ವಿಶಾಲ್ ಸಿಕ್ಕಾ ರಾಜಿನಾಮೆಗೆ ನಾರಾಯಣ ಮೂರ್ತಿ ಕಾರಣ!: ಇನ್ಫೋಸಿಸ್ ಆಡಳಿತ ಮಂಡಳಿ ಅಸಮಾಧಾನ

ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕ ರಾಜಿನಾಮೆಗೆ ಸಂಸ್ಥೆಯ ನಿರ್ಮಾತೃ ನಾರಾಯಣ ಮೂರ್ತಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕ ರಾಜಿನಾಮೆಗೆ ಸಂಸ್ಥೆಯ ನಿರ್ಮಾತೃ ನಾರಾಯಣ ಮೂರ್ತಿ ಅವರೇ ಕಾರಣ ಎಂದು ಹೇಳಲಾಗುತ್ತಿದೆ.

ಸ್ವತಃ ಸಂಸ್ಥೆಯ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿರುವಂತೆ ಸಿಕ್ಕಾ ರಾಜಿನಾಮೆಗೆ ಅವರ ಮೇಲಿನ ವೈಯುಕ್ತಿಕ ದಾಳಿಗಳೇ ಕಾರಣ ಎಂದು ಹೇಳಲಾಗಿದೆ. ಸಿಕ್ಕಾ ರಾಜಿನಾಮೆ ಬಳಿಕ ಸಂಸ್ಥೆಯ ಆಡಳಿತ ಮಂಡಳಿ ಬಹಿರಂಗ  ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಪರೋಕ್ಷವಾಗಿ ನಾರಾಯಣ ಮೂರ್ತಿಯನ್ನು ಗುರಿಯಾಗಿಸಿಕೊಂಡು ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ತನ್ನ ಪತ್ರದಲ್ಲಿ ವಿಶಾಲ್ ಸಿಕ್ಕ ಬೆನ್ನಿಗೆ ನಿಂತಿರುವ ಆಡಳಿತ ಮಂಡಳಿ, ಸಿಕ್ಕಾ ಆಡಳಿತದಲ್ಲಿ ಇನ್ಫೋಸಿಸ್ ಲಾಭದಾಯಕ ಆದಾಯದ ಬೆಳವಣಿಗೆಯನ್ನು ಕಂಡಿದೆ. ಸಿಕ್ಕಾ ಅವರ ರಾಜೀನಾಮೆಗೆ ಖೇದವಿದ್ದು, ಸಂಸ್ಥೆಯ ಆಡಳಿತ  ಮಂಡಳಿಯ ಸದಸ್ಯರ ಮೇಲೆ ಇತ್ತೀಚಿಗಿನ ತಿಂಗಳುಗಳಲ್ಲಿ ಅನಾಮಿಕ ಪತ್ರಗಳ ಮೂಲಕ ನಡೆಯುತ್ತಿರುವ ವೈಯಕ್ತಿಕ ದಾಳಿಗಳಿಂದಾಗಿ ಮಂಡಳಿಯೂ ತೀವ್ರ ತಳಮಳ ಎದುರಿಸುತ್ತಿದೆ. ಅಂತೆಯೇ ಅನಾಮಿಕ ಪತ್ರಗಳಲ್ಲಿ  ಉಲ್ಲೇಖಿಸಲ್ಪಟ್ಟ ಆರೋಪಗಳು ಆಧಾರ ರಹಿತ ಎಂದು ಮಂಡಳಿ ಈಗಾಗಲೇ ಹೇಳಿದೆಯಲ್ಲದೆ, ಈ ಆರೋಪಗಳ ವಿಚಾರವನ್ನೇ ವೈಭವೀಕರಿಸಿ ಉದ್ಯೋಗಿಗಳ ಆತ್ಮಸ್ಥೈರ್ಯ ಕೆಡಿಸುವ ಯತ್ನಗಳಿಂದಾಗಿ ಕಂಪೆನಿ ತನ್ನ  ಅತ್ಯಮೂಲ್ಯ ಸಿಇಒ ಅವರನ್ನು ಕಳೆದುಕೊಳ್ಳುವಂತಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.

ಮೂಲಗಳ ಪ್ರಕಾರ ಈ ಅನಾಮಿಕ ಪತ್ರಗಳು ಸಂಸ್ಥೆಯ ನಿರ್ಮಾತೃ ನಾರಾಯಣ ಮೂರ್ತಿ ಅವರೇ ಬರೆದಿದ್ದು ಎಂದು ಹೇಳಲಾಗಿದೆ. ಆದರೆ ತನ್ನ ಪತ್ರದಲ್ಲಿ ಎಲ್ಲೂ ನಾರಾಯಣಮೂರ್ತಿ ಹೆಸರು ಉಲ್ಲೇಖಿಸದ ಆಡಳಿತ ಮಂಡಳಿ  ಪರೋಕ್ಷವಾಗಿ ನಾರಾಯಣಮೂರ್ತಿ ಅವರ ವಿರುದ್ಧ ಕಿಡಿಕಾರಿದೆ. ನಾರಾಯಣ ಮೂರ್ತಿ ಅವರು ಮಾಧ್ಯಮಗಳಿಗೆ ಬರೆದಿರುವ ಪತ್ರದಿಂದಾಗಿ ಸಂಸ್ಥೆಯ ಆಡಳಿತ ಸಮಗ್ರತೆಗೆ ಕುಂದು ತಂದಿದ್ದು, ಸಂಸ್ಥೆಯಲ್ಲಿನ ಸಾಂಸ್ಥಿಕ ಆಡಳಿತದ  ಮಾನದಂಡ ಕುಸಿಯುವಂತೆ ಮಾಡಿದೆ ಎಂದು ಹೇಳಿದೆ.

ಇದೇ ವೇಳೆ ತನ್ನ ಷೇರುದಾರರು, ಸಿಬ್ಬಂದಿಗಳು ಹಾಗೂ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿರುವ ಇನ್ಫೋಸಿಸ್ ಆಡಳಿತ ಮಂಡಳಿ, ಇಂತಹ ದಾರಿ ತಪ್ಪಿಸುವ ಪ್ರಚಾರಗಳಿಂದಾಗಿ ಸಂಸ್ಥೆಯ ಆಡಳಿತ ಮಂಡಳಿಯ   ಕಾರ್ಯವೈಖರಿಯಲ್ಲಿ ಯಾವುದೇ ಸಮಸ್ಯೆಗಳಾಗುವುದಿಲ್ಲ. ಈ ಹಿಂದಿನಂತೆಯೇ ಮುಂದೆಯೂ ಇನ್ಫೋಸಿಸ್ ನ ಸಾಂಸ್ಥಿಕ ಆಡಳಿತ ಅತ್ಯುನ್ನತ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಅನುಸರಿಸಿಕೊಂಡು ಹೋಗುವುದನ್ನು  ಮುಂದುವರೆಸಲಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com