ಸಮಾಧಾನ ತಂದ ಚೇತರಿಕೆ

ಕಳೆದ ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಚ್ಚರಿಯಂತೆ ಏರಿಕೆ ಕಂಡಿದೆ...
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ (ಸಂಗ್ರಹ ಚಿತ್ರ)

ಮುಂಬೈ: ಕಳೆದ ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಚ್ಚರಿಯಂತೆ ಏರಿಕೆ ಕಂಡಿದೆ.

ಯೂರೋಪಿಯನ್ ಒಕ್ಕೂಟ ಹೊಸ ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡಲಿದೆ ಎಂಬ ವರದಿಗಳು ಮತ್ತು ಕಚ್ಚಾ ತೈಲ ದರಗಳು ತುಸು ಏರಿಕೆಯಾಗಿರುವುದರಿಂದ ಹೂಡಿಕೆದಾರರು ವಹಿವಾಟಿನಲ್ಲಿ ತೊಡಗಿದ್ದರು. ಇದರಿಂದ ಸೆನ್ಸೆಕ್ಸ್ 473.45 ಅಂಕಗಳಷ್ಟು ಏರಿಕೆ ಕಂಡು 24, 435.66 ಅಂಶಗಳಿಗೆ ಏರಿಕೆಯಾಯಿತು. ಕಳೆದ ಅಕ್ಬೋಬರ್ 5ರ ನಂತರಇದು ಗರಿಷ್ಠ ಏಕದಿನ ಗಳಿಕೆಯಾಗಿದೆ.

24, 122.06 ಅಂಶಗಳೊಂದಿಗೆ ವಹಿವಾಟು ಆರಂಭಿಸಿದ ಸೂಚ್ಯಂಕ ದಿನಪೂರ್ತಿ ಏರುಮುಖದಲ್ಲಿತ್ತು. ಒಂದು ಹಂತದಲ್ಲಿ ದಿನದ ಗರಿಷ್ಠ 24, 472.88ರವರೆಗೂ ತಲುಪಿತ್ತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 145.65 ಅಂಕಗಳ ಏರಿಕೆಯೊಂದಿಗೆ 7, 422.45ಕ್ಕೆ ವಹಿವಾಟು ಮುಗಿಸಿತು. ವಿದೇಶಿ ವಿನಿಮಯ ಮಾರುಕಟ್ಟೆ ವಹಿವಾಟಿನಲ್ಲಿ ರುಪಾಯಿ ಮೌಲ್ಯ 36 ಪೈಸೆಯಷ್ಟು ಏರಿಕೆಯೊಂದಿಗೆ 67.66ಕ್ಕೆ ತಲುಪಿತು. ಅಂದರೆ 29 ತಿಂಗಳ ಕನಿಷ್ಠದಿಂದ ಮೇಲೇರಿತು. ಈ ಬೆಳವಣಿಗೆಗಳು ಹೂಡಿಕೆದಾರರಲ್ಲಿ ಭಾರಿ ವಿಶ್ವಾಸ ತುಂಬಿದವು.

ಹಾಗಿದ್ದರೂ ವಾರದ ಲೆಕ್ಕಾಚಾರದಲ್ಲಿ ಸೆನ್ಸೆಕ್ಸ್ 19.38 ಅಂಕ ನಷ್ಟದೊಂದಿಗೆ ಕೊನೆಗೊಂಡಿತು. ಇದು ಸತತ ಮೂರು ವಾರಗಳಿಂದ ನಷ್ಟದೊಂದಿಗೆ ವಾರಾಂತ್ಯ ಕಂಡಂತಾಯಿತು. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ) ಅಲ್ಲಿನ ಅರ್ಥಿಕತೆಗೆ ಉತ್ತೇಜನ ನೀಡಲು ಇನ್ನಷ್ಟು ಹಣವನ್ನು ಮಾರುಕಟ್ಟೆಗೆ ಪೂರೈಸಲಿದೆ ಎಂಬ ಸೂಚನೆಗಳು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲ ದರ 30 ಡಾಲರ್ ಗೆ ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಉತ್ಸಾಹ ತುಂಬಿತು. ಜಾಗತಿಕ ಮಾರುಕಟ್ಟೆ ಬ್ರೆಂಟ್  ಕಚ್ಚಾ ತೈಲ ದರ ಶೇ.5.2ರಷ್ಟು ಏರಿಕೆ ಕಂಡು 30.77 ಡಾಲರ್ ಗೆ ತಲುಪಿತು. ವಹಿವಾಟು ಏರಿಕೆಯೊಂದಿಗೇ ಆರಂಭಕಂಡಿತು. ಇಡೀ ದಿನ ಏರುಮುಖದಲ್ಲೇ ಇತ್ತು. ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ 517.63 ಅಂಕ ನಷ್ಟ ದಾಖಲಿಸಿತ್ತು.

ಇಂದಿನ ವಹಿವಾಟಿನಲ್ಲಿ ಮಿಡ್‌ ಕ್ಯಾಪ್‌ ಶೇರುಗಳು ಶೇ.1.9ರಷ್ಟು ಏರುವ ಮೂಲಕ ಅಚ್ಚರಿ ಉಂಟುಮಾಡಿದವು. ಇದನ್ನು ಮೀರಿಸುವಂತೆ ಸ್ಮಾಲ್‌ ಕ್ಯಾಪ್‌ ಶೇರುಗಳು ಶೇ.2.25 ರಷ್ಟು ಮುನ್ನಡೆ ಸಾಧಿಸಿದವು. ಗೇಲ್‌, ಹಿಂಡಾಲ್ಕೋ, ಮಾರುತಿ ಸುಜುಕಿ, ಟಾಟಾ ಸ್ಟೀಲ್‌, ಹೀರೋ ಮೋಟೋಕಾರ್ಪ್‌ ಮತ್ತು ಮಹೀಂದ್ರ ಶೇರುಗಳು ಶೇ.5ರಿಂದ 8ರಷ್ಟು ಏರಿ ಟಾಪ್‌ ಗೇನರ್‌ ಎನಿಸಿಕೊಂಡವು. ಆದರೆ ಭಾರ್ತಿ ಏರ್‌ಟೆಲ್‌ ಮತ್ತು ಐಡಿಯಾ ಸೆಲ್ಯುಲರ್‌ ಶೇರುಗಳು ಅನುಕ್ರಮವಾಗಿ ಶೇ.3.36 ಮತ್ತು 6.23ರಷ್ಟು ಕುಸಿದವು. ಈ ಹಿಂದೆ ಅಮೆರಿಕನ್‌ ಶೇರು ಮಾರುಕಟ್ಟೆ ಏರುಗತಿಯನ್ನು ಕಂಡಿದ್ದು ಅದನ್ನು ಅನುಸರಿಸಿ ಇಂದು ಏಷ್ಯನ್‌ ಶೇರು ಮಾರುಕಟ್ಟೆಗಳು ಕೂಡ ಅದೇ ಹಾದಿ ಹಿಡಿದು ಮುನ್ನಡೆ ಕಂಡವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com