ಜಗತ್ತಿನ ಕೃಷಿ ಉದ್ಯಮಗಳ ಮೇಲೇಕೆ ಚೀನಾದ ಕಣ್ಣು ?

ಚೀನಾ ಎನ್ನುವ ಜಗತ್ತಿನ ಉತ್ಪಾದಕ ದೈತ್ಯ ಸ್ವಿಸ್ ದೇಶದ ಸಿಂಜೆಂಟಾ (Syngenta) ಎನ್ನುವ ಕೀಟನಾಶಕ ಮತ್ತು ಧಾನ್ಯಗಳ (pesticides and seeds) ದೈತ್ಯ ಕಂಪನಿಯನ್ನ 44 ಬಿಲಿಯನ್ ಅಮೆರಿಕನ್ ಡಾಲರ್ ತೆತ್ತು
ಚೀನಾ ಕೃಷಿ
ಚೀನಾ ಕೃಷಿ
ಒಂದು ಉದ್ಯಮ ಚನ್ನಾಗಿ ನೆಡೆಯುತ್ತಿದೆ ಎಂದುಕೊಳ್ಳಿ ಅದನ್ನ ಮಾರಲು ಯಾರು ತಾನೇ ಇಷ್ಟ ಪಡುತ್ತಾರೆ? ಆದರೂ ಆ ಉದ್ಯಮವನ್ನ ಮಾರುತ್ತಾರೆ ಎಂದರೆ ಅಲ್ಲಿ ಎರಡು ಕಾರಣಗಳಿರಬಹದು. ಒಂದು ಧೀರ್ಘಾವದಿಯಲ್ಲಿ ಆ ಉದ್ಯಮದ ಹಣೆಬರಹದ ಬಗ್ಗೆ ಆ ಉದ್ಯಮ ನೆಡೆಸುತ್ತಿರುವರಿಗೆ ನಂಬಿಕೆ ಇಲ್ಲದಿರುವುದು. ಎರಡು ಸದ್ಯದ ಆ ಉದ್ಯಮದ ಮೌಲ್ಯದ ಹತ್ತಾರುಪಟ್ಟು ಹಣ ಕೊಟ್ಟು ಆ ಉದ್ಯಮವ ಯಾರಾದರೂ ಖರೀದಿಸಲು  ಬರುವುದು. ಈಗ ನೀವು ಪ್ರಶ್ನೆ ಕೇಳುತ್ತೀರಿ ಕಂಪನಿಯ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ? ಕಂಪನಿಯ ನಿರ್ಧಾರಿತ ಮೌಲ್ಯದ ಹತ್ತಾರು ಪಟ್ಟು ಹಣ ತೆತ್ತು ಯಾರೇಕೆ ಖರೀದಿಸುತ್ತಾರೆ? 
ಕಂಪನಿಯ ಮೌಲ್ಯ ಎಂದರೇನು? ಅದನ್ನ ಹೇಗೆ ನಿರ್ಧರಿಸುತ್ತಾರೆ? 
ಕಂಪನಿಯ ಮೌಲ್ಯವೆಂದರೆ  ನೆಡೆಯುತ್ತಿರುವ ಉದ್ಯಮದ ಬೆಲೆ ಪಟ್ಟಿ. ದೊಡ್ಡ ದೊಡ್ಡ ಕಂಪನಿಗಳು ವರ್ಷಕ್ಕೆ ಒಮ್ಮೆ ತಮ್ಮ ಕಂಪನಿಯ ಮೌಲ್ಯಮಾಪನ ಅಥವಾ ವ್ಯಾಲ್ಯೂವೇಶನ್ ಮಾಡಿಸುತ್ತವೆ. ಅದು ಮಾರುವ ಉದ್ದೇಶ ಅಂತಲ್ಲ. ಮಾರುಕಟ್ಟೆಯಲ್ಲಿ ನಾವೆಲ್ಲಿ ನಿಂತಿದ್ದೇವೆ ಎಂದು ಅರಿಯಲು. 
ಒಂದು ಕಂಪನಿಯ ಹಣದ ಹರಿವು, ಒಟ್ಟು ನಿವ್ವಳ ಆಸ್ತಿಯ ಮೊತ್ತ ಕಂಪನಿಯ ಮೌಲ್ಯವನ್ನ ನಿರ್ಧರಿಸುತ್ತದೆ. ಕಂಪನಿಯ ವಹಿವಾಟು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಉದಾಹರಣೆ ನೋಡಿ ಒಂದು ಕಂಪನಿಯ ಟರ್ನ್ ಓವರ್ 20 ಕೋಟಿ ಇರಬಹುದು ಆದರೆ ಆ ಕಂಪನಿಯ ಹಣದ ಹರಿವು ಮತ್ತು ನಿವ್ವಳ ಆಸ್ತಿ ಕಡಿಮೆಯಿದ್ದರೆ ವಹಿವಾಟು ಕೋಟಿಯಲಿದ್ದರೂ ಮೌಲ್ಯ ಕಡಿಮೆಯಿರುತ್ತದೆ. 
ಇಷ್ಟೆಲ್ಲಾ ಪೀಠಿಕೆ ಏಕೆ ಹೇಳಬೇಕಾಯಿತು ಗೊತ್ತೇ? ಚೀನಾ ಎನ್ನುವ ಜಗತ್ತಿನ ಉತ್ಪಾದಕ ದೈತ್ಯ ಸ್ವಿಸ್ ದೇಶದ ಸಿಂಜೆಂಟಾ (Syngenta) ಎನ್ನುವ ಕೀಟನಾಶಕ ಮತ್ತು ಧಾನ್ಯಗಳ (pesticides and seeds) ದೈತ್ಯ ಕಂಪನಿಯನ್ನ 44 ಬಿಲಿಯನ್ ಅಮೆರಿಕನ್ ಡಾಲರ್ ತೆತ್ತು ಎರಡು ವಾರದ ಹಿಂದೆ ಕೊಂಡಿದೆ. ಕೆಮ್ ಚೀನಾ ಎನ್ನುವ ಚೀನಾ ಸರಕಾರಿ ಸ್ವಾಮ್ಯದ ಕಂಪನಿ ಇದನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಿಂಜೆಂಟಾ ಯೂರೋಪಿನಲ್ಲಿ ಅತ್ಯಂತ ಪ್ರಭಲ ಹಾಗು ಹೆಸರುವಾಸಿ ದೈತ್ಯ ಸಂಸ್ಥೆ. ಈ ಸಂಸ್ಥೆಯಲ್ಲಿ ಸರಿಸುಮಾರು ಮೂವತ್ತು ಸಾವಿರ ಜನ ಕೆಲಸಮಾಡುತ್ತಾರೆ. ಹತ್ತಿರತ್ತಿರ 19 ಬಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಆಸ್ತಿ ಹೊಂದಿದ್ದಾರೆ. ಇಂತಹ ಸಂಸ್ಥೆಯನ್ನ ಕೆಮ್ ಚೀನಾ ಎನ್ನುವ ಕಂಪನಿ 44 ಬಿಲಿಯನ್ ಕೊಟ್ಟು ಕೊಂಡಿದ್ದಾದರೂ ಏಕೆ? 
ಚೀನಾ ದೇಶ ಹೀಗೆ ಸ್ವಿಸ್ ದೇಶದ ಒಂದು ಕಂಪೆನಿಯನ್ನ ಕೊಂಡರೆ ಅದು ನಮಗೆ ತಲೆನೋವಿನ ವಿಷಯವಾಗಬೇಕಿಲ್ಲ. ಆದರೆ ವಿಷಯ ಇಷ್ಟಕ್ಕೆ ನಿಲ್ಲುವುದಿಲ್ಲ. ಡೊ ಕೆಮಿಕಲ್ಸ್ ಎನ್ನುವ ಅಮೆರಿಕಾದ ದೈತ್ಯ ಕೀಟನಾಶಕ ಕಂಪನಿಗೆ ಒಂದು ಬಿಲಿಯನ್ ಡಾಲರಿಗೂ ಹೆಚ್ಚಿನ ಹಣ ಸಹಾಯ ಮಾಡಿದೆ. ಬ್ರೆಜಿಲ್ ದೇಶದಲ್ಲಿ ತನ್ನ ಜೋಳದ ವ್ಯಾಪಾರಕ್ಕೆ ಒಂದಷ್ಟು ರಿಸರ್ಚ್ ಮಾಡಿ ಎಂದು ಈ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದೆ. ನಿಮಗೆ ಗೊತ್ತೇ 'ಡೊಕೆಮಿಕಲ್ಸ್ ' ಜಗತ್ತಿನ ಎರಡನೇ ದೊಡ್ಡ ಕೀಟನಾಶಕ ತಯಾರಕ ಸಂಸ್ಥೆ. 
ಈಗ ನೀವು ಕೇಳಬಹದು ಸರಿ ಚೀನಾ ದೇಶ ಸ್ವಿಸ್ ದೇಶದ ಒಂದು ಕಂಪನಿ ಕೊಂಡಿತು , ಅಮೇರಿಕಾದ ಯಾವುದೊ ಒಂದು ಸಂಸ್ಥೆಗೆ ಒಂದಷ್ಟು ಹಣ ದೇಣಿಗೆ ರೂಪದಲ್ಲಿ ನೀಡಿದರೆ ನಮ್ಮ ಗಂಟೇನು ಹೋಯಿತು ? ಎಂದು.  ಗಮನಿಸಿ ಚೀನಾ ದೇಶ ತಾನು ಕೊಳ್ಳಲು ಇಚ್ಛಿಸುವ ಕಂಪನಿಗೆ ಮೊದಲು ಕಾಲಿಡುವುದು ದೇಣಿಗೆ ನೀಡುವುದರಿಂದ!  ಚೀನಾ ದೇಶ ಕಳೆದ ಒಂದು ದಶಕದಲ್ಲಿ 91 ಬಿಲಿಯನ್ ಡಾಲರಿಗಿಂತಲೂ ಹೆಚ್ಚಿನ ಹಣ ವ್ಯಯಿಸಿ ಕೃಷಿಗೆ ಸಂಬಂಧ ಪಟ್ಟ ಸರಿಸುಮಾರು 3೦೦ ವಿದೇಶಿ  ಕಂಪನಿಗಳ ಕೊಂಡುಕೊಂಡಿದೆ. 
ಈಗ ಆಗಾಧತೆಯ ಅರಿವಾಯಿತಲ್ಲವೇ? ಮುಂದಿನದು ಪ್ರಶ್ನೆ.  ಏಕೆ? ಚೀನಾ ದೇಶ ದುಪಟ್ಟು ಹಣ ಕೊಟ್ಟು ಕೃಷಿಗೆ ಸಂಬಂಧ ಪಟ್ಟ ಕಂಪನಿಗಳ ಜಗತ್ತಿನ ಯಾವ ಭಾಗದಲ್ಲೇ ಇರಲಿ ಅವನ್ನ ಕೊಳ್ಳುತ್ತಿರುವ ಹಿಂದೆ ಕಾರಣವೇನಿರಬಹದು? ಚೀನಾ ದೇಶ ಯಾವುದನ್ನೇ ಆಗಲಿ ಬಹಳ ಮುಂದಾಲೋಚನೆಯಿಂದ ಧೀರ್ಘವಾಧಿಯ ದೃಷ್ಟಿಯಿಂದ ಮಾಡುತ್ತದೆ. ಇಂದಿಗೆ ಅದು ಹುಚ್ಚಾಟ ಅನ್ನಿಸಿದರೂ ಮುಂದೆ ತನ್ನ ಪಾರುಪತ್ಯ ಮೆರೆಯಲು, ಜಗತ್ತಿಗೆ ಹಿರಿಯಣ್ಣ ನಾಗುವ ತನ್ನ ಬಯಕೆಯ ಪೂರ್ಣಗೊಳಿಸಲು ದಾರಿ ಸುಗಮ ಮಾಡಿಕೊಳ್ಳುತ್ತಿದೆ ಅನ್ನಿಸುತ್ತದೆ. ಇದು ಕೇವಲ ಪಾರುಪತ್ಯಕ್ಕೆ ಸೀಮಿತವಾಗಿಲ್ಲ. ಚೀನಾ ದೇಶದ ಕೃಷಿಗೆ ಸಂಬಂಧ ಪಟ್ಟ ಖರೀದಿ ಹಿಂದೆ ಎರಡು ಮುಖ್ಯ ಕಾರಣಗಳಿವೆ. 
ಮೊದಲನೆಯದು ತನ್ನ ಅಗಾಧ ಜನಸಂಖ್ಯೆಯ ಹೊಟ್ಟೆ ತುಂಬಿಸುವುದು. ಚೀನಾ ದೇಶದ ಜನರ ಜೀವನ ಮೌಲ್ಯ ಕಳೆದ ದಶಕದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಅವರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಅವರ ತಿನ್ನುವ ಅಭ್ಯಾಸ ಬದಲಾಗಿದೆ. ಹೀಗಾಗಿ ಹೆಚ್ಚಿನ ಆಹಾರದ ಅವಶ್ಯಕತೆ ಇದೆ. ಎರಡನೇಯದಾಗಿ ಮುಂದೊಂದು ದಿನ ಜಗತ್ತಿನಲ್ಲಿ ಆಹಾರ ಧಾನ್ಯದ ಕೊರತೆ ಉಂಟಾದರೆ? ಎನ್ನುವ ಪ್ರಶ್ನೆಗೆ ಚೀನಾ ಈಗಲೇ ಉತ್ತರ ಸಿದ್ದ ಪಡಿಸಿಕೊಳ್ಳುತ್ತಿದೆ. ಅಂತಹ ಸಮಯದಲ್ಲಿ ಮೊದಲು ತನ್ನ ನಾಗರಿಕರ ರಕ್ಷಣೆಗೆ ಚೀನಾದ ದೂರಾಲೋಚನೆ ಇದ್ದಿರಬಹದು. 
ಎಲ್ಲಕ್ಕೂ ಮುಖ್ಯವಾಗಿ ಮುಂಬರುವ ದಿನಗಳಲ್ಲಿ ಜಗತ್ತನ್ನ ತನ್ನ ಇಚ್ಚೆಗೆ ತಕ್ಕಂತೆ ಕುಣಿಸುವ ತಾಕತ್ತು ಅದಕ್ಕೆ ಬರುತ್ತದೆ. ಬೆಲೆ ನಿರ್ಧಾರ ದಿಂದ ಒಳಗೊಂಡು ಯಾರಿಗೆ ಮಾರಬೇಕು ಯಾರಿಗೆ ಮಾರಬಾರದು ಎನ್ನುವ ನಿರ್ಧಾರ ಚೀನಾದ ಕೈಲಿರುತ್ತೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಪಾನ್ ಮತ್ತು ಸೌದಿ ಅರೇಬಿಯಾ ದೇಶಗಳು ಕೂಡ ಹೀಗೆ ಕೃಷಿಗೆ ಸಂಬಂಧಪಟ್ಟ ಕೈಗಾರಿಕೆಗಳ ಮೇಲೆ ಒಡೆತನ ಹೊಂದಲು ಹೆಣಗುತ್ತಿವೆ. ತಕ್ಕ ಮಟ್ಟಿಗೆ ಖರೀದಿಸಿವೆ .ಆದರೆ ಚೀನಾದ ಮುಂದೆ ಅವು ತೃಣ. 
ಚೀನಾ ದೇಶ ತನ್ನ ದೇಶದ ಹೊರಗೆ ಒಂದೊಂದೇ ಸಂಸ್ಥೆಗಳ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿರುವುದು ನಿಜಕ್ಕೂ ಚಿಂತಿಸುವ ವಿಷಯ ಎಂದು ಅಮೇರಿಕಾದಲ್ಲಿ ಆಗಲೇ ಕೂಗು ಎದ್ದಿದೆ. ದೈತ್ಯ ಚೀನಾ ಸದ್ಯದ ಮಟ್ಟಿಗೆ  ನೆಡೆದದ್ದೇ ದಾರಿ ಎನ್ನುವಂತೆ ಸಾಗುತ್ತಿದೆ. ಭಾರತದಲ್ಲಿ ಫುಡ್ ಸೆಕ್ಯುರಿಟಿ ಬಿಲ್.. ಫುಡ್ ಸೆಕ್ಯುರಿಟಿ ಎನ್ನುವ ಮಾತು ಆಗಾಗ ಕೇಳಿ ಬರುತ್ತದೆ. ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆ ಬಂದರೆ ಅದನ್ನ ಎದುರಿಸಲು ಭಾರತ ಸಿದ್ಧವಿದೆಯೇ? ಎನ್ನುವ ಪ್ರಶ್ನೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಚೀನಾ ಜಪಾನ್, ಸೌದಿ ದೇಶಗಳ ಕೃಷಿ ಸಂಬಂಧಿತ ಕೈಗಾರಿಕೆಗಳ ಮೇಲಿನ ಹಿಡಿತ ಸುಮ್ಮನೆಯಂತೂ ಇರಲಾರದು. 
ಇಂದಿನ ದಿನಗಲ್ಲಿ ಮದ್ದು ಗುಂಡು ವ್ಯಯಿಸಿ ಯುದ್ಧ ಮಾಡುವುದು ಯಾರಿಗೂ ಬೇಕಿಲ್ಲ. ಇವತ್ತೇನಿದ್ದರೂ ಪ್ರಾಕ್ಸಿ ವಾರ್. ಅದು ಕರೆನ್ಸಿ ವಾರ್ ಇರಬಹದು,  ಪ್ರೈಸ್ ಇರಬಹುದು. ಚೀನಾ ಹೊಸ ಅಸ್ತ್ರ 'ಫುಡ್ ವಾರ್ ' ಗೆ ಅಣಿಯಾಗುತ್ತಿದೆಯೆ? 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com