ನಗದು ಹಣದ ಮೂಲಕ ಚಿನ್ನಾಭರಣ ಖರೀದಿ ಇನ್ನು ಮತ್ತಷ್ಟು ದುಬಾರಿ!

ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ನಗದು ಸಹಿತ ಆಭರಣ ಖರೀದಿ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ನಗದು ಸಹಿತ ಆಭರಣ ಖರೀದಿ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ  ವಿಧಿಸಲು ನಿರ್ಧರಿಸಿದೆ.

ಇನ್ನು ಮುಂದೆ  ನಗದು ಹಣ ನೀಡಿ ಆಭರಣ ಖರೀದಿ ಮಾಡುವವರು ಹೆಚ್ಚುವರಿ ತೆರಿಗೆ ಭರಿಸಲು ಸಿದ್ಧರಾಗಬೇಕಿದೆ. ಏಕೆಂದರೆ 2017ರ ವಿತ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಅದರಂತೆ ನಗದು ಹಣ ನೀಡಿ ಆಭರಣ  ಖರೀದಿ ಮಾಡುವವರು ಪ್ರಸ್ತುತ ಇರುವ ತೆರಿಗೆಗಳೊಂದಿಗೆ ಇನ್ನು ಮುಂದೆ ಹೆಚ್ಚುವರಿಯಾಗಿ ಶೇ.1ರಷ್ಟು ತೆರಿಗೆ ಪಾವತಿ ಮಾಡಿ ಆಭರಣ ಖರೀದಿ ಮಾಡಬೇಕಿದೆ.

ಕೇಂದ್ರ ಸರ್ಕಾರಿ ಮೂಲಗಳ ಪ್ರಕಾರ 2 ಲಕ್ಷಕ್ಕೂ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ನಗದು ಹಣ ಬಳಕೆ ಮಾಡಿದರೆ ಆಗ ಶೇ.1ರಷ್ಟು ಹೆಚ್ಚುವರಿ ತೆರಿಗೆ (tax collected at source-ಟಿಸಿಎಸ್)ನೀಡಬೇಕಾಗುತ್ತದೆ. ಆದರೆ ಈ  ನಿಯಮ ನಗದು ರಹಿತ ಆಭರಣ ಖರೀದಿ ಮಾಡುವವರಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ನೂತನ ನಿಯಮ ಇದೇ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹಿಂದೆಯೂ ಇದೇ ರೀತಿ ನಿಯಮವೊಂದಿತ್ತು.  ಅದರಂತೆ 5ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿದರೆ ಆಗ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ ಈ ಕಾನೂನನ್ನು ಮತ್ತಷ್ಟು ಕಠಿಣ ಮಾಡಲಾಗಿದ್ದು, 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು  ಖರೀದಿಸಿದರೆ ಶೇ.1ರಷ್ಟು ಟಿಸಿಎಸ್ ತೆರಿಗೆ ವಿಧಿಸಲಾಗುವುದು ಎಂದು ಸರ್ಕಾರೀ ಮೂಲಗಳು ತಿಳಿಸಿವೆ.

2017ನೇ ಸಾಲಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 3ಲಕ್ಷಕ್ಕೂ ಮೇಲ್ಪಟ್ಟ ನಗದು ವ್ಯವಹಾರವನ್ನು ನಿಷೇಧ ಮಾಡಿದ್ದಾರೆ. ಒಂದು ವೇಳೆ ನಿಯಮ ಮೀರಿದ ವ್ಯಕ್ತಿಗಳಿಂದ ಅಷ್ಟೇ ಪ್ರಮಾಣದ ದಂಡ  ಮತ್ತು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com