ಕುಸಿದ ಮೂಲಸೌಕರ್ಯ ಕ್ಷೇತ್ರ ಪ್ರಗತಿ

ಕಲ್ಲಿದ್ದಲು, ಉಕ್ಕು, ತೈಲ ಮತ್ತು ಅನಿಲ ಉತ್ಪಾದನೆ ಹಿನ್ನಡೆ ಕಂಡಿದ್ದರಿಂದ ಜೂನ್ ಮಾಹೆಯಲ್ಲಿ ದೇಶದ ಮೂಲಸೌಕರ್ಯ ವಲಯ ಶೇ.3ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಡಿದ್ದ ಶೇ.8.7ರಷ್ಟು ಪ್ರಗತಿಗೆ ಹೋಲಿಸಿದರೆ ಭಾರಿ ಹಿನ್ನಡೆ...
ಕುಸಿದ ಮೂಲಸೌಕರ್ಯ ಕ್ಷೇತ್ರ ಪ್ರಗತಿ (ಸಾಂದರ್ಭಿಕ ಚಿತ್ರ)
ಕುಸಿದ ಮೂಲಸೌಕರ್ಯ ಕ್ಷೇತ್ರ ಪ್ರಗತಿ (ಸಾಂದರ್ಭಿಕ ಚಿತ್ರ)

ನವದೆಹಲಿ: ಕಲ್ಲಿದ್ದಲು, ಉಕ್ಕು, ತೈಲ ಮತ್ತು ಅನಿಲ ಉತ್ಪಾದನೆ ಹಿನ್ನಡೆ ಕಂಡಿದ್ದರಿಂದ ಜೂನ್ ಮಾಹೆಯಲ್ಲಿ ದೇಶದ ಮೂಲಸೌಕರ್ಯ ವಲಯ ಶೇ.3ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಡಿದ್ದ ಶೇ.8.7ರಷ್ಟು ಪ್ರಗತಿಗೆ ಹೋಲಿಸಿದರೆ ಭಾರಿ ಹಿನ್ನಡೆ ಕಂಡಿದೆ.

ಪ್ರಸಕ್ತ ವರ್ಷ ಈ ಕ್ಷೇತ್ರದ ಪ್ರಗತಿ ನಿರಂತರವಾಗಿ ಇಳಿಮುಖ ಕಾಣುತ್ತಾ ಸಾಗಿದೆ. ಕಳೆದ ಮೇ ತಿಂಗಳಲ್ಲಿ ಶೇ.4.4ರಷ್ಟು ಪ್ರಗತಿ ದಾಖಲಿಸಿದ್ದು ಆರು ತಿಂಗಳ ಗರಿಷ್ಠ ದಾಖಲೆಯಾಗಿದೆ. ಜೂನ್ ತಿಂಗಳಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ಕ್ರಮವಾಗಿ ಶೇ.0.7 ಮತ್ತು ಶೇ.5.9ರಷ್ಟು ಕುಸಿದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ.

ಕಲ್ಲಿದ್ದಲು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕ್ಷೇತ್ರಗಳು ಕ್ರಮವಾಗಿ ಶೇ.6.3, ಶೇ.4.9, ಶೇ.2.6 ಮತ್ತು ಶೇ.0.2ರಷ್ಟು ಪ್ರಗತಿ ಕಂಡಿವೆ. ಕಳೆದ ವರ್ಷದ ಜೂನ್‍ನಲ್ಲಿ ಈ ಕ್ಷೇತ್ರಗಳು ಕ್ರಮವಾಗಿ ಶೇ.8.2, ಶೇ.12, ಶೇ.13.4 ಮತ್ತು ಶೇ.15.7ರಷ್ಟು ಪ್ರಗತಿ ದಾಖಲಿಸಿವೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ದಲ್ಲಿ ಈ ಮೂಲಸೌಕರ್ಯ ವಿಭಾಗದಲ್ಲಿ
ಬರುವ ಎಂಟು ಪ್ರಮುಖ ಕ್ಷೇತ್ರಗಳ ಒಟ್ಟಾರೆ ಮೌಲ್ಯ ಶೇ.38ರಷ್ಟಿದೆ. ಕಳೆದ ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಐಐಪಿ ಪ್ರಗತಿ ಶೇ.0.1 ಮತ್ತು ಶೇ.0.4ರಷ್ಟು ಕುಸಿತ ದಾಖಲಿಸಿದ್ದವು. ಆದರೂ ಮೇ ತಿಂಗಳಲ್ಲಿ ಸ್ವಲ್ಪ ಪ್ರಗತಿ ಕಂಡು ಶೇ. 4.4ರಷ್ಟು ಬೆಳವಣಿಗೆ ದಾಖಲಿಸಿದ್ದವು. ಪ್ರಸಕ್ತ ಹಣಕಾಸು ಸಾಲಿನ ಏಪ್ರಿಲ್-ಜೂನ್  ಅವಧಿಯಲ್ಲಿ ಈ ವಲಯಗಳು ಶೇ.2.4ರಷ್ಟು ಮಾತ್ರ
ಮುನ್ನಡೆ ಕಂಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ದಾಖಲಿಸಿದ್ದ ಶೇ.6ರಷ್ಟು ಪ್ರಗತಿಗೆ ಹೋಲಿಸಿದರೆ ಶೇ.3.6ರಷ್ಟು ಕುಸಿತ ಕಂಡಿದೆ.

2014-15ನೇ ಸಾಲಿನಲ್ಲಿ ಈ ಎಂಟು ಪ್ರಮುಖ ಕ್ಷೇತ್ರಗಳ ಒಟ್ಟಾರೆ ಬೆಳವಣಿಗೆ ಶೇ.3.5ರಷ್ಟಿತ್ತು. 2013-14ನೇ ಸಾಲಿನಲ್ಲಿ ಈ ಪ್ರಗತಿ ಶೇ.4.2ರಷ್ಟಿತ್ತು. ಜಾಗತಿಕ ಆರ್ಥಿಕತೆ ಪ್ರಗತಿ ಉತ್ತೇಜನಕಾರಿಯಾಗಿರದ ಸಂದರ್ಭದಲ್ಲೇ ಭಾರತ ಮತ್ತು ಚೀನಾಗಳ ಆರ್ಥಿಕ ಪ್ರಗತಿ ಹಿನ್ನಡೆ ಕಾಣುತ್ತಿದೆ. ಯುರೋಪ್, ಕೊಲ್ಲಿ ದೇಶಗಳು, ರಷ್ಯಾ ಮತ್ತಿತರ ದೇಶಗಳಲ್ಲೂ ಆರ್ಥಿಕತೆ ಹಿಂಜರಿತದ ಹಾದಿಯಲ್ಲಿವೆ. ಹೀಗಾಗಿ ಜಾಗತಿಕ ಆರ್ಥಿಕತೆ ವಿಷಯ ಪರಿಸ್ಥಿತಿಯಲ್ಲಿದೆ. ದೇಶದಲ್ಲಿ ಆರ್ಥಿಕತೆ ಚೇತರಿಕೆ ಕಾಣಲು ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸಬೇಕೆಂದು ಕೇಂದ್ರ ಸರ್ಕಾರ ಸೇರಿದಂತೆ ಉದ್ಯಮ ವಲಯ ಸತತವಾಗಿ ಒತ್ತಾಯಿಸುತ್ತಿವೆ. ಆಗಸ್ಟ್ 4ರಂದು ಆರ್‍ಬಿಐನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು ಉದ್ಯಮದ ನೋಟ ಅತ್ತ ನೆಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com