
ಬೆಂಗಳೂರು: ಮುಖ್ಯಮಂತ್ರಿಗಳ ಆಪ್ತ ಮೂಲಗಳ ಪ್ರಕಾರ ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಪ್ರಮುಖ ಕ್ಷೇತ್ರಗಳಾದ ಕೃಷಿ ಹಾಗೂ ನೀರಾವರಿಯ ಜತೆಗೆ ಕೈಗಾರಿಕೆ, ಮೂಲಸೌಕರ್ಯ, ಶಿಕ್ಷಣ ಮತ್ತಿತರ ವಲಯ ಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.
ಇನ್‌ವೆಸ್ಟ್ ಕರ್ನಾಟಕ ನಡೆದು ಒಂದು ತಿಂಗಳ ಅಂತರದಲ್ಲಿ ಬಜೆಟ್ ಮಂಡನೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೈಗಾರಿಕಾ ವಲಯಕ್ಕೂ ಸಿದ್ದ ಬಜೆಟ್ ಅನುಕೂಲವಾಗುವ ಸಾಧ್ಯತೆಗಳಿವೆ. ಸುಮಾರು ಒಂದೂವರೆ ಲಕ್ಷ ಕೋಟಿ ರು. ಗಾತ್ರದ 2016-17ನೇ ಸಾಲಿನ ಮುಂಗಡಪತ್ರದಲ್ಲಿ ಕೈಗಾರಿಕಾ ಸ್ನೇಹಿ, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ, ಅದಕ್ಕಾಗಿ ಕೌಶಲಾಭಿವೃದ್ಧಿ ಸಹಿತ ಹಲವು ವಲಯಗಳಿಗೆ ಒತ್ತು ನೀಡುವ ನಿರೀಕ್ಷೆ ಇದೆ.
ಈ ಹಿಂದೆ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ದ ಬಜೆಟ್ ಮಂಡನೆ ಮಾಡುತ್ತಿದ್ದರು ಎಂಬ ಆರೋಪವಿತ್ತು. ಆದರೀಗ ಯಾವುದೇ ರೀತಿಯ ಚುನಾವಣೆಗಳಿಲ್ಲದಿರುವುದು ಸಿದ್ದು ಬಜೆಟ್ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದಿನ ಬಜೆಟ್ ಗಳಲ್ಲಿ ಮಂಡನೆಯಾಗಿದ್ದ "ಭಾಗ್ಯ"ಗಳ ಯೋಜನೆ ಅನುಷ್ಠಾನಕ್ಕಾಗಿ ಮಾಡಿದ್ದ ವೆಚ್ಚವು ಇದೀಗ ಸಾಲದ ರೂಪದಲ್ಲಿ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಈ ಸಾಲದ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಿದ್ದ ಸರ್ಕಾರ ತೆರಿಗೆಗಳ ಮೊರೆ ಹೋಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಾಲದ ಪ್ರಮಾಣ ಬಜೆಟ್ ಗಾತ್ರಕ್ಕಿಂತ ದೊಡ್ಡದಾಗಿದೆ! ಆದ್ದರಿಂದ ಈ ಬಾರಿ ಆರ್ಥಿಕ ಶಿಸ್ತಿಗೆ ಮುಖ್ಯಮಂತ್ರಿ ಮೊರೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನಾಲ್ಕನೇ ಹಾಗೂ ಹಣಕಾಸು ಸಚಿವರಾಗಿ ಹನ್ನೊಂದನೆಯ ಬಜೆಟ್ ಮಂಡಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 13 ಬಾರಿ ಬಜೆಟ್ ಮಂಡಿಸಿರುವುದು ಇದುವರೆಗಿನ ದಾಖಲೆಯಾಗಿದೆ.
Advertisement