

ಮಳೆಗಾಲದಲ್ಲಿ ಜಾಸ್ತಿ ಮಳೆಯ ಪರಿಣಾಮ ಪ್ರವಾಹದ ಪರಿಸ್ಥಿತಿ ಉಂಟಾಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇಂತಹ ವೇಳೆ ಮನೆಯ ಪಕ್ಕದಲ್ಲಿ ಅಥವಾ ರಸ್ತೆಯಲ್ಲಿ ನಿಂತಿದ್ದ ವಾಹನಗಳು ಕೊಚ್ಚಿ ಹೋಗುವ ಅಥವಾ ಭಾರಿ ಮಳೆಗೆ ಮುಳುಗುವುದು ಸಹಜವಾಗುತ್ತಿದೆ. ಇದಾದ ನಂತರ ವಾಹನಗಳು ಕೆಟ್ಟು ಹೋಗುತ್ತವೆ ಎಷ್ಟರ ಮಟ್ಟಿಗೆ ಅಂದ್ರೆ ಕೆಲವೊಮ್ಮೆ ಆ ಗಾಡಿಗಳ ರಿಪೇರಿ ಆಗುವುದು ಕಷ್ಟ ಸಾಧ್ಯ! ಆ ವೇಳೆ ವಾಹನ ಮಾಲೀಕರು ಏನು ಮಾಡಬೇಕು ಗೊತ್ತಾ?
ಹೌದು, ಕೆಲವು ಸಂದರ್ಭದಲ್ಲಿ ಮಳೆಗಾಲದಲ್ಲಿ ಅಥವಾ ಹಠಾತ್ ಪ್ರವಾಹ ಬಂದ ಕಾರಣ ಕಾರು ಹಾಗೂ ಬೈಕ್‌ಗಳು ನೀರಿನಲ್ಲಿ ಮುಳುಗಿಹೋಗುತ್ತವೆ. ವಾಹನ ನೀರಲ್ಲಿ ಮುಳುಗಿದಾಗ ಗಾಬರಿಯಲ್ಲಿ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಇಡೀ ವಾಹನವನ್ನು ಶಾಶ್ವತವಾಗಿ ಹಾಳು ಮಾಡಬಹುದು. ಹಾಗಾಗಿ, ನಿಮ್ಮ ವಾಹನ ನೀರಿನಲ್ಲಿ ಸಿಲುಕಿದ್ದರೆ ತಕ್ಷಣವೇ ಮಾಡಬೇಕಾದ ಮತ್ತು ಮಾಡಬಾರದ ಕೆಲಸದ ಕುರಿತ ಮಾಹಿತಿ ಇಲ್ಲಿದೆ..
ಏನು ಮಾಡಬಾರದು?
ಎಂಜಿನ್ ಆನ್ ಮಾಡಬೇಡಿ: ವಾಹನ ಮುಳುಗಿದ್ದಾಗ ಅಥವಾ ನೀರು ಇಳಿದ ತಕ್ಷಣ ಕೀ ಹಾಕಿ ಸ್ಟಾರ್ಟ್ ಮಾಡಲು ಪ್ರಯತ್ನಿಸಬೇಡಿ. ಯಾಕಂದ್ರೆ, ಎಂಜಿನ್ ಒಳಗಡೆ ನೀರು ಹೋಗಿದ್ದರೆ, ನೀವು ಸ್ಟಾರ್ಟ್ ಮಾಡಿದ ತಕ್ಷಣ ಇಡೀ ಎಂಜಿನ್ ಬ್ಲಾಕ್ ಆಗಬಹುದು. ಅದ್ರಲ್ಲೂ, ಇದು ನಿಮ್ಮ ಎಂಜಿನ್ ಅನ್ನು ಶಾಶ್ವತವಾಗಿ ಹಾಳು ಮಾಡುತ್ತದೆ.
ಗೇರ್ ಬದಲಾಯಿಸಲು ಹೋಗಬೇಡಿ: ವಾಹನವನ್ನು ಇದ್ದ ಜಾಗದಲ್ಲೇ ಇರಲು ಬಿಡಿ. ಬಲವಂತವಾಗಿ ಗೇರ್ ಬದಲಾಯಿಸುವುದು ಅಥವಾ ತಳ್ಳುವುದು ಬೇಡ.
ಏನು ಮಾಡಬೇಕು?
ಬ್ಯಾಟರಿ ಕನೆಕ್ಷನ್ ಕಟ್ ಮಾಡಿ: ಸಾಧ್ಯವಾದರೆ ತಕ್ಷಣವೇ ಬಾನೆಟ್ಓಪನ್ ಮಾಡಿ ಬ್ಯಾಟರಿಯ ವೈರ್ ಲಿಂಕ್ ಅನ್ನು ಕಟ್ ಮಾಡಿ. ಅದರಂತೆ, ಇದು ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವುದನ್ನು ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳು ಹಾಳಾಗುವುದನ್ನೂ ತಡೆಯುತ್ತದೆ.
ವಾಹನದ ಫೋಟೋ/ವಿಡಿಯೋ ತಗೆಯಿರಿ: ಇನ್ಸೂರೆನ್ಸ್ ಕ್ಲೈಮ್ ಮಾಡಲು ನಿಮ್ಮ ವಾಹನ ನೀರಲ್ಲಿ ಮುಳುಗಿರುವ ಸ್ಥಿತಿಯ ಸ್ಪಷ್ಟ ಫೋಟೋ ಮತ್ತು ವಿಡಿಯೋಗಳನ್ನು ಮೊಬೈಲ್‌ನಲ್ಲಿ ತೆಗೆದುಕೊಳ್ಳಿ. ಇದು ನಂತರ ಇನ್ಸೂರೆನ್ಸ್ ಕಂಪನಿಗೆ ಸಾಕ್ಷಿಯಾಗಿ ಉಪಯುಕ್ತವಾಗುತ್ತದೆ.
ಟೋಯಿಂಗ್ ಮಾಡಿ: ವಾಹನವನ್ನು ಡ್ರೈವ್ ಮಾಡದೇ, ಟೋಯಿಂಗ್ ಗಾಡಿಯ ಸಹಾಯದಿಂದ ನೇರವಾಗಿ ವಾಹನದ ಗ್ಯಾರೇಜ್‌ಗೆ ತಗೊಂಡು ಹೋಗಿ ಚೆಕ್ ಮಾಡಿಸಿ.
ಇನ್ಸೂರೆನ್ಸ್ ಕಂಪನಿಗೆ ಮಾಹಿತಿ ನೀಡಿ:
ಪ್ರವಾಹದ ನೀರಿನಲ್ಲಿ ಮುಳುಗಿರುವ ವಾಹನದ ಫೋಟೋ/ವಿಡಿಯೋ ಸಮೇತ ನಿಮ್ಮ ವಾಹನದ ಇನ್ಸೂರೆನ್ಸ್ ಕಂಪೆನಿಯನ್ನ ಸಂಪರ್ಕ ಮಾಡಿ. ಏತನ್ಮಧ್ಯೆ ನಿಮ್ಮ ಇನ್ಸೂರೆನ್ಸ್ ಪಾಲಿಸಿಯಲ್ಲಿ 'Engine Protect Cover' ಇದ್ದರೆ ಮಾತ್ರ ಎಂಜಿನ್‌ಗೆ ಆದ ಹಾನಿಗೆ ಇನ್ಸೂರೆನ್ಸ್ ಹಣ ಸಿಗುತ್ತದೆ. ಸಾಮಾನ್ಯ ಇನ್ಸೂರೆನ್ಸ್ ಇದ್ದರೆ ಕಂಪನಿಗಳು ಕೊಡಲ್ಲ!