ಯಾವುದು ಉತ್ತಮ: ಬಾಡಿಗೆ ಮನೆಯೇ ಅಥವಾ ಸ್ವಂತ ಮನೆ ಖರೀದಿಯೇ?

ಸೈಟು ಖರೀದಿಸಿ ಮನೆ ಕಟ್ಟಿಸಿ ಸ್ವಂತ ಮನೆಯಲ್ಲಿರುವುದು ಒಳ್ಳೆಯದೇ ಅಥವಾ ಬಾಡಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೈಟು ಖರೀದಿಸಿ ಮನೆ ಕಟ್ಟಿಸಿ ಸ್ವಂತ ಮನೆಯಲ್ಲಿರುವುದು ಒಳ್ಳೆಯದೇ ಅಥವಾ ಬಾಡಿಗೆ ಮನೆಯಲ್ಲಿರುವುದು ಒಳ್ಳೆಯದೇ ಎಂಬ ಸಂದೇಹ, ಪ್ರಶ್ನೆ ಹಲವರಲ್ಲಿ ಬಂದಿರಬಹುದು. ಮೆಟ್ರೊ ನಗರಗಳಲ್ಲಿ ಬದುಕುತ್ತಿರುವ ಮಧ್ಯಮ ವರ್ಗದ ಜನರಲ್ಲಿ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ.

ಸ್ವಂತ ಮನೆ ಹೊಂದುವುದು ಸಾಮಾಜಿಕ ಭದ್ರತೆಯಾದರೆ ಮತ್ತು ಅದರ ಜೊತೆ ಭಾವನಾತ್ಮಕ ಸಂಬಂಧ ಬೆಸೆದಿರುತ್ತದೆ. ಹಣಕಾಸಿನ ವಿಚಾರ ಬಂದಾಗ ನಮ್ಮ ಆದಾಯ, ವಯಸ್ಸು, ಆಸ್ತಿಯ ವೆಚ್ಚ ಮೊದಲಾದವುಗಳನ್ನು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಆಸ್ತಿ ಖರೀದಿಸುವ ಅಥವಾ ಮನೆ ಕೊಳ್ಳುವ ಮುನ್ನ ಈ ಅಂಶಗಳನ್ನು ಪರಿಗಣಿಸಿದರೆ ಒಳ್ಳೆಯದು.

ಹಣಕಾಸಿನ ಪರಿಶೀಲನೆ ನಡೆಸಿ: ನಿಮ್ಮ ವೈಯಕ್ತಿಕ ಅಥವಾ ಖಾಸಗಿ ಬಳಕೆಗೆ ಅಥವಾ ಹೂಡಿಕೆಗೆ ಇರುವುದೇ ಎಂಬುದನ್ನು ಮೊದಲು ಅರಿಯುವುದು ಒಳಿತು. ನಿಮ್ಮ ಸ್ವಂತ ಬಳಕೆಗೆ ಮನೆ ಖರೀದಿಸುವುದಾದರೆ ಪ್ರತಿ ತಿಂಗಳು ಇಎಂಐ ಕಟ್ಟಿದ ನಂತರ ಎಷ್ಟು ಹಣ ಉಳಿಯುತ್ತದೆ ಎಂದು ನೋಡಿಕೊಳ್ಳಿ. ನಿಮ್ಮ ಇತರ ಹಣಕಾಸಿನ ಬದ್ಧತೆಗಳನ್ನು ಈಡೇರಿಸಲು ಹಣ ಉಳಿಯುತ್ತದೆಯೇ ಎಂದು ನೋಡಿಕೊಳ್ಳಿ. ಉದಾಹರಣೆಗೆ ನಿವೃತ್ತಿ ಯೋಜನೆ, ಶಿಕ್ಷಣದ ವೆಚ್ಚು, ಆರೋಗ್ಯ ಖರ್ಚು ಅಥವಾ ಇನ್ನಿತರ ಹಣಕಾಸಿನ ತುರ್ತು ಖರ್ಚುಗಳನ್ನು ನೋಡಿಕೊಳ್ಳಿ. ನೀವು ತಿಂಗಳು, ತಿಂಗಳು ವೇತನ ಪಡೆಯುವುದಾದರೆ ವರ್ಷಕ್ಕೆ ಏರಿಕೆಯಾಗುವ ನಿಮ್ಮ ವೇತನ ಆಸ್ತಿಯ ವೆಚ್ಚದ ವ್ಯತ್ಯಾಸಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ನೋಡಿಕೊಳ್ಳಿ. ಆಸ್ತಿ ಖರೀದಿಗೆ ಮುನ್ನ ಈ ಎಲ್ಲಾ ಅಂಶಗಳನ್ನು ನೋಡಿಕೊಳ್ಳಬೇಕಾಗುತ್ತದೆ.

ಇಎಂಐ/ಬಾಡಿಗೆ: ನೀವು ಪ್ರತಿ ತಿಂಗಳು ಈಗ ಕಟ್ಟುತ್ತಿರುವ ಬಾಡಿಗೆ ಮತ್ತು ಆಸ್ತಿ ಖರೀದಿಸಿದ ನಂತರ ತಿಂಗಳಿಗೆ ಬರುವ ಇಎಂಐ ಎಷ್ಟಾಗುತ್ತದೆ ಎಂದು ನೋಡಿಕೊಳ್ಳಿ. ಅದು ಭಾರೀ ಅಂತರದಲ್ಲಿದ್ದರೆ ಆಸ್ತಿ ಖರೀದಿಸುವ ಬದಲು ಬಾಡಿಗೆ ಮನೆಯಲ್ಲಿರುವುದು ಒಳ್ಳೆಯದು. ಉದಾಹರಣೆಗೆ ಮೆಟ್ರೊ ನಗರದಲ್ಲಿ ಮನೆಯ ತಿಂಗಳ ಬಾಡಿಗೆ 15ರಿಂದ 18,000ವಿದೆ ಎಂದಿಟ್ಟುಕೊಳ್ಳಿ. ಇಂತಹ ಸಂದರ್ಭದಲ್ಲಿ 75ರಿಂದ 80 ಲಕ್ಷ ವೆಚ್ಚದ ಅಪಾರ್ಟ್ ಮೆಂಟನ್ನು ಖರೀದಿಸುವ ಬದಲು ಬಾಡಿಗೆ ಮನೆಯಲ್ಲಿಯೇ ಮುಂದುವರಿಯುವುದು ಒಳ್ಳೆಯದು, ಏಕೆಂದರೆ 5-10 ವರ್ಷಗಳು ಕಳೆದರೆ ಅಪಾರ್ಟ್ ಮೆಂಟ್ ಗೆ ಸಿಗುವ ಬೆಲೆಗಿಂತ ಬೇರೆ ವಾರ್ಷಿಕ ಹೂಡಿಕೆಗಳಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭ ಬರಬಹುದು.

ಸರಿಯಾದ ಸಮಯದಲ್ಲಿ ಖರೀದಿಸುವುದು: ಆಸ್ತಿ ಖರೀದಿಸುವುದು ಎಂದರೆ ಷೇರು ಖರೀದಿಸಿದಂತೆ. ಸರಿಯಾದ ಸಂದರ್ಭದಲ್ಲಿ ಷೇರು ಖರೀದಿಸಿ ಅದನ್ನು ಸರಿಯಾದ ಸಮಯದಲ್ಲಿ ಮಾರಾಟ ಮಾಡಬೇಕು, ಆಗ ಮಾತ್ರ ಲಾಭ ಪಡೆಯಲು ಸಾಧ್ಯ. ನಿಮ್ಮ ತಿಂಗಳ ಆದಾಯ 70ರಿಂದ 80 ಸಾವಿರವಿದ್ದರೆ 40ರಿಂದ 45 ಲಕ್ಷದೊಳಗಿರುವ ಆಸ್ತಿ ಅಥವಾ ಅಪಾರ್ಟ್ ಮೆಂಟನ್ನು ಖರೀದಿಸಿದರೆ ಒಳ್ಳೆಯದು. ನಿಮ್ಮ ಮನೆಯಲ್ಲಿ ಹೆಚ್ಚು ವರ್ಷಗಳ ಕಾಲ ಇದ್ದರೆ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ.

ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು: ಇಎಂಐ ಮತ್ತು ಬಾಡಿಗೆ ಮೊತ್ತಗಳ ನಡುವಿನ ವ್ಯತ್ಯಾಸಗಳು. ವ್ಯತ್ಯಾಸ ಕಡಿಮೆಯಾಗಿದ್ದರೆ ಆಸ್ತಿ ಖರೀದಿಸುವುದು ಒಳ್ಳೆಯದು.
ಖರೀದಿದಾರರ ವಯಸ್ಸು ಮುಖ್ಯ. ಸಣ್ಣ ವಯಸ್ಸಿನಲ್ಲಿ ಖರೀದಿಸಿದರೆ ಹೆಚ್ಚು ಹಣ ಉಳಿತಾಯ ಮಾಡಬಹುದು.

ಮನೆ ಖರೀದಿಸುವುದೆಂದರೆ ಅದು ದೀರ್ಘಾವಧಿಯ ಯೋಜನೆ. ಮುಂದಿನ 10 ವರ್ಷಗಳಲ್ಲಿ ಎಷ್ಟು ಲಾಭ ಸಿಗಬಹುದು ಎಂದು ನೋಡಿಕೊಳ್ಳಿ.

ವಾರ್ಷಿಕವಾಗಿ ಏರಿಕೆಯಾಗುವ ನಿಮ್ಮ ವೇತನ, ಅಗತ್ಯ ಖರ್ಚುಗಳು, ಮಾರುಕಟ್ಟೆಯಲ್ಲಿ ಮುಂದಿನ 10 ವರ್ಷಗಳಲ್ಲಿ ಏರಿಳಿತ ಇವೆಲ್ಲವುಗಳನ್ನು ನೋಡಿಕೊಳ್ಳಿ.

ಮನೆ ಖರೀದಿಸಲು ಯಾವ ಸಮಯ ಸೂಕ್ತ?: ಮನೆ ಬೆಲೆ ಕಡಿಮೆಯಾಗಿರುವಾಗ ಖರೀದಿ ಮತ್ತು ಆಸ್ತಿಯ ಬೆಲೆ ಏರಿಕೆಯಲ್ಲಿರುವಾಗ ಮಾರಾಟ ಮಾಡುವುದು ಒಳಿತು. ಬಡ್ಡಿದರ ಕಡಿಮೆಯಿರುವಾಗ ಮತ್ತು ಬಾಡಿಗೆ ಹೆಚ್ಚಿರುವಾಗ ಖರೀದಿ ಉತ್ತಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com