
ಲಂಡನ್: ತೀವ್ರ ನಷ್ಟದ ಹಿನ್ನಲೆಯಲ್ಲಿ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದ್ದ ಟಾಟಾ ಸ್ಟೀಲ್ ಸಂಸ್ಥೆಗೆ ಹೊಸ ತಲೆನೋವು ಶುರುವಾಗಿದ್ದು, ಬ್ರಿಟನ್ ಘಟಕದ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಖ್ಯಾತ ಆಂಗ್ಲ ಪತ್ರಿಕೆ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿರುವಂತೆ ಸಂಸ್ಥೆಯ ಬ್ರಿಟನ್ ಘಟಕದ ಕಚೇರಿ ಸಿಬ್ಬಂದಿ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ವರದಿ ಮಾಡಿದೆ. ಇನ್ನು ಸಂಸ್ಥೆಯೊಳಗಿನ ಈ ಮೋಸ ಪ್ರಕರಣ ಸಂಬಂಧ ಎಸ್ ಎಫ್ ಒ (ಸೀರಿಯಸ್ ಫ್ರಾಡ್ ಆಫೀಸ್) ತನಿಖೆ ನಡೆಸಿದ್ದು, ತನಿಖೆಯ ಅಂಶಗಳನ್ನು ಮಾಧ್ಯಮಗಳಿಗೆ ಬಹಿರಂಗಗೊಳಿಸಲು ಹಿಂದೇಟು ಹಾಕಿತ್ತಿದೆ. ಆದರೂ, ಅಕ್ರಮದ ನಡೆದಿಲ್ಲ ಎಂಬುದರ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಹಗರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡಲು ತಾನು ಸಿದ್ದವಿಲ್ಲ ಎಂದಷ್ಟೇ ಹೇಳಿದೆ.
ಇನ್ನು ಸಂಸ್ಥೆಯ ಈ ಹಗರಣದಿಂದಾಗಿ ಖ್ಯಾತ ಕಾರು ತಯಾರಿಕಾ ಸಂಸ್ಥೆಗಳಾದ ಬಿಎಇ ಮತ್ತು ರೋಲ್ಸ್ ರಾಯ್ ಸೇರಿದಂತೆ ಸಂಸ್ಥೆಯ ಸುಮಾರು 500ಕ್ಕೂ ಹೆಚ್ಚು ಗ್ರಾಹಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಮತ್ತೊಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಇದೇ ಕಾರಣಕ್ಕಾಗಿ ಟಾಟಾ ಸಂಸ್ಥೆ ತನ್ನ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದೆ ಎಂದೂ ಪತ್ರಿಕೆ ವರದಿ ಮಾಡಿದೆ.
ಒಟ್ಟಾರೆ ಭಾರತ ದೇಶದ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸಂಸ್ಥೆ ಅಕ್ರಮದ ಆರೋಪದಲ್ಲಿ ಸಿಲುಕಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.
Advertisement