ಕರೆ ಬಂದೀತು ಹುಷಾರ್..!

ನಾವು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ)ದಿಂದ ಕರೆ ಮಾಡುತ್ತಿದ್ದೇವೆ. ನಾವು ದೇಶದ ಭದ್ರತೆಯ ದೃಷ್ಟಿಯಿಂದ..
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಸಂಗ್ರಹ ಚಿತ್ರ)
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಸಂಗ್ರಹ ಚಿತ್ರ)

-ಸುಭಾಶ್ಚಂದ್ರ ಎಸ್.ವಾಗ್ಳೆ
'ನಾವು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ)ದಿಂದ ಕರೆ ಮಾಡುತ್ತಿದ್ದೇವೆ. ನಾವು ದೇಶದ ಭದ್ರತೆಯ ದೃಷ್ಟಿಯಿಂದ ದೇಶದ ವಿವಿಧ ಬ್ಯಾಂಕ್‌ಗಳ ಬಗ್ಗೆ, ಖಾತೆದಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ, ನಿಮ್ಮ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಡಿದ್ದೇವೆ. ಅದನ್ನು ಖಚಿತ ಪಡಿಸಿಕೊಳ್ಳಲು ನಿಮ್ಮನ್ನು ಸಂಪರ್ಕಿಸುತ್ತಿದ್ದೇವೆ, ದಯವಿಟ್ಟು ಸಹಕರಿಸಿ..'

ಹಾಗಂತ ಮಣಿಪಾಲ ವಿವಿಯ ಪ್ರಜ್ಯೋಷ್ ಎಂಬ ವೈದ್ಯಕೀಯ ವಿದ್ಯಾರ್ಥಿಯೊಬ್ಬರ ಮೊಬೈಲ್‌ಗೆ ಇತ್ತೀಚೆಗೆ ಕರೆ ಬಂತು. ನೀವು ಆಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಿ, ನಿಮ್ಮ ಖಾತೆ ಸಂಖ್ಯೆ---ಹೌದೇ ಎಂದು ಆ ಕಡೆಯ ಧ್ವನಿ ಅತ್ಯಂತ ಶುದ್ಧ ಇಂಗ್ಲಿಷ್‌ನಲ್ಲಿ ಕೇಳಿತು. ಪ್ರಜ್ಯೋಷ್ ಹೌದು ಎಂದರು. ನಿಮ್ಮ ಖಾತೆಯ ಭದ್ರತೆಯ ದೃಷ್ಟಿಯಿಂದ ಪಿನ್ (ಪರ್ಸನಲ್ ಐಡೆಂಟಿಟಿ ನಂಬರ್) ಯಾರಿಗೂ ಹೇಳಬೇಡಿ.

ಆದರೆ ನಮ್ಮ ಮಾಹಿತಿಗಾಗಿ ನಿಮ್ಮ ಕಾರ್ಡ್ ನಂಬರ್ ಹೇಳಿ ಎಂದು ಕೇಳಿದಾಗ ಪ್ರಜ್ಯೋಷ್ ಅದನ್ನೂ ಹೇಳಿದರು. ಬಳಿಕ ನಿಮ್ಮ ಎಟಿಎಂನ ಕಾರ್ಡ್‌ನ ಹಿಂದೆ ಇರುವ 3 ಅಂಕಿಗಳನ್ನು ಹೇಳಿ ಎಂದಿತು. ಪ್ರಜ್ಯೋಷ್ ಅನುಮಾನಿಸಿದಾಗ, ನೋಡಿ ಅದು ಪಿನ್ ನಂಬರ್‌ನಂತೆ ಗೌಪ್ಯ ಸಂಖ್ಯೆ ಅಲ್ಲ. ಗೌಪ್ಯ ಆಗಿದ್ದರೆ ಅದನ್ನು ಕಾರ್ಡಿನ ಮೇಲೆ ಮುದ್ರಿಸುತ್ತಿರಲಿಲ್ಲ ಎಂದರು.

ಹೌದಲ್ಲ ಎಂದುಕೊಂಡ ಪ್ರಜ್ಯೋಷ್ ತಮ್ಮ ಆಕ್ಸಿಸ್ ಬ್ಯಾಂಕ್‌ನ ಎಟಿಎಂ ಕಾರ್ಡ್ ಹಿಂದಿರುವ 3 ಅಂಕಿಗಳನ್ನು ಹೇಳಿದರು. ನಿಮ್ಮೆಲ್ಲ ಮಾಹಿತಿಗಳ ಗೌಪ್ಯತೆಯನ್ನು ಆರ್‌ಬಿಐ ಕಾಪಾಡಿಕೊಳ್ಳುತ್ತದೆ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು, ಹ್ಯಾವ್‌ಎ ನೈಸ್ ಡೇ ಎಂದು ಧ್ವನಿ ಕರೆಯನ್ನು ಮುಗಿಸಿತು.

ಯಾಕೋ ಅನುಮಾನ ಬಂತು, ಯಾವುದಕ್ಕೂ ಇರಲಿ ಎಂದು ಎಟಿಎಂಗೆ ಹೋಗಿ ನೋಡಿದರೆ ಅಷ್ಟರಲ್ಲಾಗಲೇ ಪ್ರಜ್ಯೋಷ್ ಅವರ ಖಾತೆಯಲ್ಲಿದ್ದ ಸುಮಾರು 22,000 ರುಪಾಯಿ ಮಾಯವಾಗಿತ್ತು. ಕೂಡಲೇ ಅವರು ತಮಗೆ ಕರೆ ಬಂದ ನಂಬರ್‌ಗೆ ರೀಡಯಲ್ ಮಾಡಿದರೆ ಅಷ್ಟರಲ್ಲಾಗಲೇ ಅದು ಸ್ಥಬ್ಧವಾಗಿತ್ತು. ಆಗಲೇ ಪ್ರಜ್ಯೋಷ್‌ಗೆ ಗೊತ್ತಾಗಿದ್ದು ತಾವು ಮೊಸಹೋಗಿದ್ದೇವೆ ಎಂದು.

ಇದೇ ರೀತಿ ಮಣಿಪಾಲ ವಿವಿಯ ಮಕರನ್ ನಾಯ್ಡು ಎಂಬ ವಿದ್ಯಾರ್ಥಿಗೂ ಕೆಲವು ದಿನಗಳ ಹಿಂದೆ ಕರೆ ಬಂದಿತ್ತು. ಅವರೂ ಸುಮಾರು 9 ಸಾವಿರ ಕಳೆದುಕೊಂಡಿದ್ದಾರೆ. ಉಡುಪಿಯ ಸಮಾಜ ಸೇವಕ ರಸೂಲ್ ಕಟಪಾಡಿ ಅವರಿಗೂ ಇತ್ತೀಚೆಗೆ ಇಂತಹುದೇ ಅನುಭವ ಆಗಿದೆ. ಅವರ ಖಾತೆಯಿಂದಲೂ ಸುಮಾರು 10 ಸಾವಿರ ಲಪಟಾಯಿಸಲಾಗಿದೆ. ಹುಡುಕುತ್ತಾ ಹೋದರೆ ಇಂತಹ ಸಾಕಷ್ಟು ಪ್ರಕರಣಗಳು ಸಿಗಬಹುದು.

ವಂಚನೆಗೆ ನೂರಾರು ಮುಖಗಳು
ಈ ರೀತಿ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವುದು ಹೊಸದೇನೂ ಅಲ್ಲ, ಆದರೆ ವಿಧಾನಗಳು ಮಾತ್ರ ಆಗಾಗ್ಗೆ ಬದಲಾಗುತ್ತಲೇ ಇರುತ್ತವೆ. ಪ್ರತಿ ಬಾರಿಯೂ ಸತ್ಯದ ತಲೆಗೆ ಹೊಡೆದ ಹಾಗೇ ಸುಳ್ಳು ಹೇಳಿ ನಂಬಿಸಿ ಟೋಪಿ ಹಾಕಲಾಗುತ್ತಿದೆ. ಆನ್‌ಲೈನ್‌ನಲ್ಲಿ ಖರೀದಿ, ಬಿಲ್ ಪಾವತಿ, ಮೊಬೈಲ್, ಡಿಟಿಎಚ್ ರಿಚಾರ್ಜ್ ಮಾಡುವವರು ತಮ್ಮ ಎಟಿಎಂ (ಕ್ರೆಡಿಟ್-ಡೆಬಿಟ್) ಕಾರ್ಡ್‌ಗಳನ್ನು ಬಳಸುತ್ತಾರೆ.

ಆಗ ಖಾತೆದಾರನ ಹೆಸರು, ಬ್ಯಾಂಕ್ ಹೆಸರು, ಎಟಿಎಂ ಕಾರ್ಡ್ ನಂಬರ್ ನಮೂದಿಸಲೇಬೇಕಾಗುತ್ತದೆ. ಈ ಮಾಹಿತಿಗಳನ್ನು ಹ್ಯಾಕ್ ಮಾಡುವ ಈ ವಂಚಕರು ಅತ್ಯಂತ ನಾಜೂಕಿನಿಂದ ಕರೆ ಮಾಡಿ ನಂಬಿಸಿ ವಂಚಿಸುತ್ತಾರೆ. ಈ ರೀತಿ ಬರುವ ಕರೆಗಳ ನಂಬರಿಗೆ ಒಳಬರುವ ಕರೆಯ ಸೌಲಭ್ಯವನ್ನು ಕಡಿತಗೊಳಿಸಿರಲಾಗುತ್ತದೆ. ಆದ್ದರಿಂದ ಆ ನಂಬರ್‌ಗೆ ವಾಪಸ್ ಕರೆ ಮಾಡುವುದು ಸಾಧ್ಯವಾಗುವುದಿಲ್ಲ. ಪೊಲೀಸರಿಗೆ ದೂರು ನೀಡಿದರೂ ಆ ನಂಬರ್‌ಗಳ ಹಿಂದಿರುವವರನ್ನು ಪತ್ತೆ ಮಾಡುವುದೂ ಸಾಧ್ಯವಾಗುವುದಿಲ್ಲ.

ಆರ್‌ಬಿಐ ಇಂತಹ ಮಾಹಿತಿ ಕೇಳುವುದೇ ಇಲ್ಲ
ಆರ್‌ಬಿಐ ಸಾಕಷ್ಟು ಬಾರಿ, ತಾನಾಗಲಿ ಅಥವಾ ಯಾವುದೇ ಬ್ಯಾಂಕಾಗಲಿ ಯಾವುತ್ತೂ ಖಾತೆದಾರರ ಯಾವುದೇ ವಿವರಗಳನ್ನು ದೂರವಾಣಿ ಕರೆ  ಮಾಡಿ ಕೇಳುವುದಿಲ್ಲ. ಅದರಲ್ಲೂ ಮುಖ್ಯವಾಗಿ ಎಟಿಎಂ ಕಾರ್ಡ್‌ನ ನಂಬರ್, ಪಿನ್ ನಂಬರ್, ಖಾತೆ ನಂಬರ್‌ಗಳನ್ನು ಕೇಳುವುದೇ ಇಲ್ಲ. ಆದ್ದರಿಂದ ಯಾರು ಕೇಳಿದರೂ ಇಂಥ ವಿವರಗಳನ್ನು ಹೇಳಲೇಬಾರದು ಎಂದು ಮಾಧ್ಯಮಗಳ ಮೂಲಕ ಹೇಳುತ್ತಲೇ ಇದೆ. ಜನಸಾಮಾನ್ಯರು ಇಂಥ ಕರೆಗಳಿಗೆ ಮರುಳಾಗದೇ, ಅವುಗಳಿಗೆ ಉತ್ತರ ನೀಡದಿರುವುದೊಂದೇ ಈ ಮೋಸದಿಂದ ತಪ್ಪಿಸಿಕೊಳ್ಳುವ ಉಪಾಯ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com