ಎಸ್ ಬಿಐ ಉಳಿತಾಯ ಖಾತೆ: ತಿಂಗಳಿಗೆ ಮೂರು ಬಾರಿ ಹಣ ಠೇವಣಿ ಉಚಿತ; ನಂತರ ರೂ.50 ಶುಲ್ಕ

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಏಪ್ರಿಲ್ 1ರಿಂದ ದಂಡ ಹೇರುವ ಪ್ರಕ್ರಿಯೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಏಪ್ರಿಲ್ 1ರಿಂದ ದಂಡ ಹೇರುವ ಪ್ರಕ್ರಿಯೆಯನ್ನು ಮತ್ತೆ ಜಾರಿಗೆ ತರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಅಲ್ಲದೆ ಎಟಿಎಂ ಸೇರಿದಂತೆ ಇತರ ಸೇವೆಗಳಿಗೆ ವಿಧಿಸುವ ದರಗಳನ್ನು ಪರಿಷ್ಕರಿಸಲಿದೆ.
ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವವರಿಗೆ ಹಣವನ್ನು ತಿಂಗಳಲ್ಲಿ ಮೂರು ಸಲದವರೆಗೆ ಯಾವುದೇ ಶುಲ್ಕವಿಲ್ಲದೆ ಠೇವಣಿಯಿಡಲು ಅವಕಾಶ ನೀಡಲಾಗಿದ್ದು, ಅದಕ್ಕಿಂತ ಹೆಚ್ಚಿನ ಸಾರಿ ಠೇವಣಿಯಿಟ್ಟರೆ 50 ರೂಪಾಯಿ ಹಾಗೂ ಸೇವಾ ಶುಲ್ಕವನ್ನು ವಿಧಿಸಲಿದೆ. ಚಾಲ್ತಿ ಖಾತೆ ಹೊಂದಿರುವವರಿಗೆ  ದಂಡದ ಮೊತ್ತ 20,000ದವರೆಗೂ ಏರಿಕೆಯಾಗಬಹುದು.
ಎಸ್ ಬಿಐಯ ಪರಿಷ್ಕೃತ ದರದ ಪ್ರಕಾರ,  ತಿಂಗಳ ಸರಾಸರಿ ಕನಿಷ್ಠ ಹಣವನ್ನು ಖಾತೆಯಲ್ಲಿ ಇಟ್ಟುಕೊಳ್ಳದಿದ್ದರೆ 100ರೂಪಾಯಿ ಹಾಗೂ ಸೇವಾ ಶುಲ್ಕವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಮೆಟ್ರೊಪೊಲಿಟನ್ ನಗರಗಳಲ್ಲಿ ಸರಾಸರಿ ಕನಿಷ್ಠ ಠೇವಣಿ ಶೇಕಡಾ 75 ಕ್ಕಿಂತ ಕಡಿಮೆಯಿದ್ದರೆ ದಂಡದ ಮೊತ್ತ 100 ರೂಪಾಯಿಯಿಂದ 5,000ದವರೆಗೆ ಏರಿಕೆಯಾಗಬಹುದು. ಶೇಕಡಾ 50ಕ್ಕಿಂತ ಕಡಿಮೆಯಿದ್ದರೆ ಬ್ಯಾಂಕು 50ರೂಪಾಯಿ ಮತ್ತು ಸೇವಾ ಶುಲ್ಕವನ್ನು ಹೇರುತ್ತದೆ.
ಬ್ಯಾಂಕು ಇರುವ ಸ್ಥಳವನ್ನು ಆಧರಿಸಿ ದಂಡ ಶುಲ್ಕ ಮತ್ತು ಕನಿಷ್ಠ ಸರಾಸರಿ ಬ್ಯಾಲೆನ್ಸ್ ಬದಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದಂಡದ ಮೊತ್ತ ಕಡಿಮೆಯಿರುತ್ತದೆ.
ಈ ದಂಡ ಹೇರುವ ಪ್ರಕ್ರಿಯೆ ಏಪ್ರಿಲ್ 1ರಿಂದ ಮತ್ತೆ ಜಾರಿಗೆ ಬರಲಿದ್ದು, ಬ್ಯಾಂಕುಗಳಿಗೆ ಆರ್ ಬಿಐ ಈ ಅವಕಾಶ ನೀಡಿದೆ.
ಇತರ ಬ್ಯಾಂಕುಗಳ ಎಟಿಎಂನಿಂದ ತಿಂಗಳಿಗೆ ಮೂರಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸಿದರೆ 20 ರೂಪಾಯಿ ದಂಡ ಮತ್ತು ಎಸ್ ಬಿಐ ಬ್ಯಾಂಕಿನಿಂದ ತನ್ನ ಗ್ರಾಹಕರು 5 ಕ್ಕಿಂತ ಹೆಚ್ಚು ಸಲ ಹಣ ತಿಂಗಳಿಗೆ ವಿತ್ ಡ್ರಾ ಮಾಡಿದರೆ 10 ರೂಪಾಯಿ ದಂಡ ವಿಧಿಸುತ್ತದೆ.
ಬ್ಯಾಲೆನ್ಸ್ 25,000ಕ್ಕಿಂತ ಹೆಚ್ಚಿದ್ದರೆ ತನ್ನದೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ. 1 ಲಕ್ಷಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇದ್ದರೆ ಬೇರೆ ಬ್ಯಾಂಕು ಎಟಿಎಂನಿಂದಲೂ ಸಾಕಷ್ಟು ಬಾರಿ ಹಣ ವಿತ್ ಡ್ರಾ ಮಾಡಬಹುದು.
ಮೂರು ತಿಂಗಳ ಅವಧಿಯಲ್ಲಿ ಸರಾಸರಿ 25,000 ರೂಪಾಯಿ ನಗದು ಖಾತೆಯಲ್ಲಿ ಇಟ್ಟುಕೊಂಡಿದ್ದರೆ ಪ್ರತಿ ಮೂರು ತಿಂಗಳಿಗೊಮ್ಮೆ ಡೆಬಿಟ್ ಕಾರ್ಡು ಹೊಂದಿರುವವರಿಗೆ ಎಸ್ಎಂಎಸ್ ಸಂದೇಶಕ್ಕೆ 15 ರೂಪಾಯಿ ಶುಲ್ಕ ವಿಧಿಸುತ್ತದೆ. 1000 ರೂಪಾಯಿವರೆಗಿನ ಯುಪಿಐ/ ಯುಎಸ್ಎಸ್ ಡಿ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com