀಕೃಷ್ಣನಿಗೆ ಸನ್ಮಾರ್ಗವನ್ನು ಬೋಧಿಸುವುದೂ ಗೊತ್ತು, ಎದುರಾಳಿಯ ತಂತ್ರ ವಿಪರೀತವಾದಾಗ ಒಳಿತಿಗೆ ಚ್ಯುತಿಯಾಗದಂತೆ ಅದನ್ನು ಕಾಪಾಡಿಕೊಳ್ಳುವುದಕ್ಕೆ ಆ ಸನ್ಮಾರ್ಗವನ್ನು ಮೀರಿ ಪ್ರತಿತಂತ್ರಗಳನ್ನು ಹೆಣೆಯುವುದೂ ಗೊತ್ತು. 'Know the rules well, so you can break them effectively. ಎಂಬ ಮಾತಿನಂತೆ, ತತ್ವವನ್ನು ಅರಿತವನು ಮಾತ್ರ, ಅದನ್ನು ಮೀರಬಲ್ಲ. ಹಾಗಾಗಿಯೇ ಎಲ್ಲವನ್ನೂ ಅರಿತ ಆತನನ್ನು ಜಗದ್ಗುರು ಎಂದು ಹೇಳುತ್ತೇವೆ.

ಇಂತಹ ವರ್ಣರಂಜಿತ ವ್ಯಕ್ತಿತ್ವದ ಕೃಷ್ಣನ ಜನ್ಮಸ್ಥಾನ ಮಥುರಾದ ಬೃಂದಾವನವಾದರೆ, ಆತನ ಕರ್ಮಸ್ಥಾನ, ಆತನೇ ಸ್ವಯಂ ನಿರ್ಮಿಸಿದ ಗುಜರಾತ್ ನ ದ್ವಾರಕೆ! ಕೃಷ್ಣ ಜಯಂತಿಯನ್ನು ಈ ಎರಡೂ ಪ್ರದೇಶಗಳಲ್ಲಿ ಉಳಿದೆಲ್ಲಾ ಪ್ರದೇಶಗಳಿಗಿಂತ ಹೆಚ್ಚಾಗಿಯೇ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ.

Krishna
ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ: ದೇವಾಲಯಗಳಲ್ಲಿ ವಿಶೇಷ ಪೂಜೆ, ಕೃಷ್ಣ-ರಾಧೆಯರ ವೇಷತೊಟ್ಟು ಎಲ್ಲೆಲ್ಲೂ ಚಿಣ್ಣರ ಸಂಭ್ರಮ

ಬೃಂದಾವನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ಉತ್ತರ ಪ್ರದೇಶದ ಮಥುರಾದ ಬೃಂದಾವನದಲ್ಲಿ ಕೃಷ್ಣ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಇಲ್ಲಿ ರಾಧಾ-ಕೃಷ್ಣರ ಹಲವು ದೇವಾಲಯಗಳಿವೆ. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಕೃಷ್ಣನಿಗೆ ಅರ್ಘ್ಯ-ಪಾದ್ಯಗಳನ್ನು ಸಮರ್ಪಿಸಿ ಪೂಜಿಸಲಾಗುತ್ತದೆ. ಬೃಂದಾವನದಲ್ಲಿ ಒಂದು ನಿರ್ದಿಷ್ಟ ಸಮಯ (ಬ್ರಾಹ್ಮಿ ಮುಹೂರ್ತದಲ್ಲಿ) ಶ್ರೀಕೃಷ್ಣನ ಹೆಜ್ಜೆಯ ಸಪ್ಪಳ ಕೇಳುತ್ತದೆಯೆಂಬ ಪ್ರತಿತೀತಿ ಇಂದಿಗೂ ಇದೆ.

ದ್ವಾರಕಾ:

ಕೃಷ್ಣ-ಬಲರಾಮರು ಮಥುರಾದಿಂದ ವಲಸೆ ಬಂದು ಸ್ವತಃ ನಿರ್ಮಿಸಿ, ನೆಲೆಸಿದ ಕ್ಷೇತ್ರ ದ್ವಾರಕ. ಕೃಷ್ಣ ಜನ್ಮಾಷ್ಟಮಿಯ ದಿನದಂದು ದ್ವಾರಕ ನಗರ ಹೂವು, ದೀಪಗಳಿಂದ ಕಂಗೊಳಿಸುತ್ತದೆ. ಕೃಷ್ಣನಿಗೆ ಸ್ವಾಗತ ಕೋರುವುದಕ್ಕಾಗಿ ಈ ನಗರವನ್ನು ಸಿಂಗರಿಸಲಾಗಿರುತ್ತದೆ. ದ್ವಾರಕೆಯ ಕೃಷ್ಣನ ಮಂದಿರದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಗೋವಾ

ಗೋವಾದಲ್ಲಿ ಕೃಷ್ಣ ಜಯಂತಿಯನ್ನು ದೇವಕಿ ಸಹಿತ ಕೃಷ್ಣನನನ್ನು ಪೂಜಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ಇದು ಉಳಿದೆಲ್ಲೆಡೆಗಿಂತ ವೈಶಿಷ್ಟ್ಯಪೂರ್ಣ ಕೃಷ್ಣ ಜಯಂತಿ ಕಾರ್ಯಕ್ರಮವಾಗಿದೆ.

ಕೇರಳ

ಕೇರಳದಲ್ಲಿ ಶ್ರೀ ಕೃಷ್ಣನನ್ನು ಗುರುವಾಯೂರಪ್ಪನ್ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಹಾಡು, ಭಜನೆ, ಸಂಕೀರ್ತನೆ, ನೃತ್ಯದ ಮೂಲಕ ಕೃಷ್ಣ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com