ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಕನಿಷ್ಟ ಬ್ಯಾಲೆನ್ಸ್ ಖಾತೆಗಳ ಮೇಲಿನ ದಂಡ ಕಡಿತಗೊಳಿಸಿದ ಎಸ್'ಬಿಐ

ಸಾರ್ವಜನಿಕ ವಲಯದ ದೇಶದ ಅತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಕನಿಷ್ಟ ಬ್ಯಾಲೆನ್ಸ್ ಮೇಲಿನ ದಂಡವನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಸಾರ್ವಜನಿಕ ವಲಯದ ದೇಶದ ಅತೀ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಕನಿಷ್ಟ ಬ್ಯಾಲೆನ್ಸ್ ಮೇಲಿನ ದಂಡವನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ. 
ಮೆಟ್ರೊಪೊಲಿಟನ್ ಮತ್ತು ನಗರ ಪ್ರದೇಶಗಳಲ್ಲಿ ತಿಂಗಳಿಗೆ ಸರಾಸರಿ ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆಗಳ ಮೇಲೆ ಈಗಿರುವ ರೂ.50 ಶುಲ್ಕವನ್ನು ರೂ.15 ಗಳಿಗೆ ಸರಕು ಮತ್ತು ಸೇವಾ ತೆರಿಗೆಗಳೊಂದಿಗೆ ಇಳಿಕೆ ಮಾಡಸಿದೆ. ಇದರಿಂದ ಸುಮಾರು 25 ಕೋಟಿ ಎಸ್'ಬಿಐ ಖಾತೆದಾರರಿಗೆ ಪ್ರಯೋಜನವಾಗಲಿದೆ. 
ಇನ್ನು ಅರೆ-ನಗರ ಮತ್ತು ಗ್ರಾಮೀಣ ಕೇಂದ್ರಗಳಲ್ಲಿ ಈ ಶುಲ್ಕವನ್ನು ಈಗಿನ ರೂ.40 ಗಳಿಂದ ಅನುಕ್ರಮವಾಗಿ ರೂ.12 ಮತ್ತು ರೂ.10ಕ್ಕೆ ಸರಕು ಮತ್ತು ಸೇವಾ ತೆರಿಗೆಗಳೊಂದಿಗೆ ಇಳಿಸಲಾಗಿದೆ ಎಂದು ಎಸ್'ಬಿಐ ಮಾಹಿತಿ ನೀಡಿದೆ. 
ಗ್ರಾಹಕರ ಪ್ರತಿಕ್ರಿಯೆಗಳು ಹಾಗೂ ನಮ್ಮ ಗ್ರಾಹಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಖಾತೆ ಮೇಲಿನ ಕನಿಷ್ಟ ಬ್ಯಾಲೆನ್ಸ್ ಮೇಲಿನ ದಂಡವನ್ನು ಕಡಿತಗೊಳಿಸಲಾಗಿದೆ. ಗ್ರಾಹಕರ ಹಿತಾಸಕ್ತಿ ಮೇಲೆ ಬ್ಯಾಂಕ್ ಯಾವಾಗಲೂ ಗಮನ ಹರಿಸುತ್ತದೆ. ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವತ್ತ ಬ್ಯಾಂಕ್ ಸಾಕಷ್ಟು ಕೆಲಸವನ್ನು ಮಾಡುತ್ತಿದೆ ಎಂದು ಎಸ್'ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗುಪ್ತಾ ಅವರು ಹೇಳಿದ್ದಾರೆ. 
ಬ್ಯಾಂಕ್ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರು, ಮೂಲ ಉಳಿತಾಯ ಬ್ಯಾಂಕ್ ಖಾತೆ ಮೇಲೆ ಯಾವುದೇ ದಂಡ ಇಲ್ಲದೇ ಇರುವುದರಿಂದ ತಮ್ಮ ಖಾತೆಗಳನ್ನು ಉಳಿತಾಯ ಬ್ಯಾಂಕ್ ಖಾತೆಯಿಂದ ಬಿಎಸ್ಬಿಡಿ (ಮೂಲ ಉಳಿತಾಯ ಬ್ಯಾಂಕ್ ಖಾತೆ)ಗೆ ಬದಾಲಿಯಿಸಿಕೊಳ್ಳಬಹುದು.
ಎಸ್'ಬಿಐ ನಲ್ಲಿ ರೂ.41 ಕೋಟಿಗಳಷ್ಟು ಉಳಿತಾಯ ಬ್ಯಾಂಕ್ ಖಾತೆಗಳಿದ್ದು, ಇದರಲ್ಲಿ ರೂ.16 ಕೋಟಿ ಖಾತೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ ಧನ್ ಯೋಜನೆ ಮತ್ತು ಮೂಲ ಉಳಿತಾಯ ಬ್ಯಾಂಕ್ ಖಾತೆ ಮತ್ತು ಪಿಂಚಣಿ, ಅಪ್ರಾಪ್ತರು, ಸಾಮಾಜಿಕ ಭದ್ರತೆಯ ಲಾಭವನ್ನು ಪಡೆಯುತ್ತಿರುವ ಗ್ರಾಹಕರಿಗೆ ವಿನಾಯಿತಿಗಳನ್ನು ನೀಡಲಾಗುತ್ತಿದೆ. 21 ವರ್ಷಗಳವರೆಗಿನ ವಿದ್ಯಾರ್ಥಿಗಳಿಗೂ ವಿನಾಯಿತಿಗಳನ್ನು ನೀಡಲಾಗುತ್ತಿದೆ. ಉಳಿತಾಯ ಬ್ಯಾಂಕ್ ಖಾತೆಗಳನ್ನು ಮೂಲ ಉಳಿತಾಯ ಖಾತೆಗಳಿಗೆ ಗ್ರಾಹಕರು ಉಚಿತವಾಗಿ ಪರಿವರ್ತನೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ಬ್ಯಾಂಕ್ ನೀಡಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com