ರಾಜ್ಯ ಬಜೆಟ್ 2018-19: ಕನ್ನಡಿಗರ ಮನಗೆಲ್ಲುತ್ತಾರ ಮುಖ್ಯಮಂತ್ರಿ ಸಿದ್ದರಾಮಯ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 13ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಈಗಾಗಲೇ ಕನ್ನಡ ಪರ ಸಂಘಟನೆಗಳು ಹಾಗೂ ಸಾಹಿತಿಗಳ ಬೆಂಬಲವನ್ನು ಪಡೆದಿರುವ ಸಿದ್ದರಾಮಯ್ಯ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 13ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಈಗಾಗಲೇ ಕನ್ನಡ ಪರ ಸಂಘಟನೆಗಳು ಹಾಗೂ ಸಾಹಿತಿಗಳ ಬೆಂಬಲವನ್ನು ಪಡೆದಿರುವ ಸಿದ್ದರಾಮಯ್ಯ ಅವರು ಈ ಬಾರಿಯ ರಾಜ್ಯ ಬಜೆಟ್'ನ್ನು ಕನ್ನಡಿಗರ ಮನಗೆಲ್ಲಲು ವೇದಿಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. 
ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಲು ನಿರ್ಧಾರ ಕೈಗೊಂಡಿರುವ ಸರ್ಕಾರ, ಈ ಬಾರಿಯ ಬಜೆಟ್ ಮಂಡನೆ ವೇಳೆ ಪ್ರತ್ಯೇಕ ನಾಡಧ್ವಜ ಕುರಿತಂತೆ ಬಹುಮುಖ್ಯ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಕಾನೂನಿನ ಅಂಶಗಳ ಪರಿಶೀಲನೆ ಮತ್ತು ಧ್ವಜ ವಿನ್ಯಾಸ ಅಂತಿಮ ಮಾಡುವ ಸಲುವಾಗಿ ಜುಲೈನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿಯು ಸತತ ಸಭೆಗಳನ್ನು ನಡೆಸಿ ಧ್ವಜದ ಮಾದರಿಯನ್ನು ಅಂತಮಗೊಳಿಸಿದ್ದು, ಕಳೆದ ಜೂನ್ ನಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. 
ಪ್ರತ್ಯೇಕ ನಾಡಧ್ವಜ ಕುರಿತ ವಿನ್ಯಾಸ ಹಾಗೂ ಬಣ್ಣಗಳ ಕುರಿತ ವರದಿಯನ್ನು ಈಗಾಗಲೇ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ಸಮಿತಿ ವಿನ್ಯಾಸಗೊಳಿಸಿರುವ ನಾಡಧ್ವಜವು ಹಳದಿ, ಬಿಳಿ ಹಾಗೂ ಕೆಂಪುಗಳನ್ನೊಳಗೊಂಡಿದ್ದು, ಬಿಳಿ ಬಣ್ಣದ ಮಧ್ಯದಲ್ಲಿ ಕರ್ನಾಟಕ ಸರ್ಕಾರದ ಲಾಂಛನ ಮುದ್ರೆ ಗಂಡಬೇರುಂಡ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ವರದಿಯನ್ನು ಹಾಗೂ ಅಧಿಕಾರಿಗಳ ಅಭಿಪ್ರಾಯಗಳನ್ನು ಸಲ್ಲಿಸಿದ್ದೇವೆ. ಇನ್ನು ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟ ವಿಚಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. 
ಹಲವು ವರ್ಷಗಳಿಂದರೂ ರಾಜ್ಯವು ಅನಧಿಕೃತ ನಾಡಧ್ವಜವನ್ನು ಕನ್ನಡ ರಾಜ್ಯೋತ್ಸವ ಸೇರಿದಂದೆ ಇನ್ನಿತರೆ ರಾಜ್ಯದ ಕಾರ್ಯಕ್ರಮಗಳಲ್ಲಿ ಹಾರಿಸುತ್ತಿದೆ. ಕಾನೂನು ಚೌಕಟ್ಟಿನಲ್ಲಿ ರಾಜ್ಯಕ್ಕೆ ಅಧಿಕೃತ ನಾಡಧ್ವಜ ಪಡೆದುಕೊಳ್ಳುವಂತೆ ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳು ಆಗ್ರಹಿಸುತ್ತಲೇ ಇದ್ದಾರೆ. ಹೀಗಾಗಿ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ತರಲು ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ಹೇಳಿದೆ. 
ಸರ್ಕಾರ ನಿರ್ಧಆರವನ್ನು ಖಂಡಿಸಿರುವ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರು, ಸರ್ಕಾರ ಇತ್ತೀಚಿನ ಬೆಳವಣಿಗೆಗಳು ಚುನಾವಣಾ ತಂತ್ರವಷ್ಟೇ ಎಂದು ಹೇಳಿದ್ದಾರೆ. 
ಕಳೆದ ನಾಲ್ಕು ವರ್ಷಗಳಿಂದ ಏನನ್ನೂ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 1 ವರ್ಷದಿಂದ ಕನ್ನಡ ಹಾಗೂ ಕನ್ನಡಿಗರ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇವೆಲ್ಲವೂ ಚುನಾವಣಾ ತಂತ್ರವಷ್ಟೇ. ಮೆಟ್ರೋ ನಿಲ್ದಾಣಗಳಲ್ಲಿದ್ದ ಹಿಂದಿ ನಾಮಫಲಕಗಳನ್ನು ತೆಗೆದಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ರಾಜ್ಯ ಸರ್ಕಾರದ ಹಲವು ಕಚೇರಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯೇ ಇಲ್ಲ. ಇದರ ಬಗ್ಗೆ ಸಿದ್ದರಾಮಯ್ಯ ಅವರು ಏನನ್ನೂ ಹೇಳುವುದಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com