
ಮುಂಬೈ: ಡಿಜಿಟಲ್ ಇಂಡಿಯಾ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಬೆನ್ನಲ್ಲೆ ಟಾಟಾ ಟ್ರಸ್ಟ್‍ನ ಅಧ್ಯಕ್ಷರಾದ ರತನ್ ಟಾಟಾ ತಮ್ಮದೇ ರೀತಿಯಲ್ಲಿ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಕೈಗೊಂಡಿರುವ ಡಿಜಿಟಲ್ ಇಂಡಿಯಾ ಯೋಜನೆ ಯನ್ನು ಶ್ಲಾಘಿಸಿರುವ ಅವರು, ಗ್ರಾಮೀಣ ಪ್ರದೇಶದಲ್ಲಿ ಮಹಿಳೆ ಯರಿಗೆ ಇಂಟರ್‍ನೆಟ್ ಸೌಲಭ್ಯ ಕಲ್ಪಿಸಲು ಗೂಗಲ್ ಮತ್ತು ಇಂಟೆಲ್ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇಂಟರ್‍ನೆಟ್ ಮೂಲಕ ಗ್ರಾಮೀಣ ಜನರನ್ನು ಶಿಕ್ಷಿತರನ್ನಾಗಿ ಮಾಡಬಹುದು. ಇದು ಗ್ರಾಮೀಣ ಪ್ರದೇಶದ ಮಹಿಳೆಯರು ಉತ್ತಮ ಬದುಕು
ಕಂಡುಕೊಳ್ಳಲು ಸಹಕಾರಿಯಾಗಲಿದೆ. ಎಲ್ಲ ಪ್ರದೇಶಗಳಿಗೂ ವ್ಯವಹಾರವನ್ನು ವಿಸ್ತರಿಸಬಹುದು ಎಂದು ಹೇಳಿದ್ದಾರೆ. ಬಹಳ ಹಿಂದೆ ದೂರವಾಣಿ ಸಂಪರ್ಕ ಪಡೆಯಲು ಹತ್ತು ವರ್ಷ ಕಾಯಬೇಕಾಗಿತ್ತು ಎಂದು ತಾನು ವಿದ್ಯಾರ್ಥಿಯಾಗಿದ್ದಾಗಿನ ಪರಿಸ್ಥಿತಿಯನ್ನು ಸ್ಮರಿಸಿದ ಅವರು, ದೂರ ಸಂಪರ್ಕ ವ್ಯಾಪಕವಾದಂತೆ ಇಡೀ ಜನಸಮುದಾಯವನ್ನು ಸಬಲೀಕರಣ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರ ಪ್ರದೇಶದಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಇಂಟರ್‍ನೆಟ್ ಬಳಕೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ.10ರಷ್ಟು ಮಹಿಳೆಯರು ಮಾತ್ರ ಇಂಟರ್‍ನೆಟ್ ಬಳಕೆ ಮಾಡುತ್ತಿದ್ದಾರೆ ಎಂದು ಗೂಗಲ್ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
Advertisement