ಜಪಾನ್ 70% ಪ್ರಾಯೋಜಕತ್ವ; 'ಮೇಕ್ ಇನ್ ಇಂಡಿಯಾ' ಪಾಲು ಕಡಿಮೆ!

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಹತ್ತಿಕ್ಕಿ ....
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ/ಟೊಕ್ಯೊ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಹತ್ತಿಕ್ಕಿ ಬುಲೆಟ್ ರೈಲು ಯೋಜನೆಗೆ ಸಾಮಗ್ರಿ ಪೂರೈಕೆಯಲ್ಲಿ  17 ಶತಕೋಟಿ ಡಾಲರ್  ಗುತ್ತಿಗೆ ಮಾಡಿಕೊಳ್ಳಲು ಜಪಾನ್ ನ ಸ್ಟೀಲ್ ಮತ್ತು ಎಂಜಿನಿಯರಿಂಗ್ ಕಂಪೆನಿಗಳು ಉತ್ಸುಕವಾಗಿ ಎಂದು ಮೂಲಗಳು ತಿಳಿಸಿವೆ. ಇದರಿಂದ ಭಾರತದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. 
ಭಾರತದ ಅನೇಕ ತಾಂತ್ರಿಕ ಯೋಜನೆಗಳಿಗೆ ಜಪಾನ್ ಹೂಡಿಕೆ ಮಾಡಿಕೊಂಡು ಬಂದಿದ್ದು, ಇಲ್ಲಿನ ಬುಲೆಟ್ ರೈಲು ಯೋಜನೆಯ ಪ್ರಮುಖ ಉತ್ಪನ್ನಗಳಲ್ಲಿ ಶೇಕಡಾ 70ರಷ್ಟನ್ನು ಜಪಾನ್ ಕಂಪೆನಿಗಳು ಪೂರೈಸಲಿವೆ ಎಂದು ದೆಹಲಿಯಲ್ಲಿನ ಮೂಲಗಳು ತಿಳಿಸಿವೆ.
ಆದರೆ ಪ್ರಧಾನಿ ಮೋದಿಯವರ ಕಚೇರಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ್ದಾರೆ.
ಬುಲೆಟ್ ರೈಲು ಕಾಮಗಾರಿಕೆ ಪ್ರಮುಖ ಸಾಧನಗಳನ್ನು ಪೂರೈಸಲು ಎರಡೂ ರಾಷ್ಟ್ರಗಳು ತಂತ್ರಗಾರಿಕೆ ನಡೆಸುತ್ತಿದ್ದು, ಜುಲೈ ವೇಳೆಗೆ ಯೋಜನೆಯ ಬಗ್ಗೆ ಅನಾವರಣಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರದ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತ ಮತ್ತು ಜಪಾನ್ ರಾಷ್ಟ್ರಗಳು ಬುಲೆಟ್ ರೈಲು ಯೋಜನೆಗೆ ಮಾಡಿಕೊಂಡ ಒಪ್ಪಂದದಲ್ಲಿ ಎರಡು ಪ್ರಮುಖ ಅಂಶಗಳನ್ನು ಅಭಿವೃದ್ಧಿಪಡಿಸಲು ಮಾತುಕತೆಯಾಗಿತ್ತು. ಮೇಕ್ ಇನ್ ಇಂಡಿಯಾ ಮತ್ತು ತಂತ್ರಜ್ಞಾನಗಳ  ವರ್ಗಾವಣೆ. ಈ ಮೂಲಕ ದೇಶದಲ್ಲಿ ಉತ್ಪಾದನೆ ಸೌಲಭ್ಯಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಿ ಜಪಾನ್ ನ ತಂತ್ರಜ್ಞಾನದ ಹಿಡಿತ ಸಾಧಿಸಬಹುದು ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ಹೊಂದಿತ್ತು. 
2019ರಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಸರ್ಕಾರಕ್ಕೆ ದೇಶದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ಒತ್ತಡವೂ ಕೂಡ ಇದೆ. ಈ ಸಂದರ್ಭದಲ್ಲಿ ಜಪಾನ್ ಕಂಪೆನಿಗಳು ಬುಲೆಟ್ ರೈಲು ಕಾಮಗಾರಿಯ ಸಾಮಗ್ರಿಗಳನ್ನು ಪೂರೈಸಲು ಪಾರುಪತ್ಯ ಸಾಧಿಸಲು ನೋಡುತ್ತಿರುವುದು ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ. ಬುಲೆಟ್ ರೈಲು ಯೋಜನೆ ದೇಶಕ್ಕೆ ನಿಷ್ಪ್ರಯೋಜಕವಾಗಿದ್ದು ಇದೇ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬಹುದು ಎಂದು ವಿರೋಧ ಪಕ್ಷಗಳು ಸೇರಿದಂತೆ ಹಲವು ನಾಗರಿಕರು ಕೂಡ ಈಗಾಗಲೇ ಸರ್ಕಾರವನ್ನು ಟೀಕಿಸಿದ್ದಾರೆ.
ಬುಲೆಟ್ ರೈಲಿಗೆ ಬೇಕಾದ ಸಾಧನಗಳ ತಯಾರಿಕೆಯಲ್ಲಿ  ಮತ್ತು ನಿಗದಿತ ಅವಧಿಯೊಳಗೆ ಸಾಧನಗಳ ಪೂರೈಕೆಯಲ್ಲಿ ಭಾರತೀಯ ಕಂಪೆನಿಗಳ ದಕ್ಷತೆಯನ್ನು ಈಗಾಗಲೇ ಜಪಾನ್ ತಂತ್ರಜ್ಞಾನ ಉದ್ಯಮಿಗಳು ಪ್ರಶ್ನಿಸಿದ್ದಾರೆ.
ವಿಶ್ವಬ್ಯಾಂಕ್ ಪ್ರಸ್ತುತ ವ್ಯವಹಾರ ನಡೆಸಲು ಅನುಕೂಲಕರ 190 ದೇಶಗಳ ಪೈಕಿ ಭಾರತಕ್ಕೆ 100ನೇ ಸ್ಥಾನ ನೀಡಿದ್ದು ಇಲ್ಲಿ ಉದ್ಯಮ ಆರಂಭಕ್ಕೆ ಅನುಕೂಲಕರ ವಾತಾವರಣ ಪ್ರಸ್ತುತ ಅಷ್ಟೊಂದು ಉತ್ತಮವಾಗಿಲ್ಲ ಎಂದು ಹೇಳಿದೆ. ಅಲ್ಲದೆ ಬುಲೆಟ್ ರೈಲು ಕಾಮಗಾರಿಕೆ ಜಪಾನ್ ಸರ್ಕಾರದಿಂದ ಸಾಲ ಪಡೆಯುತ್ತಿರುವುದರಿಂದ ತಂತ್ರಜ್ಞಾನ ಪೂರೈಕೆಯ ಬಹುದೊಡ್ಡ ಮೊತ್ತ ಅಲ್ಲಿಗೆ ಲಭ್ಯವಾಗುವ ಸಾಧ್ಯತೆಯಿದೆ.  ಈ ಹಂತದಲ್ಲಿ ಭಾರತದ ಉತ್ಪಾದನೆ ವಲಯಗಳಿಗೆ ದೊಡ್ಡ ಪ್ರಮಾಣದ ಹಂಚಿಕೆ ಸಿಗುವುದು ಕಷ್ಟ ಎನ್ನುತ್ತಾರೆ ನೀತಿ ಆಯೋಗದ ಅಧಿಕಾರಿಯೊಬ್ಬರು.
ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆ ಉದ್ದೇಶ ಉತ್ಪಾದನೆ ವಲಯದ ಹಂಚಿಕೆಯನ್ನು ಭಾರತದಲ್ಲಿ ಡಾಲರ್ 2 ಟ್ರಿಲಿಯನ್ ನಷ್ಟು ಹೆಚ್ಚಿಸಿ 2022ರ ವೇಳೆಗೆ 100 ದಶಲಕ್ಷ ಉದ್ಯೋಗ ಸೃಷ್ಟಿಸುವುದಾಗಿದೆ. ಆದರೆ ಪಂಚವಾರ್ಷಿಕ ಯೋಜನೆ ವರದಿ ಪ್ರಕಾರ, 2016-17ರಲ್ಲಿ ಭಾರತದ ಸರಾಸರಿ ಅಭಿವೃದ್ಧಿ ದರ ಶೇಕಡಾ 17ರಷ್ಟಿದೆ.
ಜಪಾನ್ ಪ್ರಧಾನಿ ಶಿಂಜೊ ಅಬೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬುಲೆಟ್ ರೈಲು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮುಂಬೈಯಿಂದ ಅಹಮದಾಬಾದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com