Karnataka Budget 2023: ಎರಡು ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ

ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 3.8 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ 543 ಕೋಟಿ ರೂ. ಸಹಾಯಧನ ನೀಡಲಾಗುವುದು. 2 ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 3.8 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ 543 ಕೋಟಿ ರೂ. ಸಹಾಯಧನ, 2 ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, 16,400 ಮಕ್ಕಳಿಗೆ ಕಲಿಕಾ ಉಪಕರಣಗಳ ವಿತರಣೆ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಾತ್ಕಾಲಿಕ ವಸಗಿ ಗೃಹ ಸೇರಿದಂತೆ ವಿವಿಧ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಡಿ 23 ಲಕ್ಷ ಫಲಾನುಭವಿಗಳು ಮತ್ತು ಅವಲಂಬಿತರಿಗೆ ಒಟ್ಟು 1,785 ಕೋಟಿ ರೂ.ಗಳ ನೆರವನ್ನು ನೀಡಲಾಗಿದೆ ಎಂದರು.

2022  ರಲ್ಲಿ 'ಕಾರ್ಮಿಕ ಅದಾಲತ್-2' ನಡೆಸಿ 1.71 ಲಕ್ಷ ಅರ್ಹ ಕಾರ್ಮಿಕರಿಗೆ 85 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಹೊರ ರಾಜ್ಯದಿಂದ ವಲಸೆ ಬಂದ ಕಟ್ಟಡ ಕಾರ್ಮಿಕರ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ 19 ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಹಾಗೂ ಹುಬ್ಬಳ್ಳಿ ಮತ್ತು ದಾವಣಗೆರೆಯ ಇಎಸ್ಐ ಆಸ್ಪತ್ರೆಗಳಲ್ಲಿನ ಹಾಸಿಗೆ ಸಾಮರ್ಥ್ಯವನ್ನು 50 ರಿಂದ 100ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಇಎಸ್ಐ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸಲು 7 ಆಸ್ಪತ್ರೆಗಳಲ್ಲಿ ಐಸಿಯು ಸ್ಥಾಪಿಸಲು, 6 ಆಸ್ಪತ್ರೆಗಳಲ್ಲಿ ಆಯುಷ್ ಘಟಕ ಪ್ರಾರಂಭಿಸಲು ಹಾಗೂ ಜಿಲ್ಲೆಗೊಂದರಂತೆ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಉನ್ನತೀಕರಿಸಲು ಕೇಂದ್ರ ಕಾರ್ಮಿಕ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹೊಸದಾಗಿ ಪ್ರಾರಂಭಿಸಿರುವ 19 ಇಎಸ್ಐ ಚಿಕಿತ್ಸಾಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ 6 ಹೊಸ ಇಎಸ್ಐ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ಒದಗಿಸುತ್ತಿರುವ ಎಲ್ಲಾ ಸೇವೆಗಳನ್ನು ಸುಲಭವಾಗಿ ಮತ್ತು ಸಕಾಲದಲ್ಲಿಒದಗಿಸಲು ಹೊಸ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು. ಲಕ್ಷಾಂತರ ಶ್ರಮಜೀವಿಗಳ ಬದುಕಿಗೆ ಭದ್ರತೆ ಒದಗಿಸಲು 'ಕರ್ನಾಟಕ ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ'ಯನ್ನು ಸ್ಥಾಪಿಸಲಾಗುವುದು. ಸದ್ಯಕ್ಕೆ ಆಸ್ತಿ ತೆರಿಗೆ ಮೇಲೆ ವಿಧಿಸಿರುವ ಸೆಸ್ ಪ್ರಮಾಣವನ್ನು ಹೆಚ್ಚಿಸದೆ ಆಂತರಿಕವಾಗಿ ಸೆಸ್ ದರಗಳನ್ನು ಮಾರ್ಪಾಡುಗೊಳಿಸಲಾಗುವುದು. ಈ ಮೂಲಕ ನೋಂದಾಯಿತ 75 ಲಕ್ಷಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ರಾಜ್ಯದ ದುಡಿಯುತ್ತಿರುವ ಜನರಲ್ಲಿ ಶೇ 24ರಷ್ಟು ಜನ ಸಂಘಟಿತ ವಲಯದ ಉದ್ಯೋಗಿಗಳಾಗಿದ್ದಾರೆ. ಇದು ದೇಶದ ಸರಾಸರಿ ಶೇ 20ಕ್ಕಿಂತ ಹೆಚ್ಚಿದೆ. ರಾಜ್ಯದ ನಿರುದ್ಯೋಗ ಪ್ರಮಾಣ ಶೇ 4.2ಕ್ಕಿಂತ ಕಡಿಮೆ ಇದೆ. 2022-23ನೇ ಸಾಲಿನ ಕರ್ನಾಟಕ ಉದ್ಯೋಗ ವರದಿ ಪ್ರಕಾರ, ಇಪಿಎಫ್ಒಗೆ ಸೇರ್ಪಡೆಯಾದ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯಲ್ಲಿ ರಾಜ್ಯದ ಪಾಲು ಶೇ 10.4ರಷ್ಟಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com