2023-24ನೇ ಸಾಲಿನ ರಾಜ್ಯ ಬಜೆಟ್'ಗೆ ಕ್ಷಣಗಣನೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಬಂಪರ್ ಘೋಷಣೆಗಳ ನಿರೀಕ್ಷೆ

2023-24ನೇ ಸಾಲಿನ ರಾಜ್ಯ ಬಜೆಟ್'ಗೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ತಮ್ಮ ಎರಡನೆಯ ಹಾಗೂ ಈ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್'ಗೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ತಮ್ಮ ಎರಡನೆಯ ಹಾಗೂ ಈ ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡಲಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಮುಖ್ಯಮಂತ್ರಿಗಳು ಭರ್ಜರಿ ಕೊಡುಗಗಳನ್ನು ಘೋಷಿಸುವ ಸಾಧ್ಯತೆಗಳಿವೆ. ರೈತರು, ಬಡವರು, ಮಹಿಳೆಯರು ಹಾಗೂ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೊಮ್ಮಾಯಿಯವರು ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ.

ಇದು ಸರ್ಕಾರದ ಪೂರ್ಣ ಪ್ರಮಾಣ ಬಜೆಟ್ ಆಗಿರಲಿದೆ. ಚುನಾವಣೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವುದರ ಜೊತೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಮಧ್ಯಂತರ ಬಜೆಟ್‌ಗೆ ಯಾವುದೇ ರೀತಿಯ ಪ್ರಾಧಾನ್ಯತೆ ಇಲ್ಲ. ಆದ್ದರಿಂದ, ಪೂರ್ಣ ಬಜೆಟ್ ಇದಾಗಿರಲಿದೆ ಎಂದು  ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಬೊಮ್ಮಾಯಿ ಉತ್ತರ ಕರ್ನಾಟಕದವರಾಗಿರುವುದರಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಹೆಚ್ಚಿನ ಮತದಾರರ ಸೆಳೆಯಲು ಪ್ರಯತ್ನ ನಡೆಸುತ್ತಿರುವ ಬೆಂಗಳೂರು ಮತ್ತು ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡನೆ ಮಾಡಿತ್ತು. ಬಜೆಟ್ ನಲ್ಲಿ ರೂ.1.25 ಲಕ್ಷ ಕೋಟಿ ಅನುದಾನವ್ನು ಕೃಷಿಗೆ ನೀಡಿತ್ತು. ಕರ್ನಾಟಕ ಭದ್ರಾ ಮೇಲ್ದಂಡೆ ಯೋಜನೆಗ ರೂ.5.300 ಕೋಟಿ ನೀಡುವುದಾಗಿ ಘೋಷಿಸಿತ್ತು. ಹೀಗಾಗಿ ಬೊಮ್ಮಾಯಿಯವರೂ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಕೃಷಿ ಮೇಲೆ ಹೆಚ್ಚಿನ ಗಮನ ಹರಿಸಲಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೂ ಈ ಬಾರಿಯ ಬಜೆಟ್ ನಲ್ಲಿ ದೊಡ್ಡ ಮಟ್ಟದ ಅನುದಾನ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.

ಬೆಳಿಗ್ಗೆ 10.15ಕ್ಕೆ ಬಜೆಟ್ ಮಂಡನೆಯಾಗಲಿದ್ದು, ಬೊಮ್ಮಾಯಿಯವರು ಕಳೆದ 2022-23ನೇ ಸಾಲಿನಲ್ಲಿ ರೂ.2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಗಾತ್ರ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಬಜೆಟ್‌ ಮಂಡನೆಗೂ ಮುನ್ನ ಮುಖ್ಯಮಂತ್ರಿಗಳು ಬೆಂಗಳೂರಿನ ಆರ್‌.ಟಿ. ನಗರದಲ್ಲಿರುವ ಶ್ರೀಕಂಠೇಶ್ವರ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ.

ನಂತರ ವಿಧಾನಸೌಧದಲ್ಲಿ ಬೆಳಗ್ಗೆ 9.45ಕ್ಕೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ನಡೆಸಿ, ಬಜೆಟ್​ಗೆ ಅನುಮೋದನೆ ಪಡೆಯಲಿದ್ದಾರೆ. ಬಜೆಟ್ ಮಂಡನೆ ಬಳಿಕ ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿರುವ ಮುಖ್ಯಮಂತ್ರಿಗಳು ಹೆಚ್ಚಿನ ವಿವರ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com