ಅಂಬಾನಿ ಸಹೋದರರು
ಅಂಬಾನಿ ಸಹೋದರರು

23 ಸಾವಿರ ಕೋಟಿ ರು.ಗೆ ಆರ್ ಕಾಂ ಖರೀದಿಸಿದ ಜಿಯೋ ಇನ್ಫೋಕಾಮ್

ಭಾರತದ ಉದ್ಯಮ ಕ್ಷೇತ್ರದ ದೈತ್ಯ ಸಹೋದರರಾದ ಅನಿಲ್ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಪರಸ್ಪರ ಒಂದಾಗಿದ್ದು, ತಮ್ಮ ತಂದೆಯ ಜನ್ಮದಿನದಂದು ಮುಖೇಶ್ ತಮ್ಮ ಅನಿಲ್ ಅಂಬಾನಿ ಒಡೆತನದ ಆರ್ ಕಾಂ ಅನ್ನು ಖರೀದಿ ಮಾಡಿದ್ದಾರೆ.
Published on
ಮುಂಬೈ: ಭಾರತದ ಉದ್ಯಮ ಕ್ಷೇತ್ರದ ದೈತ್ಯ ಸಹೋದರರಾದ ಅನಿಲ್ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಪರಸ್ಪರ ಒಂದಾಗಿದ್ದು, ತಮ್ಮ ತಂದೆಯ ಜನ್ಮದಿನದಂದು ಮುಖೇಶ್ ತಮ್ಮ ಅನಿಲ್ ಅಂಬಾನಿ ಒಡೆತನದ ಆರ್  ಕಾಂ ಅನ್ನು ಖರೀದಿ ಮಾಡಿದ್ದಾರೆ.
ಆ ಮೂಲಕ ಆರ್ ಕಾಂ ಸಂಸ್ಥೆಯ ನಷ್ಟದ ಸಂಕಷ್ಟದಿಂದ ಉಂಟಾಗಿದ್ದ ಸಾಲದ ಸುಳಿಯಿಂದ ಅನಿಲ್ ಅಂಬಾನಿ ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಮೂಲಗಳ ಪ್ರಕಾರ ಸಾಲದ ಸುಳಿಗೆ ಸಿಲುಕಿರುವ ಅನಿಲ್ ಅಂಬಾನಿ ರಿಲಯನ್ಸ್  ಕಮ್ಯೂನಿಕೇಶನ್ಸ್(ಆರ್‌ಕಾಂ) ಸ್ಪೆಕ್ಟ್ರಂ ಟವರ್, ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಮತ್ತು ಇತರೆ ವೈರ್‌ಲೆಸ್‌ ಸಂಪತ್ತನ್ನು ಖರೀದಿಸಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 
ಈ ಬಗ್ಗೆ ಸ್ವತಃ ಅನಿಲ್ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯ ಜಿಯೋ ಇನ್ಫೋಕಾಂ ಲಿಮಿಟೆಡ್‍ ಗೆ ತನ್ನ ಆಸ್ತಿಯನ್ನು  ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಂತೆಯೇ ನವೆಂಬರ್ ಮೊದಲ ವಾರದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆಯನ್ನು ಡಿಸೆಂಬರ್ 1ರಿಂದ ಸ್ಥಗಿತಗೊಳಿಸಲಿದ್ದೇವೆ ಎಂದು ಹೇಳಿತ್ತು. ಅಲ್ಲದೆ ಇನ್ನು  ಮುಂದೆ ಕೇವಲ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು. 4ಜಿ ಸೇವೆ ಬಳಸುತ್ತಿರುವ ಗ್ರಾಹಕರು ರಿಲಯನ್ಸ್ ಸೇವೆಯನ್ನು ಮುಂದುವರಿಸಬಹುದು. 2ಜಿ ಸೇವೆಯನ್ನು ಇನ್ನು ಮುಂದೆ ನೀಡಲು ಸಾಧ್ಯವಿಲ್ಲ. 2ಜಿ ಸೇವೆ ಬೇಕಿದ್ದಲ್ಲಿ  ಬೇರೆ ಟೆಲಿಕಾಂ ಕಂಪೆನಿಗೆ ಹೋಗಬಹುದು ಎಂದು ಆರ್ ಕಾಂ ತಿಳಿಸಿತ್ತು.
ಪ್ರಸ್ತುತ ಆರ್ ಕಾಂ ಸಂಸ್ಥೆಯನ್ನು ಮಾರಾಟ ಮಾಡಿರುವ ಅನಿಲ್ ಅಂಬಾನಿ ಅವರು ಎಷ್ಟು ಕೋಟಿ ರು.ಗಳಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿಲ್ಲವಾದರೂ ಉದ್ಯಮ ಲೋಕದ ದಿಗ್ಗಜರು ಹಂಚಿಕೊಂಡಿರುವಂತೆ  ಸುಮಾರು 23ರಿಂದ 24 ಸಾವಿರ ಕೋಟಿ ರು.ಗಳಿಗೆ ಆರ್ ಕಾಂ ಸಂಸ್ಥೆಯನ್ನು ಮುಖೇಶ್ ಒಡೆತನದ ಜಿಯೋ ಇನ್ಫೋಕಾಂ ಸಂಸ್ಥೆ ಖರೀದಿ ಮಾಡಿದೆ ಎನ್ನಲಾಗಿದೆ. ಅಂತೆಯೇ ಈ ಒಪ್ಪಂದ 2018ರ ಮಾರ್ಚ್ ಒಳಗೆ  ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಒಪ್ಪಂದದ ಅನ್ವಯ ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ ಸಂಪತ್ತು ಮಾರಾಟ ಮಾಡಿ ಬ್ಯಾಂಕ್‌ ಗಳಿಗೆ 45,000 ಕೋಟಿ ಸಾಲ ಮರುಪಾವತಿಸಲಾಗುವುದು. ಆರ್ಥಿಕ ಪುನಶ್ಚೇತನ  ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಇನ್ನು ಬದಲಾದ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಸ್ಪರ್ಧೆ ಒಡ್ಡಲಾಗದೇ ಅನಿಲ್ ಒಡೆತನದ ಆರ್ ಕಾಂ ಸಂಸ್ಥೆ ಸುಮಾರು 45 ಸಾವಿರ ಕೋಟಿ ರು. ಸಾಲದ ಸುಳಿಗೆ ಸಿಲುಕಿತ್ತು. ಈ ಪೈಕಿ ಆರ್‌ಕಾಂಗೆ ಸೇರಿದ ಸಂಪತ್ತು ಮಾರಾಟ  ಮಾಡಿ ಬ್ಯಾಂಕ್‍ ಗಳ 40 ಸಾವಿರ ಕೋಟಿ ರು. ಸಾಲವನ್ನು ಪಾವತಿ ಮಾಡಲಾಗುವುದು ಎಂದು ಅನಿಲ್ ಅಂಬಾನಿ ಮೊನ್ನೆ ತಿಳಿಸಿದ್ದರು. ಇದಕ್ಕೆ ಪೂರಕ ಎಂಬಂತೆ ಆರ್‌ಕಾಂ ಗೆ ಸೇರಿದ ಸಂಪತ್ತು ಖರೀದಿಯಿಂದ ತನ್ನ ಮನೆ  ಮನೆಗಳಿಗೆ ಫೈಬರ್, ವೈಯರ್‍ಲೆಸ್ ಸೇವೆ ಮತ್ತು ಉದ್ಯಮ ಸೇವೆ ವಿಸ್ತರಿಸಲು ಸಹಾಯವಾಗಲಿದೆ ಎಂದು ಜಿಯೋ ತಿಳಿಸಿದೆ. ಇನ್ನು ರಿಲಯನ್ಸ್ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಈ  ಬೆಳವಣಿಗೆ ನಡೆದಿರುವುದು ಭಾರೀ ಮಹತ್ವ ಪಡೆದುಕೊಂಡಿದ್ದು, ಸಹೋದರರು ಮತ್ತೆ ಒಗ್ಗೂಡಿರುವುದರಿಂದ ಮತ್ತೆ ರಿಲಯನ್ಸ್ ಸಂಸ್ಥೆಗೆ ಹೊಸ ಉತ್ತೇಜನ ನೀಡಿದಂತಾಗಿದೆ.
ಆರ್‌ಕಾಂ ಇತ್ತೀಚೆಗೆ ಏರ್‍ಸೆಲ್ ಕಂಪೆನಿಯನ್ನು ಖರೀದಿಸಲು ರಿಲಯನ್ಸ್ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಆಂಧ್ರಪ್ರದೇಶ, ಹರ್ಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ ಪೂರ್ವ ಮತ್ತು ಪಶ್ಚಿಮ,  ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ 2ಜಿ ಮತ್ತು 4ಜಿ ಸೇವೆ ಯನ್ನು ರಿಲಯನ್ಸ್ ನೀಡುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com