
ಮುಂಬೈ: ಶುಕ್ರವಾರ ಷೇರು ಮಾರುಕಟ್ಟೆ ವಹಿವಾಟು ಆರಂಭಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 87 ಪೈಸೆ ಕುಸಿದು ಡಾಲರ್ ವೊಂದಕ್ಕೆ ರುಪಾಯಿ ಬೆಲೆ 68 ರೂಪಾಯಿ ಪೈಸೆಯಷ್ಟಾಗಿದೆ.
ಬ್ರೆಕ್ಸಿಟ್ ಜನಮತದಲ್ಲಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಸೂಚನೆ ಸಿಕ್ಕಿದ್ದರಿಂದ ಎಲ್ಲಾ ಕರೆನ್ಸಿಗಳೆದುರು ಡಾಲರ್ ಮೌಲ್ಯ ಗಗನಕ್ಕೇರಿದೆ. ಇಂಗ್ಲೆಂಡ್ ಪೌಂಡ್ ಕಳೆದ 31 ವರ್ಷಗಳಲ್ಲಿ ಅತ್ಯಂತ ಕುಸಿತ ಕಂಡುಬಂದಿದೆ.
ಮುಂಬೈ ಷೇರು ಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ 1034 ಅಂಕ ಕುಸಿದು 25 ಸಾವಿರದ 968ರಲ್ಲಿ ಇಂದು ಬೆಳಗ್ಗೆ 10.30ರ ಹೊತ್ತಿಗೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 328 ಅಂಕ ಕುಸಿದು 7 ಸಾವಿರದ 942ರಲ್ಲಿ ವಹಿವಾಟು ನಡೆಸುತ್ತಿತ್ತು.
ಮಾರುಕಟ್ಟೆಯ ಭಾರೀ ಏರಿಳಿತದ ಚಂಚಲತೆಯನ್ನು ನಿವಾರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ನ್ನು 67.95 ಪೈಸೆಗೆ ಮಾರಾಟ ಮಾಡಿದೆ. 2013ರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 68.85ಕ್ಕೆ ಕುಸಿದಿತ್ತು.
ಟಿವಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ ಹಣಕಾಸು ಕಾರ್ಯದರ್ಶಿ ಜಯಂತ್ ಸಿನ್ಹಾ, ಇಂದಿನ ಅಪಾಯಕಾರಿ ಪರಿಸ್ಥಿತಿಯಲ್ಲಿ ವಿಶ್ವಾದ್ಯಂತ ಕರನ್ಸಿಯಲ್ಲಿ ಹೊಂದಾಣಿಕೆ ಇದ್ದರೂ ಕೂಡ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಸ್ಥಿರತೆಗೆ ಭಾರತ ಸ್ವರ್ಗವೆನಿಸಿದೆ ಎಂದರು. ಹೂಡಿಕೆದಾರರು ಪ್ರಸ್ತುತ ಉತ್ತಮ ಮೊತ್ತ ಸಿಗುತ್ತಿರುವ ಚಿನ್ನದಲ್ಲಿ ಬಂಡವಾಳ ಹೂಡಲು ಚಿಂತಿಸುತ್ತಿದ್ದಾರೆ.
Advertisement