ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಂಚನೆಯಲ್ಲಿ ಐಸಿಐಸಿಐ ಬ್ಯಾಂಕ್ ಗೆ ಅಗ್ರ ಸ್ಥಾನ: ಆರ್ ಬಿಐ

ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿದ ಬಳಿಕ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳುವ ಕಾಳಧನಿಕರಿಗೆ ದೇಶದ ವಿವಿಧ ಬ್ಯಾಂಕುಗಳು ನೆರವು ನೀಡಿದ್ದು,...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಮಾಡಿದ ಬಳಿಕ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳುವ ಕಾಳಧನಿಕರಿಗೆ ದೇಶದ ವಿವಿಧ ಬ್ಯಾಂಕುಗಳು ನೆರವು ನೀಡಿದ್ದು, ಈ ಪೈಕಿ ಪ್ರತಿಷ್ಠಿತ ಖಾಸಗಿ ಬ್ಯಾಂಕ್  ಸಂಸ್ಥೆ ಐಸಿಐಸಿಐ ಅಗ್ರ ಸ್ಥಾನದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಸೋಮವಾರ ಆರ್ ಬಿಐ ತನ್ನ ಬ್ಯಾಂಕ್ ವಂಚನೆ ಪಟ್ಟಿ ಬಿಡುಗಡೆ ಮಾಡಿದ್ದು,  500 ಹಾಗೂ 1000 ರು.ಗಳ ನೋಟುಗಳನ್ನು ನಿಷೇಧಗೊಳಿಸಿದ ನಂತರ ದೇಶದ ವಿವಿಧ ಬ್ಯಾಂಕ್‍ ಗಳಲ್ಲಿ ನಡೆದ ವಂಚನೆಯ ಪಟ್ಟಿಯಲ್ಲಿ ಐಸಿಐಸಿಐ  ಮೊದಲ ಸ್ಥಾನದಲ್ಲಿದೆ ಎಂದು ಆರ್‍ ಬಿಐ ತಿಳಿಸಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಡಿಸೆಂಬರ್ 9 ರ ನಡುವಿನ ಅವಧಿಯಲ್ಲಿ ವಿವಿಧ ಬ್ಯಾಂಕ್‍ ಗಳಲ್ಲಿ ನಡೆದಿರುವ ವಂಚನೆಗಳ ಆಧಾರದ ಮೇಲೆ ಐಸಿಐಸಿಐ ಬ್ಯಾಂಕ್‍ ನಲ್ಲಿ ಅತೀ ಹೆಚ್ಚು  ಅಂದರೆ 455 ವಂಚನೆ ಪ್ರಕರಣಗಳು ನಡೆದಿದೆ ಎಂದು ಆರ್ ಬಿಐ ತಿಳಿಸಿದೆ.

ಉಳಿದಂತೆ ಇತರೆ ಬ್ಯಾಂಕುಗಳಾದ ಸ್ಟ್ಯಾಂಡರ್ಡ್ ಚಾರ್ಟೆಡ್ (244 ಪ್ರಕರಣ) ಹಾಗೂ ಎಚ್ ಡಿಎಫ್‍ಸಿ (237ಪ್ರಕರಣ) , ಎಕ್ಸಿಸ್ ಬ್ಯಾಂಕ್ (189 ಪ್ರಕರಣ), ಬ್ಯಾಂಕ್ ಆಫ್ ಬರೋಡಾ (176ಪ್ರಕರಣ) ಹಾಗೂ ಸಿಟಿ ಬ್ಯಾಂಕ್  (150ಪ್ರಕರಣ) ವಂಚನೆ ಪಟ್ಟಿಯ ನಂತರದ ಸ್ಥಾನಗಳಲ್ಲಿದೆ.

ವಂಚನೆ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ ಎಸ್ ಬಿಐಗೆ 2ನೇ ಸ್ಥಾನ
ಇನ್ನು ಆರ್ ಬಿಐ ಬಿಡುಗಡೆ ಮಾಡಿರುವ ಬ್ಯಾಂಕುಗಳ ವಂಚನೆ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ ಎಸ್ ಬಿಐ ಕೂಡ ಮುಂದಿದ್ದು, ಎಸ್ ಬಿಐನಲ್ಲಿ ಒಟ್ಟು 429 ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಎಸ್ ಬಿಐ ಪಟ್ಟಿಯಲ್ಲಿ ಎರಡನೇ  ಸ್ಥಾನದಲ್ಲಿದ್ದು, ಹಣದ ವಂಚನೆಯಲ್ಲಿ ಎಸ್‍ ಬಿಐ ತಾನೂ ಕೂಡ ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಎಸ್ ಬಿಐ ಈವರೆಗೂ 2,236.81 ಕೋಟಿ ಗಳಿಗೂ ಹೆಚ್ಚು ವಂಚಿಸಿದೆ ಎಂದು ಆರ್ ಬಿಐ ಮೂಲಗಳು ತಿಳಿಸಿವೆ.  ಅಂತೆಯೇ ಪಂಜಾಬ್ ನ್ಯಾಷನಲ್ ಬ್ಯಾಂಕ್ (2,250.34 ಕೋಟಿ), ಆ್ಯಕ್ಸಿಸ್ (1,998.49 ಕೋಟಿ) ನಂತರದ ಸ್ಥಾನದಲ್ಲಿವೆ.

ಏಪ್ರಿಲ್ ನಿಂದ ಡಿಸೆಂಬರ್ ಒಳಗಿನ ಈ ವಂಚನೆ ಪ್ರಕರಣಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳು ಸೇರಿದಂತೆ ಒಟ್ಟು 450 ಸಿಬ್ಬಂದಿಗಳು ಶಾಮೀಲಾಗಿದ್ದು , ಇವುಗಳಲ್ಲಿ 3,870 ಕೇಸ್‍ಗಳಲ್ಲಿ 17,750.27 ಕೋಟಿ  ರು.ಗಳನ್ನು ವಂಚಿಸಿದ್ದಾರೆ ಎಂದು ಆರ್‍ ಬಿಐ ಮೂಲಗಳು ತಿಳಿಸಿವೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ದಾಖಲೆಯನ್ನು ಒದಗಿಸಲಾಗುವುದು ಎಂದು ಆರ್‍ ಬಿಐನ ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com