ರಾಜ್ಯ ಬಜೆಟ್ 2022: ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ಧನ ಹೆಚ್ಚಳ, ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿರುವ 2022-23ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ಧನವನ್ನು ಪ್ರಕಟಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿರುವ 2022-23ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ಧನವನ್ನು ಪ್ರಕಟಿಸಲಾಗಿದೆ. ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ರೇಷ್ಮೆ ಬೆಳೆಗಾರರು ಉತ್ಪಾದಿಸಿದ ದ್ವಿತಳಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿ ಟನ್ ಗೆ 10 ಸಾವಿರ ರೂ. ಗಳಂತೆ ಪ್ರೋತ್ಸಾಹ ಧನ ಘೋಷಿಸಿದ್ದಾರೆ.

ದ್ವಿತಳಿ ಮೊಟ್ಟೆ ಉತ್ಪಾದಿಸಿ ಶೈತೀಕರಿಸಲು ಮದ್ದೂರು, ರಾಣಿಬೆನ್ನೂರು ಮತ್ತು ದೇವನಹಳ್ಳಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಶೈತ್ಯಾಗಾರ, ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರೇಷ್ಮೆ ಬೆಳೆಗಾರರು ಆದಾಯ ಹೆಚ್ಚಿಸಲು ಮತ್ತು ರೇಷ್ಮೆ ಉತ್ಪಾದನೆಯನ್ನು ವೃದ್ಧಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಕೆಜಿಗೆ 50 ರೂ.ಗಳಷ್ಟು ಹೆಚ್ಚಿಸಲಾಗುವುದು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಉತ್ಪಾದಿಸಿದ ಕಚ್ಚಾ ರೇಷ್ಮೆಗೂ ಪ್ರೋತ್ಸಾಹ ಧನ ನೀಡಲಾಗುವುದು ಎಂದಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ರೇಷ್ಮೆಯ ಎಲ್ಲಾ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಸಜ್ಜಿತ ತರಬೇತಿ ಕೇಂದ್ರವನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು, ರೇಷ್ಮೆಗೂಡು ಮತ್ತು ಕಚ್ಚಾ ರೇಷ್ಮೆ ಧಾರಣೆಗಳಲ್ಲಿ ಕುಸಿತವಾದಾಗ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಣಿಕೆದಾರರ ಹಿತರಕ್ಷಣೆಗಾಗಿ ಅವರು ಉತ್ಪಾದಿಸಿದ ಕಚ್ಚಾ ರೇಷ್ಮೆಯನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ವತಿಯಿಂದ ಖರೀದಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಶು ಸಂಗೋಪನೆ ಕ್ಷೇತ್ರ: ಗ್ರಾಮೀಣ ಪ್ರದೇಶದಲ್ಲಿ ಜಾನುವಾರಗಳ ಆರೋಗ್ಯ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕಿತ್ಸಾಲಯಗಳನ್ನು ಬಲಪಡಿಸುವುದರೊಂದಿಗೆ ನೂತನ 100 ಪಶು ಚಿಕಿತ್ಸಾಲಯಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು, ಖಾಲಿಯಿರುವ 400 ಪಶು ವೈದ್ಯಾಧಿಕಾರಿ ಹುದ್ದೆ ಭರ್ತಿ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸರ್ಕಾರ ಉತ್ಪಾದಕರಿಗೆ ಸರಳ ನಿಬಂಧನೆಗಳೊಂದಿಗೆ ಸಾಲ ಸೌಲಭ್ಯ- ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ, ದಾವಣಗೆರೆ- ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲು ಉದ್ದೇಶಿಸಲಾಗಿದೆ. 

ಗೋಶಾಲೆಗಳಲ್ಲಿನ ಗೋವುಗಳನ್ನು ಸಾರ್ವಜನಿಕರು ಹಾಗೂ ಖಾಸಗಿ ಸಂಸ್ಥೆಗಳು ವಾರ್ಷಿಕ 11,000 ರೂ. ಗಳ ಮೊತ್ತಕ್ಕೆ ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆ ಪ್ರಾರಂಭಿಸಲಾಗಿದೆ. ರಾಜ್ಯದ ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿಯನ್ನು ಹೆಚ್ಚಿಸಲು ಕೆ.ಎಂ.ಎಫ್ ಮೂಲಕ 2,000 ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com