ಕರ್ನಾಟಕ ಬಜೆಟ್ 2023: ಸಿಎಂ ಸಿದ್ದರಾಮಯ್ಯ 14ನೇ ಬಾರಿ ಆಯವ್ಯಯ ಮಂಡನೆ, ಕಾಂಗ್ರೆಸ್ ಗ್ಯಾರಂಟಿಗಳತ್ತ ಎಲ್ಲರ ಚಿತ್ತ!

ಗ್ಯಾರಂಟಿಗಳ ಭರವಸೆಯೊಂದಿಗೆ ರಚನೆಯಾಗಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಶುಕ್ರವಾರ (ಜುಲೈ7) ತನ್ನ ಮೊದಲ ಬಜೆಟ್‌ ಮಂಡಿಸಲಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮಂಡಿಸಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗ್ಯಾರಂಟಿಗಳ ಭರವಸೆಯೊಂದಿಗೆ ರಚನೆಯಾಗಿರುವ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಶುಕ್ರವಾರ (ಜುಲೈ7) ತನ್ನ ಮೊದಲ ಬಜೆಟ್‌ ಮಂಡಿಸಲಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮಂಡಿಸಲಿದ್ದಾರೆ.

ಚುನಾವಣಾ ಪೂರ್ವ ಭರವಸೆಯಂತೆ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಸೇರಿದಂತೆ 5 ಗ್ಯಾರಂಟಿ ಕಾರ್ಯಕ್ರಮಗಳ ಜಾರಿಗೆ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಅಗತ್ಯ ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ವಿಶೇಷ ಕುತೂಹಲವೇನೂ ಇಲ್ಲ. ಆದರೆ, ಹೊಸ ಸರ್ಕಾರದ ಬಗ್ಗೆ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇರುವುದರಿಂದ ಇದನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಯಾವ ರೀತಿ ಮಂತ್ರದಂಡ ಪ್ರಯೋಗಿಸಬಹುದು ಎಂಬುದರ ಕುರಿತು ಕುತೂಹಲಗಳು ಕೆರಳಿವೆ.

ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯದಲ್ಲಿ 13 ಬಜೆಟ್‌ ಮಂಡಿಸಿದ್ದು, ಇದೀಗ ದಾಖಲೆಯ 14ನೇ ಬಜೆಟ್‌ ಮಂಡಿಸುತ್ತಿದ್ದಾರೆ.

ಇಂತಹ ಅನುಭವಿ ನಾಯಕ ರಾಜ್ಯದ ದೂರದೃಷ್ಟಿಯ ಅಭಿವೃದ್ಧಿ ದೃಷ್ಟಿಯಿಂದ ಯಾವೆಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಬಹುದು ಎಂಬ ನಿರೀಕ್ಷೆಯೂ ಇದೆ. ಇದರ ಜೊತೆಗೆ ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್‌ ಸರಕಾರದ ಲೆಕ್ಕಾಚಾರ ಹೇಗಿರಬಹುದು ಎಂಬುದರ ಕುರಿತಂತೆಯೂ ಕುತೂಹಲಗಳು ಗರಿಗೆದರಿವೆ.

ಇಂದು ಮಧ್ಯಾಹ್ನ 12 ಗಂಟೆಗೆ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಾಗಲಿದ್ದು, ಸಿದ್ದರಾಮಯ್ಯ ಅವರು ಇಂದು ಮಂಡಿಸುವ ಬಜೆಟ್ ಇತಿಹಾಸವನ್ನು ಸೃಷ್ಟಿಸಲಿದೆ. ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ.

ಈಗಾಗಲೇ 13 ಬಜೆಟ್ ಮಂಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಅವರ ದಾಖಲೆಯನ್ನು ಸರಿಗಟ್ಟಿಸುವ ಸಿದ್ದರಾಮಯ್ಯ ಇಂದು 14ನೇ ಬಜೆಟ್ ಮಂಡನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಆದರೆ, ಈ ಐತಿಹಾಸಿತ ಸಾಧನೆಯೂ ಸಾಲ ಸುಳಿಗೆ ಸಿಲುಗಿ ಅಧೋಗತಿಯತ್ತ ಸಾಗಿರುವ ರಾಜ್ಯದ ಆರ್ಥಿಕ ಸ್ಥಿತಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪನ್ಮೂಲಗಳ ಕ್ರೋಢೀಕರಣದಂತಹ ಸಾಲು ಸಾಲು ಸವಾಲುಗಳನ್ನು ಹೇಗೆ ನಿರ್ವಹಿಸಲಿದ್ದಾರೆಂಬುದರ ಕುರಿತು ಕುತೂಹಲಗಳು ಹುಟ್ಟಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com