ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರು ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಭಾರತದಲ್ಲಿ ಅಭದ್ರತೆಯ ಭೀತಿ ಕಾಡುತ್ತಿದೆಯಂತೆ.
ಭಾರತಕ್ಕೆ ಬಂದರೆ ನನ್ನ ಮೇಲೆ ದಾಳಿ ನಡೆಯಬಹುದು. ಅಭದ್ರತೆಯ ಭೀತಿ ನನ್ನನ್ನು ಕಾಡುತ್ತಿದೆ. ಹೀಗಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ನೀರವ್ ಮೋದಿ ತನ್ನ ವಕೀಲರ ಮೂಲಕ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.
ಒಂದು ವೇಳೆ ನಾನು ಭಾರತಕ್ಕೆ ಬಂದರೆ ನನ್ನ ಜೀವಕ್ಕೆ ಅಪಾಯವಿದೆ. ಕೊಲೆ ಬೆದರಿಕೆ ಕೇಳಿಬಂದಿದೆ. ನನ್ನ ಪ್ರತಿಕೃತಿ ದಹನ ಮಾಡಿದ ಹಲವಾರು ಘಟನೆಗಳು ನಡೆದಿವೆ. ಭದ್ರತಾ ದೃಷ್ಟಿಯಿಂದ ಸದ್ಯದ ಮಟ್ಟಿಗೆ ನಾನು ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ನೀರವ್ ಮೋದಿ ಹೇಳಿದ್ದಾರೆ.
ಇಡಿ ಅಧಿಕಾರಿಗಳು ನೀರವ್ ಕಂಪನಿ, ಆಸ್ತಿಯನ್ನು ವಶಕ್ಕೆ ಪಡೆದಿದ್ದರಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಷ್ಟೇ ಅಲ್ಲದೇ ನೀರವ್ ಬಾಡಿಗೆ ಪಡೆದಿದ್ದ ಜಾಗದ ಮಾಲೀಕರಿಗೆ ಹಣ ಪಾವತಿಸಿಲ್ಲ, ವಜ್ರಾಭರಣಕ್ಕಾಗಿ ಮುಂಗಡ ಹಣ ನೀಡಿದ್ದವರು ತಮ್ಮ ಹಣವನ್ನು ಮರಳಿಸುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಪ್ರಾಣ ಬೆದರಿಕೆ ಇರುವ ಕಾರಣ ನೀರವ್ ಮೋದಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರವಾಲ್ ಅವರು ತಿಳಿಸಿದ್ದಾರೆ.
ರವ್ ಮೋದಿ ಉದ್ದೇಶಪೂರ್ವಕ ಸುಸ್ತಿದಾರನೋ, ಅಲ್ಲವೋ ಎನ್ನುವುದು ಇನ್ನೂ ವಿಚಾರಣೆಯ ಹಂತದಲ್ಲಿದೆ. ಆದರೆ, ಇದಕ್ಕೆ ಮೊದಲೇ ಸಿಬಿಐ, ನನ್ನ ಕಕ್ಷಿದಾರನನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ನಿರ್ಧರಿಸಿಬಿಟ್ಟಿದೆ ಎಂದು ನೀರವ್ ಪರ ವಕೀಲರು ಬೇಸರ ವ್ಯಕ್ತಪಡಿಸಿದರು.