
ಮುಂಬೈ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಮಂಡಿಸಿದ 2016ನೇ ಸಾಲಿನ ಬಜೆಟ್ ಷೇರುಮಾರುಕಟ್ಟೆಯ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದು, ಬಜೆಟ್ ಮಂಡನೆ ಮುಕ್ತಾವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಭಾರಿ ಕುಸಿತಕಂಡಿದೆ.
ಕಳೆದ 54 ವಾರಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಸೆನ್ಸೆಕ್ಸ್ ಕುಸಿದಿದ್ದು, ಬರೊಬ್ಬರಿ 660 ಅಂಕಗಳನ್ನು ಕಳೆದುಕೊಂಡಿತ್ತು. ಆದರೆ ಮುಂಬರು ಆರ್ ಬಿಐ ದರ ಕಡಿತ ನಿರೀಕ್ಷೆಯಿಂದಾಗಿ ಮತ್ತೆ 60 ಅಂಕಗಳಷ್ಟು ಅಲ್ಪ ಪುನರ್ ಚೇತರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ ಒಟ್ಟು ಶೇ.2.84ರಷ್ಚು ಇಳಿಕೆಯೊಂದಿಗೆ 22,494.61 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿ ಕೂಡ 203.9 ಅಂಕಗಳ ಕಡಿತದೊಂದಿಗೆ ಒಟ್ಟಾರೆ ಶೇ2.90 ರಷ್ಟು ಇಳಿಕೆಯಾಗಿ 6,825.80. ಅಂಕಗಳಿಗೆ ಸ್ಥಿರವಾಗಿದೆ.
ಭಾರತೀಯ ಷೇರುಮಾರುಕಟ್ಟೆಯ ಬಹುತೇಕ ಎಲ್ಲ ಕ್ಷೇತ್ರಗಳೂ ಇಂದು ನಷ್ಟ ಅನುಭವಿಸಿದ್ದು, ಒಂದೇ ಸಮನೆ ಷೇರುದಾರರು ಮಾರಾಟದಲ್ಲಿ ತೊಡಗಿದ್ದರಿಂದ ಎಫ್ ಎಂಸಿಜಿ ಮತ್ತು ಗ್ರಾಹಕ ಉಪಯೋಗಿ, ಐಟಿ ವಲಯ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಷೇರುಗಳು ಶೇ.3.02ರಷ್ಟು ಕುಸಿತಕಂಡಿವೆ. ಪ್ರಮುಖವಾಗಿ ಎಸ್ ಬಿಐ ಸಮೂಹ ಷೇರುಗಳು ನೆಲಕಚ್ಚಿದ್ದು, ಬಜೆಟ್ ನಲ್ಲಿ ನಿರೀಕ್ಷೆಗಿಂತಲೂ ಬ್ಯಾಕಿಂಗ್ ವಲಯಕ್ಕೆ ದೊರೆ ಪ್ರಮಾಣ ಕಡಿಮೆಯಾಗಿದ್ದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಕೇಂದ್ರ ಬಜೆಟ್ ಷೇರುಮಾರುಕಟ್ಟೆಯ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದು, ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
Advertisement