
ಮುಂಬೈ: ಸತತ ಮೂರನೆ ವರ್ಷ ಚಿನ್ನ ದರ ಕುಸಿತದೊಂದಿಗೆ ವರ್ಷಾಂತ್ಯ ಕಾಣುತ್ತಿದೆ. 2015ರಲ್ಲಿ ಪ್ರತಿ ಗ್ರಾಂ ಚಿನ್ನದ ದರ ರು.1,000ವರೆಗೂ ನಷ್ಟ ಕಂಡಿದೆ.
ಹೂಡಿಕೆದಾರರ ಬೇರೆ ಬೇರೆ ಯೋಜನೆಗಳತ್ತ ಮುಖ ಮಾಡಿದ್ದ ರಿಂದ ಮತ್ತು ಕೇಂದ್ರ ಸರ್ಕಾರ ಚಿನ್ನದ ಸ್ಕೀಂಗಳನ್ನು ಅನುಷ್ಠಾನಕ್ಕೆ ತಂದಿದ್ದ ರಿಂದ ಚಿನ್ನ ಬೇಡಿಕೆ ಕಳೆದುಕೊಂಡಿತು. ಅಂದರೆ ಚಿನ್ನ ಒಟ್ಟಾರೆ ಶೇ.5ರಷ್ಟು ನಷ್ಟ ಕಂಡಿದೆ. ಬೆಳ್ಳಿ ಪರಿಸ್ಥಿತಿಯೂ ಉತ್ತಮವಾಗಿಲ್ಲ. ಈ ವರ್ಷ ಬೆಳ್ಳಿ ದರ ಶೇ.8ರಷ್ಟು ನಷ್ಟದೊಂದಿಗೆ ವರ್ಷ ಮುಗಿಸಲಿದೆ. ರುಪಾಯಿ ಮೌಲ್ಯ ಅತಿ ಹೆಚ್ಚಿನ ಏರಿಳಿತದಿಂದ ಕೂಡಿದ್ದರಿಂದ ಮತ್ತು ಅಮೆರಿಕದ ಫೆಡರಲ್ ಬ್ಯಾಂಕ್ ಏಳು ವರ್ಷಗಳ ನಂತರ ಬಡ್ಡಿದರ ಹೆಚ್ಚಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಡೀ ವರ್ಷ ಚಿನ್ನ ಮತ್ತು ಬೆಳ್ಳಿ ದರಗಳು ಏಳು ಬೀಳು ಕಂಡವು.
ಜಾಗತಿಕ ಆರ್ಥಿಕತೆಯಲ್ಲಿ ಕಂಡುಬಂದ ಹಿಂಜರಿತದಿಂದಲೂ ಚಿನ್ನಕ್ಕೆ ಬೇಡಿಕೆ ಇಳಿಮುಖ ಕಂಡಿದ್ದು ದರ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಷೇರು ಪೇಟೆಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದು ಹೂಡಿಕೆದಾರರನ್ನು ಅತ್ತ ಆಕರ್ಷಿಸಿತು. ಚಾಲ್ತಿ ಖಾತೆ ಕೊರತೆ ಕಡಿಮೆಗೊಳಿಸಲು ಚಿನ್ನದ ಆಮದಿನ ಮೇಲೆ ಪದೇ ಪದೇ ಮಿತಿ ಹೇರುತ್ತಿದ್ದದು ಮತ್ತು ಮನೆ, ದೇವಸ್ಥಾನಗಳಲ್ಲಿ ಇಟ್ಟು ಕೊಂಡಿರುವ ಚಿನ್ನವನ್ನು ಹೊರತರಲು ಜಾರಿಗೆ ತಂದ ಚಿನ್ನದ ಯೋಜನೆಗಳು ತುಸು ವ್ಯತಿರಿಕ್ತ ಪರಿಣಾಮ ಬೀರಿವೆ.
Advertisement