ನೀರಿಗಿಂತ ಅಗ್ಗವಾಗಿದೆ ತೈಲ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಸತತವಾಗಿ ಕುಸಿಯುತ್ತಿರುವುದರಿಂದ ಮತ್ತು ದೇಶದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಸತತವಾಗಿ ಕುಸಿಯುತ್ತಿರುವುದರಿಂದ ಮತ್ತು ದೇಶದ ವಿದೇಶಿ ವಿನಿಮಯ ಮಾರುಕಟ್ಟೆ ಸುಸ್ಥಿರವಾಗಿರುವುದರಿಂದ ದೇಶದಲ್ಲಿ ಕಚ್ಚಾ ತೈಲ ದರ ಒಂದು ಬಾಟಲ್ ಮಿನರಲ್ ವಾಟರ್ ದರಕ್ಕಿಂತಲೂ ಕಡಿಮೆಯಾಗಿದೆ. 
ಹಾಗಿದ್ದರೂ ಕೇಂದ್ರ ಸರ್ಕಾರ ಜಾಗತಿಕ ಮಾರುಕಟ್ಟೆಯಲ್ಲಿ ದರಗಳು ಕುಸಿಯುತ್ತಿರುವ ಪ್ರಮಾಣಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಸುತ್ತಿಲ್ಲ. ಬದಲಿಗೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಮೇಲಿಂದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸುತ್ತಿದೆ. ಈ ತಿಂಗಳ ಮೊದಲಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮತ್ತೆ ಅಬಕಾರಿ ಸುಂಕವನ್ನು ಹೆಚ್ಚಿಸಲಾಯಿತು. 
ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೆ ಬಾರಿಗೆ ಹೆಚ್ಚಿಸಿದ್ದಾಗಿದೆ. ಕಳೆದ ವಾರದಲ್ಲಿ ಭಾರತ ಖರೀದಿಸುವ ಕಚ್ಚಾ ತೈಲ ಪ್ರತಿ ಬ್ಯಾರಲ್ ದರ 29.24 ಡಾಲರ್‍ಗೆ ಇಳಿಯಿತು. ಒಂದು ಬ್ಯಾರಲ್‍ನಲ್ಲಿ 159 ಲೀಟರ್ ತೈಲ ಇರಲಿದೆ. ಜನವರಿ 7ರಂದು ಪ್ರತಿ ಡಾಲರ್‍ಗೆ ರು.66.91 ಇತ್ತು. ಇದರಂತೆ ಪ್ರತಿ ಬ್ಯಾರಲ್ ದರ ರು.1,956.45 ಆಗಲಿ ದೆ. ಇದರ ಪ್ರಕಾರ ಒಂದು ಲೀಟರ್ ತೈಲ ದರ ರು.12 ಆಗಲಿದೆ. ಒಂದು ಲೀಟರ್ ಮಿನರಲ್ ನೀರಿನ ಬೆಲೆ ರು.15 ಎಂದಿಟ್ಟುಕೊಂಡರೂ ತೈಲ ದರ ಶೇ.20 ರಷ್ಟು ಅಗ್ಗ. 
2014ರ ಮಧ್ಯಾವಧಿಯಲ್ಲಿದ್ದ ದರಕ್ಕೆ ಹೋಲಿಸಿದರೆ ಕಚ್ಚಾ ತೈಲ ದರ ಶೇ.70 ರಷ್ಟು ಕುಸಿದಿದೆ. ಆದರೆ ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಇಳಿಸಿರುವ ಪ್ರಮಾಣ ಶೇ.20ರಷ್ಟು ಮಾತ್ರ. ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಮೂಲ ಅಬಕಾರಿ ಸುಂಕ ಸದ್ಯ ರು.7.73 ಇದ್ದರೆ ಡೀಸೆಲ್‍ಗೆ ರು.7.83 ಇದೆ. ನವೆಂಬರ್ 2014 ಮತ್ತು ಜನವರಿ 2015ರ ನಡುವಿನ ಮೂರು ತಿಂಗಳ ಅವಧಿಯಲ್ಲಿ ಅಬಕಾರಿ ಸುಂಕವನ್ನು ನಾಲ್ಕು ಬಾರಿ ಹೆಚ್ಚಿಸಿದೆ. 
ಈ ಕಾರಣದಿಂದಾಗಿ ರಿಟೇಲ್ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತಗೊಳಿಸಲಿಲ್ಲ. ಸರ್ಕಾರ ಹೀಗೆ ಅಬಕಾರಿ ಸುಂಕವನ್ನು ಪದೇ ಪದೇ ಹೆಚ್ಚಿಸದಿದ್ದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ನ್ನು ಕ್ರಮವಾಗಿ ರು.10.02 ಮತ್ತು ರು.9.97ಕ್ಕೆ ಮಾರಾಟ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. 
ಆದರೆ ದೇಶೀಯ ಮಾರುಕಟ್ಟೆಯಲ್ಲಿ ಸದ್ಯ ಪೆಟ್ರೋಲ್ ದರ ಸರಿಸುಮಾರು ರು.60 ಇದ್ದರೆ, ಡೀಸೆಲ್ ದರ ರು.45ರ ಆಸುಪಾಸಿನಲ್ಲಿದೆ. ಪ್ರತಿ ಬ್ಯಾರಲ್ ದರ 20 ಡಾಲರ್‍ಗೆ ಕುಸಿಯುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಜಾಗತಿಕ ವಿಶ್ಲೇಷಣಾ ಸಂಸ್ಥೆ ಗೋಲ್ಡನ್ ಸ್ಯಾಚ್ಸ್ ಹೇಳಿದೆ. ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತ ಕಂಡಿರುವುದರಿಂದ ತಯಾರಿಕಾ ವಲಯ ಕುಸಿದಿದೆ. ಇದರಿಂದ ಕಚ್ಚಾ ತೈಲ ಬೇಡಿಕೆ ಕಳೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com