Karnataka Budget 2023: ತುಮಕೂರು ಮತ್ತು ಬೆಂಗಳೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್‌ ಸ್ಥಾಪನೆ

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ತಿಂಗಷ್ಟೇ ಬಾಕಿ ಇದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಬಜೆಟ್ ಮಂಡಿಸುತ್ತಿದ್ದಾರೆ. ತಾವು ಮಂಡಿಸುತ್ತಿರುವ ಎರಡನೇ ಬಜೆಟ್‌ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವತ್ತ ಗಮನ ಹರಿಸಿರುವ ಬೊಮ್ಮಾಯಿ, ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ತಿಂಗಷ್ಟೇ ಬಾಕಿ ಇದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಬಜೆಟ್ ಮಂಡಿಸುತ್ತಿದ್ದಾರೆ. ತಾವು ಮಂಡಿಸುತ್ತಿರುವ ಎರಡನೇ ಬಜೆಟ್‌ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವತ್ತ ಗಮನ ಹರಿಸಿರುವ ಬೊಮ್ಮಾಯಿ, ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ.

ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎಂಬ ಧ್ಯೇಯದೊಂದಿಗೆ ಆರೋಗ್ಯ ಸೇವೆಗಳನ್ನು ಕೆಳಹಂತದಲ್ಲಿಯೂ ಬಲಪಡಿಸಲು ಹಾಗೂ ಜನರಿಗೆ ಸ್ಥಳೀಯವಾಗಿ, ಸುಲಭವಾಗಿ ತಜ್ಞರ ಸೇವೆಯನ್ನು ಒದಗಿಸಲು 2022-23ನೇ ಸಾಲಿನಲ್ಲಿ ಘೋಷಿಸಿದಂತೆ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್‌ಗಳನ್ನು ಸ್ಥಾರಿಸಲು ಅನುಮೋದನೆ ನೀಡಲಾಗಿದ್ದು, 272 ನಮ್ಮ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಿವೆ. ಖಾನಾಪುರ, ಆನೇಕರ್, ಶಿರಹಟ್ಟಿ, ಶೃಂಗೇರಿ, ಯಳಂದೂರು, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.

ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಮತ್ತು ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ 50 ಹಾಸಿಗೆಯ ಹಾಗೂ ತುಮಕೂರು ಮತ್ತು ಬೆಂಗಳೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪಿಸಲಾಗುವುದು. ತಾಯಂದಿರಿಗೆ ಮತ್ತು ನವಜಾತ ಶಿಶುಗಳಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡುವ ದೃಷ್ಟಿಯಿಂದ ರಾಜ್ಯದಲ್ಲಿ 165 ಕೋಟಿ ರೂ. ವೆಚ್ಚದಲ್ಲಿ 10 ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಹೇಳಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಾಗುವುದು. ರಕ್ತಹೀನತೆ ತಡೆಯಲು ಹೊಸ ಯೋಜನೆಯಡಿಯಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ. ಮನೆ ಮನೆಗೆ ಆರೋಗ್ಯ ಎಂಬ ಕಾರ್ಯಕ್ರಮದಡಿ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಜೆಟ್ ಮುಖ್ಯಾಂಶಗಳು

* ಎಲ್ಲಾ ಜಿಲ್ಲೆಗಳಲ್ಲಿ Hand Held X-ray ಯಂತ್ರಗಳ ಮೂಲಕ ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಗಾಗಿ 12.50 ಕೋಟಿ ರೂ.

* ಕ್ಯಾನ್ಸರ್ ಪತ್ತೆಗೆ ಅಗತ್ಯವಿರುವ ಸಾಧನಗಳ ಖರೀದಿಗಾಗಿ 12 ಕೋಟಿ ರೂ. ಅನುದಾನ

* 1 ಲಕ್ಷ ಡಯಾಲಿಸಿಸ್ ಸೈಕಲ್‌ಗಳಿಗೆ ಹೆಚ್ಚಳ

* 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ 'ವಾತ್ಸಲ್ಯ' ಯೋಜನೆ

* ರಾಜ್ಯದ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು 12.05 ಕೋಟಿ ರೂ. ವೆಚ್ಚದಲ್ಲಿ 'ನಗು ಮಗು' ವಾಹನ

* ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪ್ರಯೋಗಾಲಯಗಳು ಹಾಗೂ ಬೆಂಗಳೂರಿನಲ್ಲಿ ರಾಜ್ಯ ರೆಫರಲ್ ಪ್ರಯೋಗಾಲಯ ಸ್ಥಾಪನೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com