ರಾಜ್ಯಕ್ಕಿಲ್ಲ ಹೊಸಮಾರ್ಗ...?

2014ರಲ್ಲಿ ಮಂಡಿಸಿದ ಎರಡು ರೈಲ್ವೆ ಬಜೆಟ್‍ಗಳಲ್ಲೂ ಕರ್ನಾಟಕಕ್ಕೆ ರೈಲು ಮತ್ತು ರೈಲು ಮಾರ್ಗಗಳ...
ರೇಲ್ವೇ ಬಜೆಟ್ (ಸಾಂದರ್ಭಿಕ ಚಿತ್ರ)
ರೇಲ್ವೇ ಬಜೆಟ್ (ಸಾಂದರ್ಭಿಕ ಚಿತ್ರ)

ನವದೆಹಲಿ: 2014ರಲ್ಲಿ ಮಂಡಿಸಿದ ಎರಡು ರೈಲ್ವೆ ಬಜೆಟ್‍ಗಳಲ್ಲೂ ಕರ್ನಾಟಕಕ್ಕೆ ರೈಲು ಮತ್ತು ರೈಲು ಮಾರ್ಗಗಳ ಸುಗ್ಗಿಯೋ ಸುಗ್ಗಿ! ಆದರೆ, ಈ ಬಾರಿ ಇದನ್ನು ನಿರೀಕ್ಷಿಸುವಂತಿಲ್ಲ.

ಕಳೆದ ವರ್ಷ ಯುಪಿಎ ಸರ್ಕಾರದ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದವರು ಮಲ್ಲಿಕಾರ್ಜುನ ಖರ್ಗೆ. ಜುಲೈ 8ರಂದು ಎನ್ ಡಿಎ ಸರ್ಕಾರದ ರೈಲ್ವೆ ಬಜೆಟ್ ಮಂಡಿಸಿದವರು ಡಿ.ವಿ. ಸದಾನಂದಗೌಡ. ಉಭಯ ನಾಯಕರೂ ಕರ್ನಾಟಕದವರೇ. ಖರ್ಗೆಗೆ ಅದು ಕೊನೆಯ ಬಜೆಟ್ ಆಗಿತ್ತು. ಸದಾನಂದಗೌಡರಿಗೆ ಅದೇ ಮೊದಲ ಬಜೆಟ್ ಆಗಿತ್ತು. ಹೀಗಾಗಿ ರಾಜ್ಯಕ್ಕೆ ಔದಾರ್ಯ ತೋರಿದ್ದರು.

ಆದರೆ, 2015-16ರ ರೈಲ್ವೆ ಬಜೆಟ್‍ನಲ್ಲೂ ಇದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಕಾರಣ, ಈಗ ರೈಲ್ವೆ ಸಚಿವರಾಗಿರುವುದು ನೆರೆಯ ಮಹಾರಾಷ್ಟ್ರದ ಸುರೇಶ್ ಪ್ರಭು. ಇದು ಅವರ ಚೊಚ್ಚಲ ಬಜೆಟ್ ಸಹ. ಅವರ ಮೇಲೆ ಪ್ರಧಾನಿ ಮೋದಿ ಅವರಿಗೆ ಸಾಕಷ್ಟು ನಿರೀಕ್ಷೆಗಳೂ ಇವೆ. ಇದಲ್ಲದೆ ಪ್ರಭು, ಟೆಕ್ನೊಕ್ರಾಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಎಲ್ಲವನ್ನೂ ಅಳೆದು ತೂಗಿ ನೋಡುವವರು. ಹೀಗಾಗಿ 2014ರ ಬಜೆಟ್ ದಕ್ಕಿದಷ್ಟೇ ಹೊಸ ರೈಲು ಮತ್ತು ಹೊಸ ಮಾರ್ಗಗಳು ಕರ್ನಾಟಕಕ್ಕೆ ದಕ್ಕುವ ನಿರೀಕ್ಷೆ ಇಲ್ಲ.

ಸ್ವಚ್ಛತೆಗೆ ಆದ್ಯತೆ
ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನ ಅನುಷ್ಠಾನಕ್ಕೆ ಪ್ರಭು ಬದ್ಧರಾಗಿದ್ದಾರೆ. ಇದು ರೈಲು, ನಿಲ್ದಾಣಗಳಲ್ಲಿ ಮಾತ್ರವಲ್ಲ, ಇಡೀ ರೈಲ್ವೆ ಪರಿಸರವನ್ನೇ ಸ್ವಚ್ಛವಾಗಿಡುವ
ಮಹತ್ವಾಕಾಂಕ್ಷಿ ಯೋಜನೆಯನ್ನು ಸುರೇಶ್ ಪ್ರಭು ಘೋಷಿಸಲಿದ್ದಾರೆ. ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಬಜೆಟ್ ಸ್ವಚ್ಛ, ಸುಸ್ಥಿರ ಮತ್ತು ಸುವ್ಯವಸ್ಥಿತ ರೈಲು ಪ್ರಯಾಣಕ್ಕೆ ಆದ್ಯತೆ ನೀಡುವ ಹತ್ತಾರು ಕ್ರಮಗಳನ್ನು ಒಳಗೊಂಡಿದೆ. ಇಲ್ಲಿ ಹೊಸ ಯೋಜನೆಗಳಿಗಿಂತ ವಿವಿಧ ಹಂತದಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಘೋಷಿಸಿದ್ದ ಆದರೆ, ಆರ್ಥಿಕವಾಗಿ ಲಾಭದಾಯಕವಲ್ಲದ ರೈಲು ಮಾರ್ಗ, ಇನ್ನೂ ಕಡತದ ಹಂತದಲ್ಲಿರುವ ಕೆಲ ಯೋಜನೆಗಳು ರದ್ದಾಗುವ ಸಾಧ್ಯತೆ ಇದೆ.

ಲಾಭವಲ್ಲದ್ದು ಇಲ್ಲ
ಸುರೇಶ್ ಪ್ರಭು ಆರ್ಥಿಕವಾಗಿ ಲಾಭದಾಯಕವಲ್ಲದ ಯಾವ ರೈಲು ಯೋಜಯನ್ನೂ ಕೈಗೆತ್ತಿಕೊಳ್ಳದಿರಲು ನಿರ್ಧರಿಸಿದ್ದಾರೆ. ಜತೆಗೆ ಇದುವರೆಗೆ ಕರ್ನಾಟಕದಲ್ಲಿ ಅನುಷ್ಠಾನವಾಗುವ ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರ ಶೇ. 50ರಷ್ಟು ವೆಚ್ಚ ಭರಿಸುತ್ತಿತ್ತು. ಇನ್ನು ಮುಂದೆ ರೈಲು ಯೋಜನೆಗಳ ವೆಚ್ಚ ಭರಿಸುವುದಿಲ್ಲ, ರೈಲ್ವೆಯೇ ಎಲ್ಲ ವೆಚ್ಚವನ್ನು ಭರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಪಡಿಸಿದ್ದಾರೆ.

ಈ ಎರಡು ಕಾರಣಗಳಿಂದ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ. ಆದರೆ, ದೇಶದ ನರನಾಡಿಯಂತೆ ಹಬ್ಬಿರುವ ರೈಲ್ವೆ ಜಾಲದ ಸುಧಾರಣೆಗೆ ಮುಂದಾಗಿರುವ ಸುರೇಶ್ ಪ್ರಭು ಅವರ ಬಜೆಟ್‍ನಲ್ಲಿ ರಾಜ್ಯಕ್ಕೆ ದಕ್ಕಬಹುದಾದ ಸೌಲಭ್ಯಗಳೆಂದರೆ- ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಿಗೆ ವಿಶ್ವದರ್ಜೆ ಭಾಗ್ಯ, ಸಾಧಾರಣ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ವಿಶೇಷ ನಿಲ್ದಾಣಗಳಾಗಿ ಪರಿವರ್ತಿಸಬಹುದಾಗಿದೆ. ರಾಜ್ಯಕ್ಕೆ ಹೊಸ ರೈಲು ದಕ್ಕದೇ ಇದ್ದರೂ, ಬಹುದಿನಗಳ ನಿರೀಕ್ಷೆಯಲ್ಲೊಂದಾದ ಸ್ವಚ್ಛ ರೈಲು, ಶುದ್ಧ ನೀರು ಸೌಲಭ್ಯ ದಕ್ಕಲಿದೆ.

2014ರಲ್ಲಿ ರಾಜ್ಯಕ್ಕೆ ದಕ್ಕಿದ್ದು
ಐದು ಹೊಸ ಮಾರ್ಗಗಳಿಗೆ ಸಮೀಕ್ಷೆ
ಒಂದು ಜೋಡಿ ಮಾರ್ಗ
ಒಂದು ಪ್ರೀಮಿಯಂ ರೈಲು
ನಾಲ್ಕು ಎಕ್ಸ್‍ಪ್ರೆಸ್ ರೈಲು
ಮೂರು ಪ್ಯಾಸೆಂಜರ್ ರೈಲು
ಬೆಂಗಳೂರಿನಲ್ಲಿ ಪ್ರಯಾಣಿಕರ ಸಂದಣಿ ತಗ್ಗಿಸಲು 3 ಮಾರ್ಗದಲ್ಲಿ ವೇಮು, ಡೇಮು ಸೇವೆ

ಮಧ್ಯಂತರದಲ್ಲಿ ದಕ್ಕಿದ್ದು
ನಾಲ್ಕು ಪ್ರೀಮಿಯಂ ರೈಲುಗಳು
ಐದು ಎಕ್ಸ್ ಪ್ರೆಸ್ ರೈಲುಗಳು
ಒಂದು ಫಾಸ್ಟ್ ಪ್ಯಾಸೆಂಜರ್ ರೈಲು
ಮೂರು ರೈಲುಗಳ ಸಂಚಾರ ಸಾಂದ್ರತೆ ಹೆಚ್ಚಳ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com