
ಮುಂಬೈ: ಉಳಿತಾಯ ಠೇವಣಿ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡಲೇಬೇಕು ಎಂಬ ನಿಯಮ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ, ಇದರಿಂದಲೇ ಬರೋಬ್ಬರಿ 235 ಕೋಟಿ ರೂ, ಹಣ ಲಾಭ ಬಂದಿದೆ ಎಂದು ಹೇಳಲಾಗುತ್ತಿದೆ.
ಆರ್ ಐಟಿ ಮೂಲಕ ಪಡೆದ ಮಾಹಿತಿಯಲ್ಲಿ ಅಂಶ ಬಯಲಿಗೆ ಬಂದಿದ್ದು, ಭಾರತದ ಪ್ರಮುಖ ಬ್ಯಾಂಕಿಂಗ್ ಸೇವಾ ಸಂಸ್ಥೆ ಎಸ್ ಬಿಐನ ಮೊದಲ ತ್ತೈಮಾಸಿಕ ವರದಿಯಲ್ಲಿ ದಂಡದ ರೂಪದಲ್ಲೇ ಸುಮಾರು 235.06 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಜೂನ್ ತಿಂಗಳಲ್ಲಿ ಪ್ರಕಟವಾದ ಬ್ಯಾಂಕ್ ನ ತ್ರೈಮಾಸಿಕ ವರದಿಯಲ್ಲಿ ಎಸ್ ಬಿಐ ಗ್ರಾಹಕರಿಂದ ಒಟ್ಟು 388.74 ಲಕ್ಷ ಖಾತೆದಾರರಿಂದ ಕನಿಷ್ಠ ಠೇವಣೆ ಇಡದ ಕಾರಣ 235.06 ಕೋಟಿ ರೂ.ಗಳನ್ನು ದಂಡವಾಗಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.
ಈ ಅಕೌಂಟ್ ಮಾಲೀಕರು ಬ್ಯಾಂಕಿನ ನಿಯಮದಂತೆ ಪ್ರತಿ ತಿಂಗಳು ಕಡ್ಡಾಯವಾಗಿ ಇಂತಿಷ್ಟು ಕನಿಷ್ಠ ಠೇವಣಿ ರೂಪದಲ್ಲಿ ಹಣ ಇಟ್ಟಿರಲೇಬೇಕು ಎಂಬ ನಿಯಮವನ್ನು ಪಾಲಿಸಿಲ್ಲ. ಹೀಗಾಗಿ ಇವರೆಲ್ಲರ ಅಕೌಂಟ್ ಗಳಿಂದ ದಂಡದ ರೂಪದಲ್ಲಿ ಹಣಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಲಾಗಿದೆ.
ನೀಮುಚ್ ಮೂಲದ ಆರ್ ಟಿಐ ಕಾರ್ಯಕರ್ತ ಚಂದ್ರಶೇಖರ ಗೌಡ್ ಅವರು ಈ ಬಗ್ಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಗೆ ಮುಂಬೈ ಮೂಲದ ಬ್ಯಾಂಕಿನ ಕಾರ್ಯಾಚರಣೆ ಇಲಾಖೆಯ ಉಪ ಜನರಲ್ ಮ್ಯಾನೇಜರ್ ಶ್ರೇಣಿಯ ಅಧಿಕಾರಿ ಈ ಬಗ್ಗೆ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.
ಎಸ್ ಬಿಐ ನ ನಿಯಮಾವಳಿಗಳಂತೆ ಮಹಾನಗರಗಳಲ್ಲಿನ ಖಾತೆದಾರರು ಕನಿಷ್ಠ 5,000 ರೂ ಹಣವನ್ನು ಕನಿಷ್ಠ ಠೇವಣಿ ರೂಪದಲ್ಲಿ ಅಕೌಂಟ್ ನಲ್ಲಿ ಇಟ್ಟಿರಲೇಬೇಕು. ಇದರಲ್ಲಿ ನೀವು 10 ರೂ. ತೆಗೆದರೂ ದಂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ಒಂದು ರೂ. ಅನ್ನೂ ಇಡದೇ ಇದ್ದರೆ 100 ರೂ. ದಂಡ ತೆರಲೇ ಬೇಕು. ಹಾಗೆಯೇ ನಗರ ಪ್ರದೇಶಗಳಲ್ಲಿ ಕನಿಷ್ಠವೆಂದರೂ 3,000 ರೂ. ಇರಿಸಿರಲೇಬೇಕು. ಪೂರ್ಣವಾಗಿ ತೆಗೆದರೆ 80 ರೂ. ದಂಡ ಪಾವತಿಸಬೇಕು. ಪಟ್ಟಣ ಅಥವಾ ಸಣ್ಣ ನಗರಗಳನ ಖಾತೆದಾರರು 2,000 ರೂ. ಕನಿಷ್ಠ ಠೇವಣಿ ಇಟ್ಟಿದ್ದರೆ ದಂಡ 75 ರೂ. ತೆರಬೇಕು. ಗ್ರಾಮೀಣ ಭಾಗದಲ್ಲಿ ಕನಿಷ್ಠ ಠೇವಣಿ ರೂಪದಲ್ಲಿ 1,000 ರೂ. ಇಟ್ಟಿರಲೇ ಬೇಕು. ಅಕೌಂಟ್ ಖಾಲಿ ಮಾಡಿದರೆ 50 ರೂ. ದಂಡ ಕಟ್ಟಬೇಕು. ಈ ಎಲ್ಲಾ ದಂಡ ತಿಂಗಳಿಗೊಮ್ಮೆ ಹಾಕಲಾಗುತ್ತದೆ.
Advertisement