ಆರ್ಥಿಕ ಪ್ರಗತಿ ಇಳಿಮುಖ

ಚೀನಾ ಆರ್ಥಿಕತೆ ಕುಸಿತದ ಹಾದಿಯಲ್ಲಿ ಇರುವುದರಿಂದ ವಿಶ್ವದ ನೋಟ ಭಾರತದ ಮೇಲೆ ನೆಟ್ಟಿದೆ...
ನಿರ್ಮಾಣ
ನಿರ್ಮಾಣ
ನವದೆಹಲಿ: ಚೀನಾ ಆರ್ಥಿಕತೆ ಕುಸಿತದ ಹಾದಿಯಲ್ಲಿ ಇರುವುದರಿಂದ ವಿಶ್ವದ ನೋಟ ಭಾರತದ ಮೇಲೆ ನೆಟ್ಟಿದೆ. 
ಕೇಂದ್ರ ಹಣಕಾಸು ಸಚಿವರು ಸಹ ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕತೆ ಶೇ.8 ರಿಂದ 8.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಭಾರತದ ಆರ್ಥಿಕ ಪ್ರಗತಿಯೂ ಹಿಮ್ಮುಖವಾಗಿ ಸಾಗಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಪ್ರಸಕ್ತ ಹಣಕಾಸು ಸಾಲಿನ ಜೂನ್‍ಗೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) ಶೇ.7ರಷ್ಟು ಪ್ರಗತಿ ಸಾಧಿಸಿದೆ. 
ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಶೇ.6.7ಕ್ಕೆ ಹೋಲಿಸಿದರೆ ತುಸು ಮಾತ್ರ ಸುಧಾರಣೆ ಕಂಡಿದೆ. ಆದರೆ ಇದರ ಹಿಂದಿನ ತ್ರೈಮಾಸಿಕದಲ್ಲಿನ ಪ್ರಗತಿಗೆ ಹೋಲಿಸಿದರೆ ಇಳಿಮುಖ ಕಂಡಿದೆ. ಮಾರ್ಚ್‍ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.5ರಷ್ಟು ಪ್ರಗತಿ ಸಾಧಿಸಿದ್ದರೆ ಪ್ರಕಟಿತ ತ್ರೈಮಾಸಿದಲ್ಲಿ ಶೇ.7ರಷ್ಟು ಪ್ರಗತಿ ದಾಖಲಿಸಿದೆ. ಕೃಷಿ ಮತ್ತು ತಯಾರಿಕಾ ಕ್ಷೇತ್ರದ ಪ್ರಗತಿ ಇಳಿಮುಖ ಕಂಡಿರುವುದರಿಂದ ಈ ಹಿನ್ನಡೆ ಕಂಡಿದೆ. 
ಕಳೆದ ವರ್ಷ ಇದೇ ಅವಧಿಯಲ್ಲಿ ತಯಾರಿಕಾ ವಲಯ ಶೇ.8.4ರಷ್ಟು ಪ್ರಗತಿ ಸಾಧಿಸಿದ್ದರೆ ಪ್ರಸಕ್ತ ಸಾಲಿನಲ್ಲಿ ಶೇ.7.2ಕ್ಕೆ ಇಳಿದಿದೆ. ಅದೇ ರೀತಿ ಕೃಷಿ ವಲಯ ಶೇ.2.6ರಿಂದ ಶೇ.1.9ಕ್ಕೆ ಇಳಿದಿದೆ. ಕೇಂದ್ರ ಸಾಂಖ್ಯಿಕ ಸಂಸ್ಥೆ (ಸಿಎಸ್‍ಒ) ಆರ್ಥಿಕ ಚಟುವಟಿಕೆಯನ್ನು ಅಳತೆ ಮಾಡಲು ನಿವ್ವಳ ಮೌಲ್ಯ ಸೇರ್ಪಡೆ (ಜಿವಿಎ) ಎಂಬ ಸೂತ್ರವನ್ನು ಅನುಸರಿಸಿದೆ. ಇದರ ಅನುಸಾರ ಆರ್ಥಿಕ ಪ್ರಗತಿ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.7.4ರಷ್ಟು ಇದ್ದದು ಈ ಬಾರಿ ಶೇ.7.1ಕ್ಕೆ ಇಳಿದಿದೆ. ವರದಿ ಬಿಡುಗಡೆ ಮಾಡಿರುವ ತ್ರೈಮಾಸಿಕದಲ್ಲಿ ಜಿಡಿಪಿ ಮತ್ತು ಜಿವಿಎ ಎರಡೂ ಗಣನೀಯ ಇಳಿಮುಖ ಕಂಡಿರುವುದನ್ನು ಅಂಕಿಅಂಶಗಳು ತೋರಿಸಿವೆ. 
ಪ್ರಸಕ್ತ ಹಣಕಾಸು ಸಾಲಿನಲ್ಲಿ ಶೇ.8.1ರಿಂದ 8.5ರಷ್ಟು ಪ್ರಗತಿ ಕಾಣುವ ಅಂದಾಜನ್ನು ಕೇಂದ್ರ ಸರ್ಕಾರ ಹೊಂದಿದೆ. ಈಗಿನ ಪರಿಸ್ಥಿತಿ ನೋಡಿದರೆ ಅಷ್ಟು ಪ್ರಗತಿ ಸಾಧಿಸುವುದು ಕಷ್ಟ ಸಾಧ್ಯ ಎಂಬಂತೆ ತೋರುತ್ತಿದೆ. ಜಿವಿಎ ಲೆಕ್ಕಾಚಾರದ ಪ್ರಕಾರ ತಯಾರಿಕಾ ವಲಯ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.8.4ರಷ್ಟು ಪ್ರಗತಿ ಸಾಧಿಸಿದ್ದರೆ ಈ ವರ್ಷ ಶೇ.7.2ರಷ್ಟು ಮಾತ್ರ ಪ್ರಗತಿ ಕಂಡಿದೆ. ವಿದ್ಯುತ್, ಅನಿಲ, ನೀರು ಸರಬರಾಜು ಮತ್ತಿತರ ಸೇವಾ ವಲಯಗಳ ಅಭಿವೃದ್ಧಿ ಶೇ.10.1ರಿಂದ 3.2ಕ್ಕೆ ಇಳಿದಿದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಬೆಳವಣಿಗೆ ಶೇ.2.6ರಿಂದ ಶೇ.1.9ಕ್ಕೆ ಇಳಿದಿದೆ. ಗಣಿಗಾರಿಕೆ ಮತ್ತು ಕ್ವಾರಿ ಚಟುವಟಿಕೆಗಳು ಸಹ ಶೇ.4.3ರಿಂದ 4ಕ್ಕೆ ಇಳಿದಿದೆ. ಹಣಕಾಸು, ರಿಯಾಲ್ಟಿ ಮತ್ತು ವೃತ್ತಿಪರ ಸೇವೆಗಳ ಪ್ರಗತಿಯೂ ಇಳಿಮುಖ ಕಂಡಿದೆ. ಇವೆಲ್ಲದ ನಡುವೆ ನಿರ್ಮಾಣ ಕ್ಷೇತ್ರ ಮಾತ್ರ ಶೇ.6.5ರಿಂದ ಶೇ.6.9ಕ್ಕೆ ಏರಿಕೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com