ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭ: 7ನೇ ಬಾರಿ ಆಯವ್ಯಯ ಮಂಡಿಸಲಿರುವ ಬಿಎಸ್'ವೈ, ಹೊಸ ಯೋಜನೆಗಳೇನು?

4ನೇ ಬಾರಿ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದು, ಪ್ರಸಕ್ತ ಹಣಕಾಸು ಪರಿಸ್ಥಿತಿ ಹಿನ್ನೆಲೆಯಲ್ಲಿ ಎಲ್ಲವನ್ನು ಹೇಗೆ ಸರಿದೂಗಿಸುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 4ನೇ ಬಾರಿ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದು, ಪ್ರಸಕ್ತ ಹಣಕಾಸು ಪರಿಸ್ಥಿತಿ ಹಿನ್ನೆಲೆಯಲ್ಲಿ ಎಲ್ಲವನ್ನು ಹೇಗೆ ಸರಿದೂಗಿಸುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ. 

ತಮ್ಮ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಮತ್ತೊಂದು ಬಜೆಟ್ ಮಂಡಿಸುವ ಗೋಜಿಗೆ ಹೋಗದ ಯಡಿಯೂರಪ್ಪ ಅವರು ಹಿಂದಿನ ಕುಮಾರಸ್ವಾಮಿಯವರ ಸರ್ಕಾರದ ಬಜೆಟ್'ನ ಕಾರ್ಯಕ್ರಮಗಳನ್ನೇ ಮುಂದುವರಿಸಿದ್ದರು. ಇದೀಗ ಬಿಜೆಪಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿರುವುದರಿಂದ ಹಿಂದಿನ ಸರ್ಕಾರದ ಯಾವೆಲ್ಲಾ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಕೈಬಿಡುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ. 

ಇನ್ನು ಇದು ಯಡಿಯೂರಪ್ಪ ಅವರ 7ನೇ ಬಜೆಟ್ ಆಗಿದೆ. ಈ ಹಿಂದೆ 2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ವೇಳೆ 2 ಬಾರಿ, ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ 4 ಬಾರಿ ಬಜೆಟ್ ಮಂಡಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು 9 ಬಾರಿ ಬಜೆಟ್ ಮಂಡಿಸಿದ ದಾಖಲೆ ಇದೆ. 

ಕಳೆದ ಬಾರಿ ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ ಗಾತ್ರ 2.34 ಲಕ್ಷ ಕೋಟಿ ಇತ್ತು. ಈ ಬಾರಿ ಬಜೆಟ್ ಗಾತ್ರ ಕಡಿಮೆಯಾಗಬಹುದು ಎಂಬ ವಂದತಿ ಹಬ್ಬಿದ್ದರೂ ಅದನ್ನು ಸ್ವತಃ ಯಡಿಯೂರಪ್ಪ ಅವರು ತಳ್ಳಿಹಾಕಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 2.50 ಲಕ್ಷ ಕೋಟಿ ತಲುಪುವ ನಿರೀಕ್ಷೆಗಳಿವೆ. 

ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಯಡಿಯೂರಪ್ಪ ಅವರು, ರೈತಪರ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಕೃಷಿ ಚಟುವಟಿಕೆಗೆ ಪೂರಕವಾದ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆಗಳಿವೆ. ಜೊತೆಗೆ ಲೋಕೋಪಯೋಗಿ ಹಾಗೂ ಮೂಲಸೌಕರ್ಯಕ್ಕೂ ಹೆಚ್ಚಿನ ಅನುದಾನ ನಿಗದಿಪಡಿಸುವುದು ನಿಶ್ಚಿತವಾಗಿದೆ. 

ಇಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿರುವ ಯಡಿಯೂರಪ್ಪ ಅವರು ಕಳೆದ 1 ತಿಂಗಳಿಗೂ ಹೆಚ್ಚು ಸಮಯದಿಂದಲೇ ಪೂರ್ವಭಾವಿ ಸಿದ್ಧತೆ ನಡೆಸಿದ್ದಾರೆ. ಅರ್ಹ ಶಾಸಕರ ಸಂಪುಟ ಸೇರ್ಪಡೆ, ಸಂಪುಟ ವಿಸ್ತರಣೆ ಗೊಂದಲದ ನಡುವೆಯೇ ಸದ್ದಿಲ್ಲದೆ ಸರಣಿ ಸಭೆಗಲನ್ನು ನಡೆಸಿದ ಯಡಿಯೂರಪ್ಪ ಅವರು ಸಂಪನ್ಮೂಲ ಕ್ರೋಢೀಕರಿಸುವ ಕಸರತ್ತು ಮಾಡಿದರು. 

ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಹಿಂದಿನ ಸಮ್ಮಿಶ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ಕೈಬಿಡುವುದೂ ಕೂಡ ಅಷ್ಟು ಸುಲಭದ ಕೆಲಸವಲ್ಲ. ಹೀಗಾಗ ಅವುಗಳೆಲ್ಲವೂ ಉಳಿಸಿಕೊಂಡರೆ ಹೊಸದಾಗಿ ಹೆಚ್ಚಿನ ಯೋಜನೆಗಳನ್ನು ಘೋಷಿಸುವುದು ಕಷ್ಟವಾಗಬಹುದು. ಹೀಗಾಗಿ ಹಿಂದಿನ ಸರ್ಕಾರದ ಯೋಜನೆಗಳ ಪೈಕಿ ಕೆಲವನ್ನು ಕೈಬಿಡುವ ಅಥವಾ ಅನುದಾನ ಕಡಿತಗೊಳಿಸುವ ಪ್ರಯತ್ನ ಮಾಡುವ ಸಾಧ್ಯತೆಗಲಿವೆ. ಜೊತೆಗೆ ಕೇಂದ್ರ ಸರ್ಕಾರದ ಮಾದರಿಯಲ್ಲೇ ತೀರಾ ಜನಪ್ರಿಯ ಘೋಷಣೆಗಳಿಂದ ದೂರ ಉಳಿಯುವ ಪ್ರಯತ್ನ ಮಾಡಬಹುದು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com