ಹೊಸ ಆರ್ಥಿಕ ವರ್ಷ
ವಾಣಿಜ್ಯ
ಕ್ಯಾಲೆಂಡರ್ ಇಯರ್ ಅಥವಾ ಫೈನಾನ್ಸಿಯಲ್ ಇಯರ್ ಯಾವುದು ಹಿತವಯ್ಯ ನಮಗೆ?
ನಮ್ಮ ದೇಶದ ಎರಡನೇ ಅತಿ ದೊಡ್ಡ ರಾಜ್ಯವೆಂದು ಹೆಗ್ಗಳಿಕೆ ಪಡೆದಿರುವ ಮಧ್ಯಪ್ರದೇಶ ಹಣಕಾಸು ವರ್ಷವನ್ನ ಜನವರಿ ಯಿಂದ ಡಿಸೆಂಬರ್ ಎಂದು ಘೋಷಿಸಿದೆ. ಈ ವ್ಯವಸ್ಥೆಯನ್ನ 2018 ನೇ ಇಸವಿಯಿಂದ...
ನಮ್ಮ ದೇಶದ ಎರಡನೇ ಅತಿ ದೊಡ್ಡ ರಾಜ್ಯವೆಂದು ಹೆಗ್ಗಳಿಕೆ ಪಡೆದಿರುವ ಮಧ್ಯಪ್ರದೇಶ ಹಣಕಾಸು ವರ್ಷವನ್ನ ಜನವರಿ ಯಿಂದ ಡಿಸೆಂಬರ್ ಎಂದು ಘೋಷಿಸಿದೆ. ಈ ವ್ಯವಸ್ಥೆಯನ್ನ 2018 ನೇ ಇಸವಿಯಿಂದ ಪಾಲಿಸುವುದಾಗಿಯೂ ಹೇಳಲಾಗಿದೆ.
ದೇಶದಲ್ಲಿ ಇಂತಹ ಒಂದು ನಿರ್ಧಾರ ತೆಗೆದುಕೊಂಡ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಕೂಡ ಮಧ್ಯಪ್ರದೇಶ ಬಾಚಿಕೊಂಡಿದೆ. ಏಪ್ರಿಲ್ 23 ರಂದು ನೀತಿ ಆಯೋಗದ ಸದಸ್ಯರನ್ನ ಉದ್ದೇಶಿಸಿ ಮಾತನಾಡುತ್ತ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು' ನಮ್ಮ ದೇಶದಲ್ಲಿ ಇಂದಿಗೂ ಕೃಷಿಯಿಂದ ಬರುವ ಆದಾಯ ಅತಿ ಮುಖ್ಯ ಭಾಗವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕೃಷಿ ಮೂಲದಿಂದ ಆದಾಯ ಬಂದ ತಕ್ಷಣ ಬಜೆಟ್ ಮಂಡಿಸುವುದು ಅತ್ಯಂತ ಅವಶ್ಯಕ'. ಎನ್ನುವ ಹೇಳಿಕೆ ನೀಡಿದರು. ಜಗತ್ತಿನ ಇತರ ದೇಶಗಳನ್ನ ನೋಡುತ್ತಾ ಹೋದರೆ ಎಲ್ಲರೂ ಬೇರೆ ಬೇರೆ ಹಣಕಾಸು ವರ್ಷ ಹೊಂದಿದ್ದಾರೆ. ಹಲವು ದೇಶಗಳು ಕ್ಯಾಲೆಂಡರ್ ಇಯರ್ ಅನ್ನು ಹಣಕಾಸು ವರ್ಷವನ್ನಾಗಿ ಸ್ವೀಕರಿಸಿವೆ. ಅಂದರೆ ಜಗತ್ತಿನೆಲ್ಲೆಡೆ ಈ ವಿಷಯದಲ್ಲೂ ಸಮಾನತೆ ಇಲ್ಲ.
ನಮ್ಮ ದೇಶದಲ್ಲಿ ಹಣಕಾಸು ವರ್ಷದ ಹಿನ್ನೆಲೆ:
ಬ್ರಿಟಿಷರು ನಮ್ಮ ದೇಶವನ್ನ ವಸಹಾತು ಮಾಡಿಕೊಂಡು ನಮ್ಮನ್ನಾಳಿದ ವಿಷಯ ಎಲ್ಲರಿಗೂ ತಿಳಿದ ವಿಷಯವೆ . ಬ್ರಿಟಿಷರು ಹಣಕಾಸು ವರ್ಷವನ್ನ ಏಪ್ರಿಲ್ ನಿಂದ ಮಾರ್ಚ್ ಎಂದು ಬಳಸುತ್ತಾ ಬಂದಿದ್ದರು. 1867 ರಲ್ಲಿ ತಮ್ಮ ಲೆಕ್ಕ ಪಾತ್ರಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಭಾರತದ ಮೇಲೂ ಹೇರಿದರು. 1867 ಕ್ಕೂ ಮುಂಚೆ ಭಾರತದಲ್ಲಿ ಮೇ ಇಂದ ಏಪ್ರಿಲ್ ಅನ್ನು ಹಣಕಾಸು ವರ್ಷ ಎಂದು ಕರೆಯಲಾಗುತಿತ್ತು. ಬ್ರಿಟಿಷರು ಏಪ್ರಿಲ್ ನಿಂದ ಮಾರ್ಚ್ ಅನ್ನು ನಮ್ಮ ಮೇಲೆ ಏಕೆ ಹೇರಿಕೆ ಮಾಡಿದರು ಎನ್ನುವುದಕ್ಕೆ ಕೆಳಗಿನ ಕೆಲವು ಕಾರಣಗಳನ್ನ ನೀಡಬಹುದು.
- ಡಿಸೆಂಬರ್ ಕ್ರಿಶ್ಚಿಯನ್ನರ ಬಹು ದೊಡ್ಡ ಹಬ್ಬ ಕ್ರಿಸ್ಮಸ್ ಹಬ್ಬದ ತಿಂಗಳು. ಹಬ್ಬಕ್ಕೆ ಎಂದು ಅಂದಿನ ಈಸ್ಟ್ ಇಂಡಿಯಾ ಕಂಪನಿಯ ವರಿಷ್ಠ ಅಧಿಕಾರಿಗಳು ಇಂಗ್ಲೆಂಡ್ ಗೆ ಹೊರಟುಹೋಗುತ್ತಿದರು. ಅಳಿದುಳಿದ ಅಧಿಕಾರಿಗಳು ಕೂಡ ಹಬ್ಬದ ವಾತಾವರಣದಲ್ಲಿ ಕೆಲಸ ಮಾಡುವ ಉತ್ಸುಕತೆ ತೋರುತ್ತಿರಲಿಲ್ಲ. ಹೀಗಾಗಿ ವರ್ಷಾಂತ್ಯದಲ್ಲಿ ಮಾಡಲೇಬೇಕಾದ ಸ್ಟಾಕ್ ಟೇಕಿಂಗ್ ನಿಂದ ಹಿಡಿದು ಹಣಕಾಸು ಪುಸ್ತಕಗಳನ್ನ ಅಖೈರು ಗೊಳಿಸುವ ಹಲವು ಕೆಲಸಗಳನ್ನ ಮಾಡಲು ವೇಳೆ ಸಾಲುತ್ತಿರಲಿಲ್ಲ . ಹೀಗಾಗಿ ಕ್ಯಾಲೆಂಡರ್ ಇಯರ್ ಅನ್ನು ಹಣಕಾಸು ವರ್ಷ ಎಂದು ಅವರು ಒಪ್ಪಿಲ್ಲದೆ ಇರಬಹುದು.
- ಬ್ರಿಟಿಷರ ಮುಖ್ಯ ಗುರಿ ನಮ್ಮ ಜನರಿಂದ ತೆರಿಗೆ ವಸೂಲಿ ಮಾಡಿ ತಮ್ಮ ಆದ್ಯ ಹೆಚ್ಚಿಸಿಕೊಳ್ಳುವುದು. ಅಂದಿನ ಮಟ್ಟಿಗೆ ಕೃಷಿ ನಮ್ಮ ಪ್ರಧಾನ ಆದಾಯ ಮೂಲವಾಗಿತ್ತು. ಮಳೆಯನ್ನೇ ನಂಬಿ ಬದುಕುತ್ತಿದ್ದ ದಿನಗಳವು. ದೇಶದ ಬಹು ಮುಖ್ಯ ಬೆಳೆಗಳು ಬರುತ್ತಿದ್ದದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ. ಹಣಕಾಸು ವರ್ಷವನ್ನ ಮಾರ್ಚ್ ತಿಂಗಳಿಗೆ ಅಖೈರು ಗೊಳಿಸುವುದರಿಂದ ಏಪ್ರಿಲ್ ತಿಂಗಳಲ್ಲಿ ಕಳೆದ ವರ್ಷದ ಬೆಳೆಯ ಮೇಲಿನ ತೆರಿಗೆಯನ್ನ ವಸೂಲಿ ಮಾಡಲು ಅವರಿಗೆ ಸುಲಭವಾಗುತಿತ್ತು. ಜನರ ಕೈಲೂ ತೆರಿಗೆ ಕಟ್ಟಲು ಹಣವಿರುತ್ತಿತ್ತು.
- ನಮ್ಮ ದೇಶದ ಬಹುತೇಕ ರಾಜ್ಯಗಳು ಮಾರ್ಚ್/ ಏಪ್ರಿಲ್ ತಿಂಗಳಲ್ಲಿ ಬರುವ ಹಬ್ಬವನ್ನ ಹೊಸ ವರ್ಷದ ಆರಂಭ ಎನ್ನುವಂತೆ ಆಚರಿಸುತ್ತೇವೆ. ನಾವು ಎಂದೂ ಜನವರಿ ಯಿಂದ ಡಿಸೆಂಬರ್ ತಿಂಗಳನ್ನ ನಮ್ಮ ವರ್ಷವೆಂದು ಒಪ್ಪಿದವರೇ ಅಲ್ಲ. ನಮಗೆ ನಮ್ಮದೇ ಅದ ಕ್ಯಾಲೆಂಡರ್ ಇತ್ತು. ಇಂದಿಗೂ ಹಲವು ಮನೆಗಳಲ್ಲಿ ತಿಂಗಳುಗಳಿಗೆ ಬೇರೆ ಹೆಸರನ್ನ ಇತ್ತು ಕರೆಯುವುದು ಕೇಳಬಹುದು. ಬ್ರಿಟಿಷರು ನಮ್ಮ ಭಾವನೆಯನ್ನ ಬಂಡವಾಳ ಮಾಡಿಕೊಂಡಿರಲು ಕೂಡ ಸಾಕು.
- ನಮ್ಮ ದೇಶದ ಹಣಕಾಸು ನೀತಿಗಳ ನಿಯಂತ್ರಿಸುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಜಾರಿಗೆ ಬಂದದ್ದು ಏಪ್ರಿಲ್ 1, 1935. ನಮ್ಮ ದೇಶದ ಬಹು ಮುಖ್ಯ ಹಣಕಾಸು ಸಂಸ್ಥೆ ಏಪ್ರಿಲ್ ನಲ್ಲಿ ಆರಂಭವಾಗಿ ತನ್ನ ಹನ್ನೆರಡು ತಿಂಗಳ (ವರ್ಷದ ) ವಹಿವಾಟು ಮಾರ್ಚ್ ಗೆ ಕೊನೆಗಳಿಸುತಿತ್ತು. ಹೀಗಾಗಿ ಬದಲಾವಣೆಯ ಅವಶ್ಯಕತೆ ಅಥವಾ ಬದಲಾಯಿಸಬೇಕು ಎನ್ನುವ ಯೋಚನೆ ಕೂಡ ಯಾರಿಗೂ ಬರಲಿಲ್ಲ.
ಎಲ್ಲೇಲ್ಲಿ ಹೇಗೇಗೆ?
ನಮ್ಮ ನೆರೆಯ ಪಾಕಿಸ್ತಾನ 1 ಜುಲೈ ನಿಂದ 30 ನೇ ಜೂನ್ ಅನ್ನು ಹಣಕಾಸು ವರ್ಷ ಎಂದು ಪರಿಗಣಿಸುತ್ತದೆ. ನೇಪಾಳ 16 ಜುಲೈ ನಿಂದ 15 ಜುಲೈ ಭೂತಾನ್ 1 ಜುಲೈ ನಿಂದ 3೦ ಜೂನ್ , ಶ್ರೀಲಂಕಾ ಕ್ಯಾಲೆಂಡರ್ ಇಯರ್ ಅಂದರೆ ಜನವರಿ ಯಿಂದ ಡಿಸೆಂಬರ್ ಅನ್ನು ಹಣಕಾಸು ವರ್ಷ ಎಂದು ಒಪ್ಪಿಕೊಂಡಿದೆ. ಜಗತ್ತಿನ ಹಿರಿಯಣ್ಣ ಅಮೇರಿಕಾ 1 ಅಕ್ಟೋಬರ್ ನಿಂದ 3೦ ಸೆಪ್ಟೆಂಬರ್. ಯುನೈಟೆಡ್ ಕಿಂಗ್ಡಮ್ 6 ಏಪ್ರಿಲ್ ನಿಂದ ೫ ಏಪ್ರಿಲ್ ಅನ್ನು ಹಣಕಾಸು ವರ್ಷಗಳನ್ನಾಗಿ ಸ್ವೀಕರಿಸಿವೆ.
ಫ್ರಾನ್ಸ್, ಜೆರ್ಮನಿ, ಸ್ಪೇನ್, ಫಿನ್ಲ್ಯಾಂಡ್, ಡೆನ್ಮಾರ್ಕ್, ಇಟಲಿ, ಪೋರ್ಚುಗಲ್ ಮುಂತಾದವು ಕ್ಯಾಲೆಂಡರ್ ಇಯರ್ ಮತ್ತು ಫೈನಾಸಿಯಲ್ ಇಯರ್ ಎರಡು ಒಂದೇ ಎಂದ ಪ್ರಮುಖ ದೇಶಗಳು.
ಯಾವುದು ಸರಿ? ಕ್ಯಾಲೆಂಡರ್ ಇಯರ್ ಅಥವಾ ಫೈನಾಸಿಯಲ್ ಇಯರ್?
ಈ ಪ್ರಶ್ನೆಗೆ ಉತ್ತರ ಒಬ್ಬಬ್ಬರಿಗೆ ಒಂದೊಂದು ರೀತಿ. ಹಲವರದು ಸೀಸನಲ್ ಬಿಸಿನೆಸ್ ಇರುತ್ತದೆ. ಕ್ಯಾಲೆಂಡರ್ ಇಯರ್ ಉಪಯೋಗಿಸುವುದರಿಂದ ಅವರ ಮಾರಾಟ ಅಲ್ಲಿಷ್ಟು ಇಲ್ಲಿಷ್ಟು ವರ್ಗಾವಣೆ ಆಗಬಹುದು. ಹಾಗಾಗಿ ಆದಾಯ ಕೂಡ ಹಂಚಿ ಹೋಗುತ್ತದೆ. ಆದರೆ ಖರ್ಚು ಪೂರ್ತಿ ಇದೆ ವರ್ಷಕ್ಕೆ ಹಾಕಲೇಬೇಕು. ಆದಾಯ ವ್ಯಯದ ನಿಖರ ಲೆಕ್ಕ ಅಲ್ಲಿ ಸಿಗದೇ ಹೋಗಬಹದು. ಇನ್ನು ಕೆಲವರಿಗೆ ಕ್ಯಾಲೆಂಡರ್ ಇಯರ್ ಮತ್ತು ಹಣಕಾಸು ವರ್ಷ ಎರಡೂ ಒಂದೇ ಅಂದರೆ ಕುಡಿದಷ್ಟು ಸಂತೋಷ ಆಗಬಹುದು. ಕಳೆದ 150 ವರ್ಷಗಳಿಂದ ಒಂದು ವ್ಯವಸ್ಥೆಗೆ ಒಗ್ಗಿಕೊಂಡಿರುವ ನಾವು ಬದಲಾವಣೆಗೆ ಅಷ್ಟು ಬೇಗ ಒಪ್ಪುವರಲ್ಲ. ಫೀಸ್ಕಲ್ ಇಯರ್ ಅಂದರೆ 12 ತಿಂಗಳ ಒಂದು ವರ್ಷ. ಆ ತಿಂಗಳಲ್ಲಿ ಮಾಡಿದ ವ್ಯಾಪಾರ ವಹಿವಾಟಿನ ಮೇಲೆ ತೆರಿಗೆ ಕಟ್ಟಬೇಕು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇಂದ್ರ ಸರಕಾರ ಬಜೆಟ್ ಘೋಷಣೆ ಜನವರಿ ಅಥವಾ ಫೆಬ್ರವರಿ ಯಲ್ಲಿ ಮಾಡಲು ನಿರ್ಧರಿಸಿದಂತಿದೆ ಹೀಗಾಗಿ ಕ್ಯಾಲೆಂಡರ್ ಇಯರ್ ಅನ್ನೆ ಫೈನಾಸಿಯಲ್ ಇಯರ್ ಎಂದು ಕರೆಯುವುದು ಉತ್ತಮ. ಸದ್ಯಕ್ಕೆ ಇದನ್ನ ಅಡಾಪ್ಟ್ ಮಾಡಿಕೊಳ್ಳಲು ಸಾಫ್ಟ್ವೇರ್ ಚೇಂಜ್ ನಿಂದ ಹಿಡಿದು ಜನರ ಮಾನಸಿಕ ಬದಲಾವಣೆ ಕೂಡ ಆಗಬೇಕಿದೆ. ಡಿಮೋನಿಟೈಸಷನ್ ನನ್ನೇ ಅಪ್ಪಿಕೊಂಡ ನಮಗೆ ಕ್ಯಾಲೆಂಡರ್ ಇಯರ್ ಗೆ ಬದಲಾಗಲು ಅಷ್ಟೊಂದು ಸಂಘರ್ಷ ಕಂಡು ಬರಲಾರದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ