ಉದ್ಯೋಗಾರ್ಹತೆ ಪ್ರಮಾಣ ಶೇ.47 ರಕ್ಕೆ ಜಿಗಿತ
ವಾಣಿಜ್ಯ
ಉದ್ಯೋಗಾರ್ಹತೆ ಪ್ರಮಾಣ ಶೇ.47 ರಕ್ಕೆ ಜಿಗಿತ, ಇಂಜಿನಿಯರ್ ಗಳ ಕಥೆ ಏನು?, ಸದ್ಯಕ್ಕೆ ಹೀಗಿದೆ ಟ್ರೆಂಡ್!
ಭಾರತದಲ್ಲಿ ಉದ್ಯೋಗಾರ್ಹತೆ ಪ್ರಮಾಣ ಶೇ.47 ಕ್ಕೆ ಏರಿಕೆ ಕಂಡಿದ್ದು ಕೇವಲ ಒಂದು ವರ್ಷದಲ್ಲಿ ಶೇ.2-3 ರಷ್ಟು ಏರಿಕೆಯಾಗಿದೆ.
ನವದೆಹಲಿ: ಭಾರತದಲ್ಲಿ ಉದ್ಯೋಗಾರ್ಹತೆ ಪ್ರಮಾಣ ಶೇ.47 ಕ್ಕೆ ಏರಿಕೆ ಕಂಡಿದ್ದು ಕೇವಲ ಒಂದು ವರ್ಷದಲ್ಲಿ ಶೇ.2-3 ರಷ್ಟು ಏರಿಕೆಯಾಗಿದೆ.
ಉದ್ಯೋಗಕ್ಕೆ ಎದುರುನೋಡುತ್ತಿರುವವರ ಪೈಕಿ ಇಂಜಿನಿಯರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಇಂಡಿಯಾ ಸ್ಕಿಲ್ಸ್ ರಿಪೋರ್ಟ್ ವ್ಹೀಬಾಕ್ಸ್, ಪೀಪಲ್ ಸ್ಟ್ರಾಂಗ್, ಸಿಐಐ ಸಹಯೋಗದ ಸಮೀಕ್ಷಾ ವರದಿ ತಿಳಿಸಿದೆ.
ಕಳೆದ 5 ವರ್ಷಗಳಲ್ಲಿ ಉದ್ಯೋಗಾರ್ಹತೆಯ ಪ್ರಮಾಣ ಶೇ.14 ರಷ್ಟು ಏರಿಕೆ ಕಂಡಿದ್ದು 2014 ರಲ್ಲಿ ಶೇ.33 ರಷ್ಟಿದ್ದ ಉದ್ಯೋಗಾರ್ಹತೆ ಈಗ ಶೇ.47 ಕ್ಕೆ ತಲುಪಿದೆ. ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಶೇ.57 ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದಕ್ಕೆ ಅರ್ಹರಾಗಿದ್ದು ಕಳೆದ ವರ್ಷಕ್ಕಿಂತ ಶೇ.5 ರಷ್ಟು ಹೆಚ್ಚಿದ್ದಾರೆ ಎಂದು ವರದಿ ತಿಳಿಸಿದೆ.
ಎಂಬಿಎ ವಿಭಾಗದಲ್ಲಿ ಉದ್ಯೋಗಶೀಲತೆ ಕಳೆದ ವರ್ಷಕ್ಕಿಂತ ಶೇ.3 ರಷ್ಟು ಕಡಿಮೆಯಾಗಿದ್ದು, ನಿರ್ದಿಷ್ಟ ಅಂಕಿ-ಅಂಶ ಲಭ್ಯವಾಗಿಲ್ಲ. ಎಂಬಿಎ ಕಾಲೇಜ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಪ್ರತಿಭೆಗಳ ಗುಣಮಟ್ಟ ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ವೇಳೆ ಬಿಫಾರ್ಮಾ ಪದವೀಧರದಲ್ಲೂ ಉದ್ಯೋಗಶೀಲತೆ ಕುಸಿದಿದೆ.
ಅತ್ಯಂತ ಹೆಚ್ಚು ಉದ್ಯೋಗ ಅವಕಾಶಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಆಂಧ್ರಪ್ರದೇಶ, ರಾಜಸ್ಥಾನ, ಹರ್ಯಾಣ ರಾಜ್ಯಗಳು ಟಾಪ್ 10 ಪಟ್ಟಿಯಲಿದ್ದು, ಗುಜರಾತ್, ಮಧ್ಯಪ್ರದೇಶ, ಪಂಜಾಬ್ ಟಾಪ್ 10 ರ ಪಟ್ಟಿಯಿಂದ ಈ ಬಾರಿ ಹೊರಗುಳಿದಿದೆ. ಈ ಬಾರಿ ಟೈರ್-II, III ಹ೦ತದ ನಗರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉದ್ಯೋಗಶೀಲತೆ ಪ್ರಮಾಣ ಶೇ.47 ರಷ್ಟು ಹೆಚ್ಚಿರುವುದು ನಿಜಕ್ಕೂ ಮಾರುಕಟ್ಟೆಗೆ ಉತ್ತಮವಾದ ಸೂಚನೆಯಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಬೇಕಾಗಿದೆ ಎಂದು ವ್ಹೀಬಾಕ್ಸ್ ಸ್ಥಾಪಕ ಹಾಗೂ ಕಾರ್ಯಕಾರಿ ಅಧಿಕಾರಿ ನಿರ್ಮಲ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ