ಚಿನ್ನಕ್ಕೆ ಮುನ್ನ...

ನೀರೆಯರಿಗೆ ಎಂದಿಗೂ ಆಪ್ತವಾಗಿರುವ ಚಿನ್ನದ ಮೌಲ್ಯ ಚಿನಿವಾರಪೇಟೆಯಲ್ಲಿ ಹಿಂದೆಂದೂ...
ಚಿನ್ನಕ್ಕೆ ಮುನ್ನ...

ನೀರೆಯರಿಗೆ ಎಂದಿಗೂ ಆಪ್ತವಾಗಿರುವ ಚಿನ್ನದ ಮೌಲ್ಯ ಚಿನಿವಾರಪೇಟೆಯಲ್ಲಿ ಹಿಂದೆಂದೂ ಕಂಡರಿಯದಷ್ಟು ಇಳಿಮುಖವಾಗಿದೆ. ಇನ್ನೂ ಸುಮಾರು ಆರು ತಿಂಗಳಿನವರೆಗೂ ಕುಸಿತ ಕಾಣಲಿದೆ ಎಂಬ ಅಂದಾಜು.

ಅಮೆರಿಕದ ಆರ್ಥಿಕ ಪರಿಸ್ಥಿತಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಚೇತರಿಕೆ ಕಂಡಿದ್ದು, ಷೇರು ಹಾಗೂ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾದ ಕಾರಣ, ಅದರ ದರದಲ್ಲಿ ಇಳಿಕೆ ಕಂಡು ಬಂದಿದೆ. ಏಪ್ರಿಲ್‌ವರೆಗೂ ಬೆಲೆ ಇಳಿಮುಖವಾಗುವ ಸಾಧ್ಯತೆ ಇದೆ.

ಶೇ.10ರಷ್ಟು ಕುಸಿಯಬಹುದು. ಅಂದರೆ ರು.2300ರಿಂದ 2350ಗಳಷ್ಟಾಗಬಹುದು.

ದರ ಇಳಿಮುಖವಾಗಿದ್ದರೂ, ಜನ ಆಭರಣ ಖರೀದಿಸಲು ವಿಳಂಬ ಮಾಡುತ್ತಿದ್ದಾರೆ. ಕಾರಣ, ಇನ್ನೂ ದ ಕುಸಿಯಬಹುದೆಂಬ ನಿರೀಕ್ಷೆ. ಆದ್ದರಿಂದ ನಿತ್ಯದ ವ್ಯಾಪಾರ ಮಂದಗತಿಯಲ್ಲಿದೆ. ಕಳೆದ ನಾಲ್ಕು ವರ್ಷದ ಹಿಂದೆ ಗ್ರಾಂ. ಚಿನ್ನಕ್ಕೆ ರು.3400ರಷ್ಟಿತ್ತು, ಸದ್ಯ ಆ ಮಟ್ಟದ ಏರಿಕೆ ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಮದುವೆ-ಸಮಾರಂಭಗಳಿಗಾಗಿ ಆಭರಣ ಖರೀದಿಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಚಿನ್ನದ ಬಿಸ್ಕತ್ ಖರೀದಿಸಿ ಹೂಡಿಕೆ ಮಾಡುವುದರಲ್ಲಿ ವ್ಯತ್ಯಯವಾಗಿದೆ.

ಹೂಡಿಕೆ ಲಾಭದಾಯಕವೇ?

ಚಿನ್ನವನ್ನು ಆಪದ್ಭಾಂದವನೆಂದು ಖರೀದಿಸುತ್ತಾರೆ. ಆದರೂ ಚಿನ್ನ ಖರೀದಿಸಿದಾಗ ವ್ಯಯಿಸುವ ಮೊತ್ತಕ್ಕಿಂತ ಹೆಚ್ಚು ಹಣ ಸಿಗುವ ಸಾಧ್ಯತೆ ಕಡಿಮೆ. ಹರಳು, ವೇಸ್ಟೇಜ್ ಎಂದು ವ್ಯಾಪಾರಿಗಳು ಕಡಿಮೆ ದರಕ್ಕೆ ತೆಗೆದುಕೊಳ್ಳುವರು. ಹೂಡಿಕೆಯಲ್ಲಿ ಲಾಭ, ನಷ್ಟ, ತೆರಿಗೆ ವಿನಾಯಿತಿ ಕುರಿತು ಚಿಂತಿಸಬೇಕು. ಆದರೆ, ಬಳಕೆಗೆ ಅಗತ್ಯವಿರುವಷ್ಟು ಚಿನ್ನ ಖರೀದಿಸುವಾಗ ಈ ಚಿಂತನೆಯ ಅಗತ್ಯವಿಲ್ಲ. ರುಪಾಯಿ ಮೌಲ್ಯ ಕುಸಿದರೆ ಚಿನ್ನದ ಮೌಲ್ಯ ಹೆಚ್ಚುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ಹಾಗಿಲ್ಲ ಎನ್ನುವರು ಹೂಡಿಕೆ ತಜ್ಞರು.

ಕಳೆದ 30 ವರ್ಷದಲ್ಲಿ 1975-2014ರವರೆಗೆ ಚಿನ್ನದ ಹೂಡಿಕೆಯಿಂದ ಬಂದಿರುವ ಆದಾಯದ ಸರಾಸರಿ ಕೇವಲ ಶೇ.5 ರಿಂದ 6ರಷ್ಟು. ಅದೇ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರೆ ಶೇ.10ರಷ್ಟು ಲಾಭವಾಗುತ್ತಿತ್ತು. 2007-12ರಲ್ಲಿ ಮಾತ್ರ ಚಿನ್ನದ ಮೌಲ್ಯ ಶಏ.350ರಷ್ಟು ದಾಖಲೆಯ ಮಟ್ಟದಲ್ಲಿ ಹೆಚ್ಚಳವಾಗಿತ್ತು. ಯಾವಾಗಲೂ ಒಂದರಲ್ಲಿ ಹೂಡಿಕೆ ಮಾಡುವ ಬದಲು ಷೇರು, ರಿಯಲ್ ಎಸ್ಟೇಟ್, ಇನ್ಶೂರೆನ್ಸ್, ಬ್ಯಾಂಕ್‌ನಲ್ಲಿ ತೊಡಗಿಸುವುದು ಲಾಭದ ದೃಷ್ಟಿಯಿಂದ ಸೂಕ್ತ ಎನ್ನುವರು.

ಷೇರಿನಲ್ಲಿ ಹೂಡಿಕೆ ಮಾಡುವವರು ಉತ್ತಮ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಮಧ್ಯವರ್ತಿಗಳ ವಿಚಾರದಲ್ಲಿ ಎಚ್ಚರದಿಂದಿರಬೇಕು. ಹಿಂದೆ ಉಳಿತಾಯದ ಹಣವನ್ನು ಚಿನ್ನದ ಖರೀದಿಯಲ್ಲಿ ತೊಡಗಿಸುವ ಪರಿಪಾಠವಿತ್ತು. ಈಗ ವಿಭಿನ್ನ ಮಾರ್ಗಗಳಲ್ಲಿ ಸುರಕ್ಷಿತ ಉಳಿತಾಯ ಸಾಧ್ಯವಿದೆ. ಇದು ದೇಶದ ಆರ್ಥಿಕ ಸುಸ್ಥಿತಿಗೂ ಪೂರಕ.

ಬಂಗಾರದ ಮೇಲೆ ಹೂಡಿಕೆ

ಒಟ್ಟಾರೆ ಹೂಡಿಕೆಯಲ್ಲಿ ಚಿನ್ನದ ಮೇಲೆ ಶೇ.15ರಷ್ಟು ಹೂಡಿಕೆ ಮಾಡುವುದು ಸೂಕ್ತ. ಹಳದಿ ಲೋಹದ ಮೇಲೆ ಹೂಡಿಕೆ ಮಾಡಿದರೆ ಚಲಾವಣೆಯಾಗುವುದಿಲ್ಲ. ಇದು ದೇಶದ ಆರ್ಥಿಕತೆಗೂ ಪೂರಕವಲ್ಲ. ಹಣ ಚಲಾವಣೆಯಾದರೆ ಉದ್ಯೋಗ ಸೃಷ್ಟಿ, ಕೈಗಾರಿಕೆ, ವ್ಯಾಪಾರ-ವಹಿವಾಟು ಹೆಚ್ಚುತ್ತದೆ. ಚಿನ್ನ ಬಿಟ್ಟು ಉಳಿದ ಬೇರೆ ಬಗೆಯ ಹೂಡಿಕೆ ಕುರಿತು ಜನರಿಗೆ ಅರಿವಿಲ್ಲ. ಈ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಸದ್ಯ ರುಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಕಡಿಮೆ. ಆದ್ದರಿಂದ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಕಡಿಮೆಯಿರುವುದರಿಂದ ಚಿನ್ನದ ಮೇಲೆ ಅತಿ ಹೆಚ್ಚಿನ ಹೂಡಿಕೆ ಬೇಡ.
ಬಿ.ವಿ.ರುದ್ರಮೂರ್ತಿಸಿ.ಎ. ಹೂಡಿಕೆ ತಜ್ಞ

-ಶಶಿರೇಖಾ ಜಿ.ಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com